Site icon Vistara News

WTC Point Table : ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಬಳಿಕ ಪಾಯಿಂಟ್ ಟೇಬಲ್​ನಲ್ಲಿ ಭಾರತದ ಸ್ಥಾನವೆಷ್ಟು?

Team india

ಧರ್ಮಶಾಲಾ: ಇಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 64 ರನ್​ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಹೈದರಾಬಾದ್​ನಲ್ಲಿ ನಡೆದ ಆರಂಭಿಕ ಟೆಸ್ಟ್​ನಲ್ಲಿ ಸೋತ ನಂತರ ಭಾರತವು ಮುಂದಿನ ನಾಲ್ಕು ಪಂದ್ಯಗಳನ್ನು ನಿರಾಯಸವಾಗಿ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನ ಪಾಯಿಂಟ್ಸ್ ಟೇಬಲ್​​ನಲ್ಲಿ (WTC Point Table) ಅಗ್ರಸ್ಥಾನದಲ್ಲಿದೆ. ಜತೆಗೆ ಈ ಗೆಲುವಿನೊಂದಿಗೆ ಅಂಕಗಳ ಶೇಕಡಾವಾರು ಅನುಪಾತವನ್ನು ಸುಧಾರಿಸಿಕೊಂಡಿದೆ.

118.67ರ ಸರಾಸರಿಯಲ್ಲಿ 712 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಧರ್ಮಶಾಲಾದಲ್ಲಿ ನಡೆದ ಮೊದಲ ಇನ್ನಿಂಗ್ಸ್​ನಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 72 ರನ್​ಗೆ 5 ವಿಕೆಟ್ ಪಡೆದ ಕಾಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತವು ಎಲ್ಲಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಇಂಗ್ಲೆಂಡ್ ಅನ್ನು ಸಂಪೂರ್ಣವಾಗಿ ಕಳೆಗುಂದುವಂತೆ ಮಾಡಿತು. ಅಂತಿಮ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ರೋಹಿತ್ ಶರ್ಮಾ 103 ರನ್ ಗಳಿಸಿದರು. ಬೌಲಿಂಗ್ ವಿಭಾಗವನ್ನು ರವಿಚಂದ್ರನ್ ಅಶ್ವಿನ್ ಮುನ್ನಡೆಸಿದರು.

ಕ್ರೈಸ್ಟ್​ಚರ್ಚ್​​ನ ಹ್ಯಾಗ್ಲಿ ಓವಲ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​​ನತ್ತ ಈಗ ಗಮನ ಕೇಂದ್ರೀಕರಣಗೊಂಡಿದೆ. ಅದೇ ರೀತಿ ಭಾರತಕ್ಕೆ ಮುಂಬರುವ ಟೆಸ್ಟ್​​ ಸವಾಲುಗಳು ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಎದುರಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡ ರೋಹಿತ್ ಶರ್ಮಾ ಪಡೆಗೆ ನಿರ್ಣಾಯಕವಾಗಲಿದೆ.

ಇದನ್ನೂ ಓದಿ : Ind vs Eng : ಬೌಲ್ಡ್​​ ಆದ ಬಳಿಕ ಡಿಆರ್​ಎಸ್​​ಗೆ ಮನವಿ ಮಾಡಿದ ಬಶೀರ್​; ಬಿದ್ದು ಬಿದ್ದು ನಕ್ಕ ರೂಟ್​!

ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ

ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಭಾರತ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಭಾರತ ಒಟ್ಟು 12 ನಿರ್ಣಾಯಕ ಅಂಕಗಳನ್ನು ತನ್ನ ಖಾತೆಗೆ ಸೇರಿಕೊಂಡಿದೆ. ಒಟ್ಟಾರೆ 74 ಅಂಕಗಳನ್ನು ಪಡೆದಿದೆ. ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು, 2 ಸೋಲು ಹಾಗೂ 1 ಡ್ರಾ ಸಾಧಿಸಿರುವ ರೋಹಿತ್ ಶರ್ಮಾ ಪಡೆ 68.51ರ ಸರಾಸರಿಯಲ್ಲಿ ಅಗ್ರಸ್ಥಾನದಲ್ಲಿದೆ. ಏತನ್ಮಧ್ಯೆ, ಇಂಗ್ಲೆಂಡ್ ಇದುವರೆಗೆ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ ಆರು ಮುಖಾಮುಖಿಗಳಲ್ಲಿ ಸೋಲುಗಳನ್ನು ಎದುರಿಸಿದೆ. 17.50 ಪಾಯಿಂಟ್​ನೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಭಾರತ ತಂಡಕ್ಕಿಂತ ಸ್ವಲ್ಪ ಕೆಳಗಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರಸ್ತುತ ನಡೆಯುತ್ತಿರುವ ಸರಣಿಯ ಅಂತ್ಯದ ವೇಳೆಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಎದುರು ನೋಡುತ್ತಿವೆ.

Exit mobile version