ಬೆನೋನಿ (ದಕ್ಷಿಣ ಆಫ್ರಿಕಾ): ಐಸಿಸಿ ಅಂಡರ್-19 ವನಿತೆಯರ ಟಿ20 ವಿಶ್ವಕಪ್ (Womens U19 T20 World Cup) ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಶನಿವಾರ ಆರಂಭಗೊಂಡಿದೆ. ಈ ಚೊಚ್ಚಲ ವಿಶ್ವಕಪ್ ಟೂರ್ನಿ ಜ. 29ರ ತನಕ ಸಾಗಲಿದೆ. ಮೊದಲ ದಿನವೇ ಶಫಾಲಿ ಸಾರಥ್ಯದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ.
ಶನಿವಾರದ ‘ಡಿ’ ವಿಭಾಗದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮುಖಾಮುಖಿಯಾಗಲಿದೆ. ವಿಶ್ವ ಕಪ್‌ಗ್ೂ ಮುನ್ನ ಭಾರತದ ವಿರುದ್ಧ ಆಡಲಾದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಮುಖ ಕಂಡಿರಲಿಲ್ಲ. ಆದರೆ ತವರಿನ ಪಂದ್ಯಾವಳಿಯಾದ್ದರಿಂದ ಹರಿಣಗಳ ಪಡೆಯನ್ನು ಕಡೆಗಣಿಸುವಂತಿಲ್ಲ. ಅಭ್ಯಾಸ ಪಂದ್ಯದಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ತೋರದಿದ್ದರೂ ಮಹತ್ವದ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಸ್ಪರ್ಧಿಸಬಹುದು ಎಂದು ನಿರೀಕ್ಷೆಯೊಂದನ್ನು ಇರಿಸಲಾಗಿದೆ.
ಮಿಂಚಬೇಕು ಶಫಾಲಿ
ಈಗಾಗಲೇ ಸೀನಿಯರ್ ತಂಡದಲ್ಲಿ ಟಿ20 ವಿಶ್ವ ಕಪ್ ಆಡಿರುವ “ಲೇಡಿ ಸೆಹವಾಗ್’ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಮತ್ತು ರಿಚಾ ಘೋಷ್ ಉತ್ತಮ ಪ್ರದರ್ಶನ ತೋರಬೇಕಿದೆ. ಅಭ್ಯಾಸ ಪಂದ್ಯದಲ್ಲಿ ಉಭಯ ಆಟಗಾರ್ತಿಯರು ತೀರಾ ಕಳಪೆ ಪ್ರದರ್ಶನ ತೋರಿದ್ದರು. ಆದರೆ ಈ ಪಂದ್ಯದಲ್ಲಿ ಇವರಿಬ್ಬರೂ ಮುಂಚೂಣಿಯಲ್ಲಿ ನಿಂತು ಜವಾಬ್ದಾರಿಯುತ ಆಡವಾಡುವುದು ಮುಖ್ಯ.
ಚೊಚ್ಚಲ ಅಂಡರ್-19 ವಿಶ್ವ ಕಪ್ ಆಡುತ್ತಿರುವ ಭಾರತ ಮಹಿಳಾ ತಂಡಕ್ಕೆ ಸೀನಿಯರ್ ತಂಡದ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧಾನಾ, ಮಾಜಿ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ, ಮಿಥಾಲಿ ರಾಜ್ ಸೇರಿದಂತೆ ಹಲವು ಕ್ರಿಕೆಟ್ ಆಟಗಾರ್ತಿರು ಶುಭ ಹಾರೈಸಿದ್ದಾರೆ.
ಭಾರತ ತಂಡ
ಶಫಾಲಿ ವರ್ಮ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿ.ಕೀ.), ಜಿ. ತಿೃಷಾ, ಸೌಮ್ಯಾ ತಿವಾರಿ, ಸೋನಿಯಾ ಮೆಹಿಯ, ಹರ್ಲಿ ಗಾಲಾ, ರಿಷಿತಾ ಬಸು (ವಿ.ಕೀ.), ಸೋನಂ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ತೀತಾಸ್ ಸಾಧು, ಫಲಕ್ ನಾಝ್, ಶಬ್ನಂ.
ಪಂದ್ಯ ಆರಂಭ: ಸಂಜೆ 5.15(ಭಾರತೀಯ ಕಾಲಮಾನ)