ಹರಾರೆ: ಭಾರತ ತಂಡ ಟಿ20 ವಿಶ್ವ ಕಪ್ ಗೆದ್ದಿರುವ ಸಂಭ್ರಮದಲ್ಲಿರುವ ನಡುವೆಯೇ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ (ZIM vs IND) ಎದುರಾಗಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆಗೆ ಟಿ20 ಸರಣಿ ಆಡಲು ತೆರಳಿದ್ದ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ 13 ರನ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಬೇಸರಕ್ಕೆ ಒಳಗಾಗಿದೆ. ಬ್ಯಾಟಿಂಗ್ ವೈಫಲ್ಯವೇ ಭಾರತ ತಂಡದ ಸೋಲಿಗೆ ಕಾರಣವಾದರೆ, ಶುಭ್ಮನ್ ಗಿಲ್ ತಮ್ಮ ಮೊದಲ ನಾಯಕತ್ವದಲ್ಲಿಯೇ ಕಳಪೆ ದಾಖಲೆ ಮಾಡಿದರು. ಟಿ20 ವಿಶ್ವ ಕಪ್ಗೆ ಅರ್ಹತೆ ಪಡೆಯಲು ವಿಫಲಗೊಂಡಿರುವ ತಂಡದ ವಿರುದ್ಧವೇ ಸೋಲುವ ಮೂಲಕ ನಿರಾಸೆಗೆ ಒಳಗಾಗಿದ್ದಾರೆ.
Fantastic performance by Zimbabwe in the first T20I against India 👏#ZIMvIND | 📝: https://t.co/fo9Ow4hvG9 pic.twitter.com/s4TCUfdYSL
— ICC (@ICC) July 6, 2024
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ಜಿಂಬಾಬ್ವೆ ಬಳಗ 20 ಓವರ್ಗಳು ಮುಕ್ತಾಯಗೊಳ್ಳುವಾಗ 9 ವಿಕೆಟ್ ನಷ್ಟಕ್ಕೆ 115 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 19.5 ಓವರ್ಗಳಲ್ಲಿ 102 ರನ್ಗಳಿಗೆ ಆಲ್ಔಟ್ ಆಯಿತು.
ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಂತಾರಾಷ್ಟ್ರೀಯ ಅನುಭವದ ಕೊರತೆ ಹೊಂದಿರುವ ಭಾರತದ ಬ್ಯಾಟ್ಗಳು ಸತತವಾಗಿ ವಿಕೆಟ್ ಒಪ್ಪಿಸಿದರು. ಪದಾರ್ಪಣೆ ಅವಕಾಶ ಪಡೆದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರೆ ರುತುರಾಜ್ ಗಾಯಕ್ವಾಡ್ 7 ರನ್ಗೆ ಸೀಮಿತಗೊಂಡರು. ಮತ್ತೊಬ್ಬ ಪದಾರ್ಪಣೆ ಆಟಗಾರ ರಿಯಾನ್ ಪರಾಗ್ 2 ರನ್ಗೆ ವಿಕೆಟ್ ಒಪ್ಪಿಸಿದರು. ರಿಂಕು ಸಿಂಗ್ ಶೂನ್ಯಕ್ಕೆ ಪೆವಿಲಿಯನ್ಗೆ ಮರಳುವ ಮೂಲಕ ಭಾರತದ ಬ್ಯಾಟಿಂಗ್ ಬಲಕ್ಕೆ ಪೆಟ್ಟು ಬಿತ್ತು. 47 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸ್ಕೂಲ್ ಮಕ್ಕಳ ತಂಡದಂತೆ ಆಡಿತು.
ಇದನ್ನೂ ಓದಿ: Anant Ambani-Radhika Merchant wedding : ಅನಂತ್- ರಾಧಿಕಾ ಸಂಗೀತ್ ಕಾರ್ಯಕ್ರಮದಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯರು ಭಾಗಿ
ನಾಯಕ ಗಿಲ್ 31 ರನ್ ಬಾರಿಸಿದರೆ ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 27 ಹಾಗೂ ಆವೇಶ್ ಖಾನ್ 17 ರನ್ ಬಾರಿಸಿದರು. ಅದಕ್ಕಿಂತ ಮೊದಲು ಪದಾರ್ಪಣೆ ಮಾಡಿದ್ದ ಮತ್ತೊಬ್ಬ ಆಟಗಾರ ಧ್ರುವ್ ಜುರೆಲ್ 6 ರನ್ಗೆ ಔಟಾದರು. ಕೊನೆಯಲ್ಲಿ ರವಿ ಬಿಷ್ಣೋಯ್ 9 ರನ್ ಬಾರಿಸಿದ್ದು ಬಿಟ್ಟರೆ ಭಾರತದ ಆಟಗಾರರು ಎಲ್ಲಿಯೂ ಪ್ರತಿರೋಧ ತೋರಲಿಲ್ಲ. ಜಿಂಬಾಬ್ವೆ ಪರ ಸಿಕಂದರ್ ರಾಜಾ ಹಾಗೂ ತೆಂಡೈ ಚಟಾರ ತಲಾ 3 ವಿಕೆಟ್ ಉರುಳಿಸಿ ಮಿಂಚಿದರು.
ಭಾರತದ ಉತ್ತಮ ಬೌಲಿಂಗ್
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡಕ್ಕೆ ಭಾರತದ ಬೌಲರ್ಗಳು ಕಾಡಿದರು. ರವಿ ಬಿಷ್ಣೋಯ್ 13 ರನ್ ವೆಚ್ಚದಲ್ಲಿ 4 ವಿಕೆಟ್ ಈ ಮಾದರಿಯಲ್ಲಿ ಜೀವನ ಶ್ರೇಷ್ಠ ಪ್ರದರ್ಶನ ನೀಡಿದರು. ವಾಷಿಂಗ್ಟನ್ ಸುಂದರ್ 2 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ವೆಸ್ಲಿ ಮಧ್ವೆರೆ 21, ಬ್ರಿಯಾನ್ ಬೆನೆಟ್ 21, ಸಿಕಂದರ್ ರಾಜಾ 17, ಡಿಯೋನ್ ಮೈರ್ಸ್ 23, ಕ್ಲಿವ್ ಮಂಡಂಡೆ 29 ರನ್ ಬಾರಿಸಿದರು.