ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ (Karnataka Drought) ಭಾರಿ ಸಂಕಷ್ಟವನ್ನು ತಂದೊಡ್ಡಿದೆ. ರಾಜ್ಯದಲ್ಲಿ ಆಹಾರ ಕೊರತೆ (Food Scarcity) ಎದುರಾಗಲಿದೆಯೇ ಎಂಬ ಆತಂಕವನ್ನು ತಂದೊಡ್ಡಿದೆ. ಮಳೆ ಪ್ರಮಾಣ ತೀವ್ರ ತರನಾಗಿ ಕುಸಿದ ಬೆನ್ನಲ್ಲೇ ಇಳುವರಿ ಸಹ ಕುಸಿತ ಕಂಡಿದೆ. ಪ್ರಮುಖ ಬೆಳೆಗಳು (Crop loss) ನೆಲ ಕಚ್ಚಿವೆ. ಲಕ್ಷಾಂತರ ಹೆಕ್ಟೇರ್ ಬೆಳೆ (Lakhs of hectares of crops destroyed) ನಾಶಕ್ಕೊಳಪಟ್ಟಿವೆ. ಪ್ರಮುಖವಾಗಿ ಭತ್ತ, ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಕಬ್ಬು, ಹೆಸರು ಬೇಳೆ ಹಾಗೂ ರಾಗಿ ಬೆಳೆಗಳು (Paddy, tur, jowar, groundnut, sunflower, soyabean, sugarcane, moong dal and ragi crops) ಭಾರಿ ಪ್ರಮಾಣದಲ್ಲಿ ನಾಶವಾಗಿವೆ.
ರಾಜ್ಯದಲ್ಲಿ ಮಳೆಯಾಗದೆ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 208 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಒಟ್ಟು 39,74,741.34 ಹೆಕ್ಟೇರ್ನಷ್ಟು ಫಸಲು ನಷ್ಟವಾಗಿದೆ ಎಂಬ ಆತಂಕಕಾರಿ ಮಾಹಿತಿಯು ಲಭ್ಯವಾಗಿದೆ.
ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಬೆಳೆ ನಷ್ಟಕ್ಕೆ ಮಳೆ ಕೊರತೆಯೇ ಕಾರಣ
ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇಕಡಾ 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಸಿರು ಬರ ನಮಗೆ ಬಂದಿದೆ. ರೈತರು ಮತ್ತು ತಜ್ಞರ ಜತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದೆ. ಜೋಳ, ತೊಗರಿ, ಶೇಂಗಾ ಎಲ್ಲ ಬೆಳೆ ಹೊಲದಲ್ಲಿ ಕಾಣುತ್ತದೆ. ಆದರೆ, ಇಳುವರಿ ಮಾತ್ರ ಇಲ್ಲ ಎನ್ನುವಂತೆ ಆಗಿದೆ.
ಇದನ್ನೂ ಓದಿ: Load Shedding : ಲೋಡ್ ಶೆಡ್ಡಿಂಗ್ ಒಪ್ಪಿಕೊಂಡ ಡಿಕೆಶಿ, ಚಲುವರಾಯಸ್ವಾಮಿ; ಪ್ರತಿಭಟನೆಗೆ ಮುಂದಾದ ಬಿಜೆಪಿ
ರಾಜ್ಯದ 208 ತಾಲೂಕುಗಳಲ್ಲಿ ಬರ
ಕೇಂದ್ರ ಸರ್ಕಾರದ ಬರ ಮಾನದಂಡಗಳ (Central Government drought criteria) ಅನುಸಾರ ಬರ ಪೀಡಿತ ತಾಲೂಕುಗಳ ಪರಿಷ್ಕೃತ ಪಟ್ಟಿಯನ್ನು ರಾಜ್ಯ ಸರ್ಕಾರ ಅಕ್ಟೋಬರ್ 9ರಂದು ಬಿಡುಗಡೆ ಮಾಡಿತ್ತು. ಇದರ ಅನ್ವಯ ಒಟ್ಟು 208 ತಾಲೂಕುಗಳು ರಾಜ್ಯದಲ್ಲಿ ಬರ ತಾಲೂಕುಗಳ ಪಟ್ಟಿಗೆ ಸೇರಿವೆ. ಈ ಮೊದಲು 195 ತಾಲೂಕುಗಳಲ್ಲಿ ಬರ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 161 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದ್ದವು. ಉಳಿದ ಕಡೆ ಅಧ್ಯಯನ ನಡೆಸಿದಾಗ ಹೆಚ್ಚುವರಿಯಾಗಿ 21 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಗೊತ್ತಾಗಿದೆ. ಅಲ್ಲದೆ, 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ನೂತನ ಪಟ್ಟಿಯನ್ನು ಘೋಷಣೆ ಮಾಡಲಾಯಿತು. ಇದರ ಅನುಸಾರ ಈಗ ಒಟ್ಟು 182 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾದಂತೆ ಆಗಿದೆ. ಇನ್ನು 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಇರುವ 236 ತಾಲೂಕುಗಳ ಪೈಕಿ 208 ತಾಲೂಕುಗಳು ಈಗ ಬರಕ್ಕೆ ಒಳಗಾಗಿವೆ. ಅಂದರೆ, ಈಗ ಬರದಿಂದ ಬಾಕಿ ಉಳಿದಿರುವುದು ಕೇವಲ 28 ತಾಲೂಕುಗಳು ಮಾತ್ರ!