Site icon Vistara News

Yoga Day 2022 | ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯಾಗಿದ್ದು ಹೇಗೆ?

Dasara 2022

ರಾಮಸ್ವಾಮಿ ಹುಲಕೋಡು
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಾಕ್ರಮ ಈ ಬಾರಿ ನಮ್ಮ ಸಾಂಸ್ಕೃತಿಕ ನಗರಿ, ಯೋಗ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಇಡೀ ಜಗತ್ತು ಮೈಸೂರಿನತ್ತ ನೋಡುತ್ತಿದೆ.

18ನೇ ಶತಮಾನದಲ್ಲಿ ರಚಿತವಾದ ಈ ಯೋಗದ ಪೇಂಟಿಂಗ್‌ ಮೈಸೂರು ಶೈಲಿಯಲ್ಲಿದೆ. ಇದು ಮೈಸೂರಿನಲ್ಲಿ ಲಭ್ಯವಾಗಿದೆ.

ಮೈಸೂರು ಕರ್ನಾಟಕದಲ್ಲಿ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಂಡರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಯೋಗ ನಗರಿಯೆಂದೇ ದೊಡ್ಡ ಹೆಸರಿದೆ. ಇದಕ್ಕೆ ಕಾರಣ ಇಂದು ಮೈಸೂರಿನಲ್ಲಿ ತರಬೇತಿ ಪಡೆದ ಯೋಗ ಪಟುಗಳು ವಿಶ್ವದಾದ್ಯಂತ ಯೋಗವನ್ನು ಪ್ರಚಾರ ಮಾಡುತ್ತಿರುವುದು ಮತ್ತು ಕಲಿಸಲುತ್ತಿರುವುದು. ಯೋಗ ಕಲಿಯಲು ವಿದೇಶಿಗರೂ ಮೈಸೂರಿಗೆ ಆಗಮಿಸುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳು ನಮ್ಮ ಮೈಸೂರಿನಲ್ಲಿವೆ.

ಯೋಗ ಕಲಿಕೆಗೆ ಮೈಸೂರು ಸೂಕ್ತ ನಗರಿ, ”ನೀವು ಭೇಟಿ ನೀಡಲೇ ಬೇಕಾದ ಜಗತ್ತಿನ ಅತ್ಯುತ್ತಮ 31 ತಾಣಗಳ ಪೈಕಿ ಮೈಸೂರು ಕೂಡ ಒಂದು. ಶಾಸ್ತ್ರೀಯವಾಗಿ ಯೋಗ ಕಲಿಯಬೇಕೆಂದರೆ, ಮೈಸೂರಿಗೆ ಖಂಡಿತ ಭೇಟಿ ನೀಡಲೇ ಬೇಕು…” ಎಂದು ನ್ಯೂಯಾರ್ಕ್‌ ಟೈಮ್ಸ್‌ ಏಳು ವರ್ಷದ ಹಿಂದೆಯೇ ಸಮೀಕ್ಷೆಯೊಂದನ್ನು ಆಧರಿಸಿ ಹೇಳಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿಗೆ ಇರುವ ಮಹತ್ವವನ್ನು ತಿಳಿಸುತ್ತದೆ.

ಐತಿಹಾಸಿಕ ನಂಟು!

ಮೈಸೂರಿಗೂ ಯೋಗಕ್ಕೂ ಐತಿಹಾಸಿಕ ನಂಟಿದೆ. ಸರಿಸುಮಾರು 225 ವರ್ಷಗಳಿಂದ ಮೈಸೂರು ರಾಜ ಮನೆತನವು ಯೋಗವನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶ್ರೀತತ್ತ್ವನಿಧಿಯಲ್ಲಿ ಯೋಗಾಸನದ 122 ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ೧೮ನೇ ಶತಮಾನದ್ದೆಂದು ಹೇಳಲಾದ ಯೋಗದ ಕಲಾಕೃತಿ (ಪೇಂಟಿಂಗ್‌) ಯೋಗದ ಪ್ರಚಾರಕ್ಕೆ ರಾಜಮನೆತನ ಎಷ್ಟು ಪ್ರಾಮುಖ್ಯತೆ ನೀಡುತ್ತಿತ್ತು ಎಂಬುದು ಸಾಬೀತಾಗುತ್ತದೆ. 

ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ರಚಿತ ಪುಸ್ತಕ ಶ್ರೀತತ್ತ್ವನಿಧಿ
ಮೈಸೂರು ಅರಮನೆ ಪ್ರಕಟಿಸಿದ ವ್ಯಾಯಾಮ ದೀಪಿಕಾ ಕೃತಿ

ಯೋಗವನ್ನು ಪ್ರೋತ್ಸಾಹಿಸಲು ರಾಜ ಮನೆತನ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ ೧೮೯೭ಕ್ಕಿಂತ ಮೊದಲು ತೆಗೆದುಕೊಂಡ ಕ್ರಮಗಳ ಕುರಿತು ಸರಿಯಾದ ದಾಖಲೆಗಳಿಲ್ಲ. ಏಕೆಂದರೆ ೧೮೯೭ರ ಫೆಬ್ರವರಿ ೨೮ರಂದು ಅರಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತ ಎಲ್ಲ ದಾಖಲೆಗಳನ್ನೂ ಆಹುತಿ ತೆಗೆದುಕೊಂಡಿದೆ. ಉಳಿದಿರುವುದೆಂದರೆ ಶ್ರೀತತ್ತ್ವನಿಧಿ ಕೃತಿ ಮಾತ್ರ.

ಮುಂದೆ, 1930ರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ತೀರ್ಮಾನ ತೆಗೆದುಕೊಂಡು ಮೈಸೂರು ಅರಮನೆಯಲ್ಲಿಯೇ ಯೋಗ ಶಾಲೆಯೊಂದನ್ನು ಆರಂಭಿಸಿದ್ದರು. ಇದು ಯೋಗ ಶಿಕ್ಷಣ ಪ್ರಚಾರಕ್ಕೆ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿತು. ಇದೇ ಸಂದರ್ಭದಲ್ಲಿ ಅರಮನೆಯ ಯೋಗಪಟುಗಳು ಸಿದ್ಧಪಡಿಸಿದ ʼಯೋಗ ದೀಪಿಕಾʼಎಂಬ ಕೃತಿಯನ್ನು ಅರಮನೆ ಪ್ರಕಟಿಸಿದ್ದು, ಇದು ಯೋಗದ ಕುರಿತು ಹೆಚ್ಚಿನ ಮಾಹಿತಿ ನೀಡಿತ್ತು.

ಯೋಗ ಗುರು ಕೃಷ್ಣಮಾಚಾರ್ಯರು

ಈ ಯೋಗ ಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸಲು ನೇಮಕಗೊಂಡವರು ತಿರುಮಲೈ ಕೃಷ್ಣಮಾಚಾರ್ಯರು. ಇವರನ್ನು ಮುಂದೆ “ಆಧುನಿಕ ಯೋಗದ ಪಿತಾಮಹʼʼ ಎಂದೇ ಕರೆಯಲಾಯಿತು. ಅವರು ಯೋಗವನ್ನು ಜನಪ್ರಿಯಗೊಳಿಸಿದರು. ಇವರಿಗೆ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್‌ ಎಲ್ಲ ರೀತಿಯ ನೆರವು ನೀಡಿದರು. ಈ ಯಾಗ ಶಾಲೆಯನ್ನು ಸ್ವತಂತ್ರ ಇನ್‌ಸ್ಟಿಟ್ಯೂಟ್‌ ಆಗಿ ರೂಪಿಸುವಂತೆ ಸಲಹೆ ಕೂಡ ನೀಡಿದರು. ಹೀಗಾಗಿ ಯೋಗ ಕಲಿಸುವ ದೊಡ್ಡ ಸಂಸ್ಥೆಯಾಗಿ ಈ ಯೋಗಶಾಲೆ ರೂಪಗೊಂಡಿತು. ಈ ಶಾಲೆ ಆರಂಭಿಸಿದ್ದಲ್ಲದೆ, ಯೋಗವನ್ನು ಉತ್ತೇಜಿಸಲು ನಾಲ್ವಡಿ ಒಡೆಯರ್ ಯೋಗದ ರಾಯಭಾರಿಯಾಗಿ ಕೃಷ್ಣಮಾಚಾರ್ಯರನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಿದ್ದರು ಎಂಬುದು ದಾಖಲೆಗಳಿಂದ ತಳಿದು ಬರುತ್ತದೆ. 

ತಿರುಮಲೈ ಕೃಷ್ಣಮಾಚಾರ್ಯರು

ತಿರುಮಲೈ ಕೃಷ್ಣಮಾಚಾರ್ಯರು ಯೋಗದ ಕುರಿತು ಆಳವಾದ ಜ್ಞಾನ ಹೊಂದಿದ್ದರು. ಯಾವ ರೋಗವನ್ನು ಗುಣಪಡಿಸಲು ಯಾವ ಆಸನಗಳು ಸೂಕ್ತ ಎಂಬುದನ್ನು ತಿಳಿದುಕೊಂಡಿದ್ದರು. ದೇಶದ ಬೇರೆ ಬೇರೆ ನಗರಗಳಿಗೆ ತೆರಳಿ ಈ ಕುರಿತು ಉಪನ್ಯಾಸ ನೀಡುತ್ತಿದ್ದರು. ಆಸ್ಥಾನ ವಿದ್ವಾನ್‌, ಮೀಮಾಂಸಾತೀರ್ಥ, ವೇದಾಂತವಾಗೀಶ, ಸಾಂಖ್ಯಯೋಗ ಶಿಖಾಮಣಿ ಮತ್ತಿತರ ಬಿರುದುಗಳನ್ನು ಅವರು ಪಡೆದಿದ್ದರು. “ಯೋಗ ಮಕರಂದ”, “ಯೋಗಾಸನಗಳು”, “ಯೋಗ ರಹಸ್ಯ” ಮತ್ತು “ಯೋಗವಲ್ಲಿ” ಎಂಬ ನಾಲ್ಕು ಕೃತಿಗಳನ್ನು ಅವರು ಬರೆದಿದ್ದಾರೆ.

ತಿರುಮಲೈ ಕೃಷ್ಣಮಾಚಾರ್ಯರು ಹಠಯೋಗಿಗಳಾಗಿದ್ದರು. ಅವರು ಹಠಯೋಗಕ್ಕೆ ಸಂಬಂಧಿಸದ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ವಿಧಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಯೋಗವನ್ನು ಪ್ರಚಾರ ಮಾಡಿದರು. ತಿರುಮಲೈ ಕೃಷ್ಣಮಾಚಾರ್ಯರ ಶಿಷ್ಯರಲ್ಲಿ ಯೋಗವನ್ನು ಹೆಚ್ಚು ಪ್ರಚಾರ ಮಾಡಿದವರೆಂದರೆ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್. ಅವರು ಯೋಗವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸಿದರು. ಏನಿಲ್ಲವೆಂದರೂ ಚೀನಾ ಸೇರಿದಂತೆ ೭೦ಕ್ಕೂ ಹೆಚ್ಚು ದೇಶಗಳಲ್ಲಿ ಅವರು ತರಬೇತಿ ನೀಡಿದ್ದರು. ಅವರ ಅಪಾರ ಶಿಷ್ಯರು ಇಂದೂ ಯೋಗವನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ನಿರಾತರಾಗಿದ್ದಾರೆ.

ಕೆ ಪಟ್ಟಾಭಿ ಜೋಯಿಸ್‌ ಅವರ ಕೃತಿ

ಇವರಲ್ಲದೆ, ಕೆ ಪಟ್ಟಾಭಿ ಜೋಯಿಸ್, ದೇಶಿಕಾಚಾರ್ಯ(ಪುತ್ರ) ಹಾಗೂ ದೇವಿ(ಆಂಗ್ಲ ಶಿಷ್ಯೆ, ಯೋಗಶಿಕ್ಷಕಿ) ಕೂಡ ತಿರುಮಲೈ ಕೃಷ್ಣಮಾಚಾರ್ಯರ ನೇರ ಶಿಷ್ಯರಾಗಿ ಯೋಗದ ಪ್ರಚಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಲ್ಲಿ ಕೆ ಪಟ್ಟಾಭಿ ಜೋಯಿಸ್‌ ಯೋಗ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬಹಳ ದೊಡ್ಡದು. ಅಷ್ಟಾಂಗ ಯೋಗವನ್ನು ಇವರು ಪ್ರಚಾರ ಮಾಡಿದರು, ಅದಕ್ಕೊಂದು ವೈಜ್ಞಾನಿಕ ಚೌಕಟ್ಟನ್ನು ಹಾಕಿಕೊಟ್ಟರು. ಸಂಸ್ಕೃತ ವಿದ್ವಾಂಸರಾಗಿದ್ದ ಪಟ್ಟಾಭಿಯವರು ಕೃಷ್ಣಮಾಚಾರ್ಯರ ಸಂಪರ್ಕದಿಂದ ಯೋಗಾಭ್ಯಾಸದಲ್ಲಿ ದೀಕ್ಷೆ ಪಡೆದು, ಪರಿಣತಿ ಪಡೆದರು. ಆ ಕಾಲದಲ್ಲಿ ನಮ್ಮ ದೇಶದ ಪ್ರಸಿದ್ಧ ಯೋಗಶಿಕ್ಷಕರಲ್ಲಿ ಒಬ್ಬರಾಗಿದ್ದರು. ಇವರ ಹಲವಾರು ಕೃತಿಗಳು ಇಂಗ್ಲಿಷ್‌ನಲ್ಲಿ ಜನಪ್ರಿಯವಾಗಿವೆ. ಸಾವಿರಾರು ಶಿಷ್ಯರನ್ನು ಇವರು ಕೊಡುಗೆಯಾಗಿ ನೀಡಿದ್ದಾರೆ.

ಇವರೆಲ್ಲರ ಶ್ರಮದ ಫಲವಾಗಿ ಇಂದು ಮೈಸೂರಿಗೆ ಯೋಗ ನಗರಿ ಪಟ್ಟ ಬಂದಿದೆ. ಈ ಪಟ್ಟದಿಂದಾಗಿಯೇ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer: ಯೋಗ ದಿನ ವಿಶ್ವದ ದಿನ ಆದದ್ದು ಹೇಗೆ?

Exit mobile version