Site icon Vistara News

WPL 2024 : ಚಾಂಪಿಯನ್​ ಆರ್​ಸಿಬಿಗೆ ಸಿಕ್ಕ ಬಹುಮಾನವೆಷ್ಟು? ಉಳಿದವರಿಗೆಷ್ಟು? ಇಲ್ಲಿದೆ ಎಲ್ಲ ವಿವರ

RCB won

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಸೋಫಿ ಮೊಲಿನೆಕ್ಸ್ ತನ್ನ ತ್ರಿವಳಿ ವಿಕೆಟ್ ಓವರ್​​ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ 18.1 ಓವರ್​ಗಳಲ್ಲಿ ಕೇವಲ 113 ರನ್​​ಗಳಿಗೆ ಆಲೌಟ್ ಆಯಿತು.

ಇದು ಆರ್​ಸಿಬಿ ತಂಡದ ಪಾಲಿಗೆ ಅತ್ಯಂತ ಸ್ಮರಣಿಯ ದಿನವಾಗಿದೆ. 16 ವರ್ಷಗಳಿಂದ ಪುರುಷರ ತಂಡ ಒಂದೇ ಒಂದು ಕಪ್​ ಗೆಲ್ಲದೇ ಹೋದರೂ ಮಹಿಳೆಯರು ಎರಡನೇ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟ ಪಡೆದು ಶ್ರೇಷ್ಠತೆಯನ್ನು ಮೆರೆಯಿತು.

ಸೋಫಿ ಡಿವೈನ್ (27 ಎಸೆತಗಳಲ್ಲಿ 32 ರನ್), ಸ್ಮೃತಿ ಮಂದಾನ (39 ಎಸೆತಗಳಲ್ಲಿ 31 ರನ್), ಎಲಿಸ್ ಪೆರ್ರಿ (37 ಎಸೆತಗಳಲ್ಲಿ 35* ರನ್) ಮತ್ತು ರಿಚಾ ಘೋಷ್ (14 ಎಸೆತಗಳಲ್ಲಿ 17* ರನ್) ಅವರ ಅಮೂಲ್ಯ ಕೊಡುಗೆಗಳಿಂದ ಆರ್​ಸಿಬಿ 19.3 ಓವರ್​ಗಳಲ್ಲಿ ಸುಲಭವಾಗಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಆರ್​ಸಿಬಿ ಮಹಿಳಾ ತಂಡ ಟ್ರೋಫಿಯ ಬರವನ್ನು ಕೊನೆಗೊಳಿಸಿತು. ಡಬ್ಲ್ಯುಪಿಎಲ್​ನ ಎರಡನೇ ಋತುವಿನ ವಿಜೇತರಾಗಿ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿಟ್ಟಿತು. ಅಲ್ಲದೇ ಟ್ರೋಫಿಯೊಂದಿಗೆ 6 ಕೋಟಿ ರೂಪಾಯಿ ಬಹುಮಾನವನ್ನೂ ಪಡೆಯಿತು. ಹಾಗಾದರೆ ಟೂರ್ನಿಯಲ್ಲಿ ವಿವಿಧ ತಂಡಗಳು ಗೆದ್ದ ಮೊತ್ತವೆಷ್ಟು ಎಂಬುದನ್ನು ವಿವರವಾಗಿ ನೋಡೋಣ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಾಂಪಿಯನ್​ ಆರ್​​ಸಿಬಿ ಮಹಿಳೆಯರು ಯುವ ಅಥ್ಲೀಟ್​​ಗಳಿಗೆ ಪ್ರೇರಣೆ

ಇಲ್ಲಿದೆ ಬಹುಮಾನಗಳ ವಿವರ

  1. ಚಾಂಪಿಯನ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು – 6 ಕೋಟಿ ರೂ.
  2. ರನ್ನರ್ ಅಪ್: ಡೆಲ್ಲಿ ಕ್ಯಾಪಿಟಲ್ಸ್- 3 ಕೋಟಿ ರೂ.
  3. ಪಂದ್ಯಶ್ರೇಷ್ಠ: ಸೋಫಿ ಮೊಲಿನೆಕ್ಸ್ -(3/20) 4 ಓವರ್ ಗಳು
  4. ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಗಳು: ಶೆಫಾಲಿ ವರ್ಮಾ (3 ಸಿಕ್ಸರ್)- 1 ಲಕ್ಷ ರೂ.
  5. ಪಂದ್ಯದ ಎಲೆಕ್ಟ್ರಿಕ್ ಸ್ಟ್ರೈಕರ್: ಶೆಫಾಲಿ ವರ್ಮಾ (ಸ್ಟ್ರೈಕ್ ರೇಟ್ – 162.96) 1 ಲಕ್ಷ ರೂ.
  6. ಋತುವಿನ ಉದಯೋನ್ಮುಖ ಆಟಗಾರ್ತಿ: ಶ್ರೇಯಂಕ ಪಾಟೀಲ್- 5 ಲಕ್ಷ ರೂ.
  7. ಋತುವಿನ ಅತಿ ಹೆಚ್ಚು ಸಿಕ್ಸರ್ ಗಳು: ಶೆಫಾಲಿ ವರ್ಮಾ (20 ಸಿಕ್ಸರ್)- 5 ಲಕ್ಷ ರೂ.
  8. ಪರ್ಪಲ್ ಕ್ಯಾಪ್: ಶ್ರೇಯಾಂಕಾ ಪಾಟೀಲ್ (13 ವಿಕೆಟ್, 8 ಇನ್ನಿಂಗ್ಸ್)- 5 ಲಕ್ಷ ರೂ.
  9. ಆರೆಂಜ್ ಕ್ಯಾಪ್ : ಎಲಿಸ್ ಪೆರ್ರಿ (347 ರನ್, 9 ಇನ್ನಿಂಗ್ಸ್) – 5 ಲಕ್ಷ ರೂ.
  10. ಅತ್ಯಂತ ಮೌಲ್ಯಯುತ ಆಟಗಾರ್ತಿ- ದೀಪ್ತಿ ಶರ್ಮಾ (295 ರನ್, 10 ವಿಕೆಟ್)- 5 ಲಕ್ಷ ರೂ.
  11. ಫೇರ್​ಪ್ಲೇ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
Exit mobile version