Site icon Vistara News

ZIM vs IND : ಭಾರತ ತಂಡಕ್ಕೆ 100 ರನ್​ ಭರ್ಜರಿ ಜಯ, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ 1-1 ಸಮಬಲ ಸಾಧನೆ

ZIM vs IND

ಹರಾರೆ: ಬ್ಯಾಟಿಂಗ್​ನಲ್ಲಿ ಅಭಿಷೇಕ್​ ಶರ್ಮಾ (100 ರನ್​, 47 ಎಸೆತ, 7 ಫೋರ್, 8 ಸಿಕ್ಸರ್​) ಬಾರಿಸಿದ ಅಮೋಘ ಶತಕ ಹಾಗೂ ಬೌಲಿಂಗ್​ನಲ್ಲಿ ಮುಕೇಶ್​ ಕುಮಾರ್ ಹಾಗೂ ಅವೇಶ್​ ಖಾನ್​ ಅವರ ತಲಾ 3 ವಿಕೆಟ್​ ಸಾಧನೆಯಿಂದ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ (ZIM vs IND) ಎರಡನೇ ಪಂದ್ಯದಲ್ಲಿ 100 ರನ್​ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧನೆ ಮಾಡಿದೆ. ಮೊದಲ ಪಂದ್ಯದಲ್ಲಿ 13 ರನ್​ಗಳ ಹೀನಾಯ ಸೋಲಿಗೆ ಒಳಗಾಗಿ ಅವಮಾನಕ್ಕೆ ಈಡಾಗಿದ್ದ ವಿಶ್ವ ಚಾಂಪಿಯನ್​ ಮೆನ್​ ಇನ್ ಬ್ಲ್ಯೂ ಬಳಗ ಎರಡನೇ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ಇಲ್ಲಿನ ಹರಾರೆ ಸ್ಪೋರ್ಟ್ಸ್​​ ಕ್ಲಬ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 234 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಆತಿಥೇಯ ಜಿಂಬಾಬ್ವೆ ಬಳಗ 18. 4 ಓವರ್​ಗಳಲ್ಲಿ 134 ರನ್​ಗಳಿಗೆ ಆಲ್​ಔಟ್ ಆಯಿತು.

ಮಾರಕ ಬೌಲಿಂಗ್​

ಭಾರತದ ಬ್ಯಾಟರ್​ಗಳು ದೊಡ್ಡ ಮೊತ್ತವನ್ನು ಪೇರಿಸಿದ್ದ ಕಾರಣ ಬೌಲರ್​ಗಳಿಗೆ ತಮ್ಮ ಪ್ರತಾಪ ತೋರಿಸಲು ಅನುಕೂಲವಾಯಿತು. ಆರಂಭದಿಂದಲೇ ಆತಿಥೇಯ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಇನ್ನೋಸೆಂಟ್​ ಕೈಯಾ 4 ರನ್ ಬಾರಿಸಿ ಮುಕೇಶ್ ಎಸೆತಕ್ಕೆ ಔಟಾದರು. ಆದರೆ, ಅ ಬಳಿಕ ವೆಸ್ಲಿ ಮಧೆವೆರೆ (43 ರನ್​) ಹಾಗೂ ಬ್ರಿಯಾನ್ ಬೆನೆಟ್ (26 ರನ್​) ಭಾರತದ ಬೌಲರ್​ಗಳನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಬ್ರಿಯಾನ್ ಮುಕೇಶ್ ಎಸೆತಕ್ಕೆ ಔಟಾದ ಬಳಿಕ ಡಿಯಾನ್ ಮೈರ್ಸ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಸಿಕಂದರ್​ ರಾಜಾ 4 ರನ್​ಗೆ ಔಟಾದರು. ಇವರಿಬ್ಬರೂ ಆವೇಶ್​ ಖಾನ್​ ಬೌಲಿಂಗ್​ಗೆ ಬಲಿಯಾದರು. ಇದಾದ ಬಳಿಕ ಜಿಂಬಾಬ್ವೆ ಆಟಗಾರರ ಪ್ರತಾಪ ಕಡಿಮೆಯಾಯಿತು. ಕ್ಯಾಂಪ್​ಬೆಲ್​ 10 ರನ್​, ಮಂಡಂಡೆ ಶೂನ್ಯಕ್ಕೆ ಹಾಗೂ ಮಸಕಡ್ಸಾ 1 ರನ್​ಗೆ ಔಟಾಗುವ ಮೂಲಕ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಲ್ಯೂಕ್​ ಲ್ಯಾಂಗ್​ವೇ ಕೊನೆಯಲ್ಲಿ 33 ರನ್ ಬಾರಿಸಿದರೂ ಭಾರತದ ರನ್​ ಮೊತ್ತವನ್ನು ಸಮೀಪಿಸಲೂ ಅವರಿಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Rahul Dravid : ರಾಹುಲ್ ದ್ರಾವಿಡ್​ಗೆ ಭಾರತ ರತ್ನ ಕೊಡಿ; ಕೇಂದ್ರ ಸರ್ಕಾರಕ್ಕೆ ಗವಾಸ್ಕರ್ ಮನವಿ

ಅಭಿಷೇಕ್​ ಅಬ್ಬರ

ಮೊದಲು ಬ್ಯಾಟ್ ಮಾಡಿದ ಭಾರತ ಪರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶುಭ್​ಮನ್ ಗಿಲ್​ 2 ರನ್​ಗೆ ಔಟಾದ ಹೊರತಾಗಿಯೂ ಅವರು ತಮ್ಮ ಹೊಡೆಬಡಿಯ ಬ್ಯಾಟಿಂಗ್ ಪ್ರದರ್ಶನ ನಿಲ್ಲಿಸಲಿಲ್ಲ. ತಾವೆದರುಸಿದ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿ ರನ್ ಕದಿಯಲು ಆರಂಭಿಸಿದ ಅವರು 34 ಎಸೆತಕ್ಕೆ ಅರ್ಧ ಶತಕ ಹಾಗೂ ನಂತರ 13 ಎಸೆತಗಳಲ್ಲಿ 50 ರನ್ ಬಾರಿಸಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದರು. ಆದರೆ, ನಂತರದ ಎಸೆತದಲ್ಲಿಯೇ ಔಟಾದರು. ಅದಕ್ಕಿಂತ ಮೊದಲು ಅವರು ಎರಡನೇ ವಿಕೆಟ್​ಗೆ ಋತುರಾಜ್ ಗಾಯಕ್ವಾಡ್ ಜತೆಗೆ 137ರನ್​ಗಳ ಜತೆಯಾಟ ಆಡಿದರು. ಶರ್ಮಾ ಔಟಾದ ಬಳಿಕ ಆಡಲು ಬಂದ ರಿಂಕು ಸಿಂಗ್​ ಇನ್ನಷ್ಟು ಅಬ್ಬರಿಸಿದರು. ಅವರು 22 ಎಸೆತಕ್ಕೆ 48 ರನ್ ಬಾರಿಸಿ ಮಿಂಚಿದರು. ಅದಕ್ಕಿಂತ ಮೊದಲು ಸಾವಧಾನವಾಗಿ ಇನಿಂಗ್ಸ್ ಕಟ್ಟಿದ ಋತುರಾಜ್ ಗಾಯಕ್ವಾಡ್​ 47 ಎಸೆತಕ್ಕೆ 77 ರನ್ ಹೊಡೆದರು. ಅವರ ಇನಿಂಗ್ಸ್​​ನಲ್ಲಿ 11 ಫೋರ್ ಹಾಗೂ 1 ಸಿಕ್ಸರ್ ಇತ್ತು.

ಸರಣಿಯ ಮೂರನೇ ಪಂದ್ಯ ಬುಧವಾರ (ಜುಲೈ 10ರಂದು) ನಡೆಯಲಿದೆ.

Exit mobile version