Site icon Vistara News

Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

Accident news

ಮೈಸೂರು/ರಾಯಚೂರು: ನಿನ್ನೆ ಶುಕ್ರವಾರ ಬೀಸಿದ ಬಿರುಗಾಳಿಗೆ ಕೂಲಿಂಗ್‌ ಶೀಟ್‌ ಕಳಚಿ ವ್ಯಕ್ತಿಯೊಬ್ಬರ ತಲೆ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಕುಸಿದು ಬಿದ್ದ ವ್ಯಕ್ತಿ ಸ್ಥಳದಲ್ಲೇ (Accident News) ಮೃತಪಟ್ಟಿದ್ದಾರೆ. ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಕುಮಾರ್ (34) ಮೃತ ದುರ್ದೈವಿ.

ಮಾರಶೆಟ್ಟಹಳ್ಳಿ ಗ್ರಾಮದ ನಿವಾಸಿಯಾದ ಶಿವಕುಮಾರ್‌ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ. ಈ ವೇಳೆ ಜೋರಾಗಿ ಬಿರುಗಾಳಿ ಬೀಸಿದ್ದು, ಕೂಲಿಂಗ್ ಶೀಟ್ ನೇರವಾಗಿ ಶಿವಕುಮಾರ್‌ ತಲೆ ಮೇಲೆ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ಶಿವಕುಮಾರ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇಬ್ಬರನ್ನು ಬಲಿ ಪಡೆದ ರಾಯಚೂರು ರಣ ಬಿಸಿಲು

ಒಂದು ಕಡೆ ಬಿರುಗಾಳಿ ಸಹಿತ ಮಳೆ ಮತ್ತೊಂದು ಕಡೆ ರಣ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ರಾಯಚೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅತಿಯಾದ ಬಿಸಿಲಿನ ತಾಪಮಾನದಿಂದ ಮಲ್ಲಯ್ಯ ಹಾಗೂ ಆಂಜನೇಯ ಎಂಬುವವರು ಮೃತಪಟ್ಟಿದ್ದಾರೆ.

ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಮೃತಪಟ್ಟಿದ್ದಾರೆ. ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಮಲ್ಲಯ್ಯ (45) ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.

ಮಲ್ಲಯ್ಯ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಸ್ವಗ್ರಾಮ ಮಸ್ಕಿಯ ಹಸಮಕಲ್‌ಗೆ ಬಂದಿದ್ದರು. ಮಧ್ಯಾಹ್ನ ಮಸ್ಕಿ ಪಟ್ಟಣದಲ್ಲಿ ಕಿರಾಣಿ ಸಾಮಾನು ತರಲು ಬಂದಾಗ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಇತ್ತ ರಾಯಚೂರು ತಾಲೂಕಿನ ಜಾಲಿಬೆಂಚಿಯಲ್ಲೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಾಲಿಬೆಂಚಿಯ ಆಂಜನೇಯ (45) ಮೃತ ದುರ್ದೈವಿ. ಆಂಜನೇಯ ಹೊಲದಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಸುಸ್ತಾಗಿ ಬಿದ್ದು ಮೃತಪಟ್ಟಿದ್ದಾರೆ. ನಿತ್ಯ 44-46°C ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಅನಾವಶ್ಯಕವಾಗಿ ಹೊರಗೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮೈಸೂರಿನಲ್ಲಿ ಏಕಾಏಕಿ ಹೊತ್ತಿ ಉರಿದ ಬೈಕ್

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಏಕಾಏಕಿ ಬೈಕ್‌ವೊಂದು ಹೊತ್ತಿ ಉರಿದಿದೆ. ಬಿಸಿಲ ತಾಪಕ್ಕೆ ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಹಾನಿ ಆಗಿಲ್ಲ.

ಇದನ್ನೂ ಓದಿ: Drama Artist: ಶಕುನಿಯಾಗಿ ಗರ್ಜಿಸುತ್ತಿರುವಾಗಲೇ ಹೃದಯಾಘಾತ; ಮೊಬೈಲ್‌ನಲ್ಲಿ ಸೆರೆಯಾಯ್ತು ಕಲಾವಿದನ ಕೊನೆಯ ಕ್ಷಣ

ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

ರಾಯಚೂರು/ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಉರಿ ಬಿಸಿಲು ಜನರನ್ನು ಸುಸ್ತು (Karnataka Weather Forecast) ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿ ಕುಂತರೂ ನಿಂತರೂ ಬೆವರು ಸುರಿಸುವಂತಾಗಿದೆ. ಬಿಸಿಲಿನ ಆಜ್ಞೆಗೆ ಜನರು ಹೊರಬರಲು ಆಗದೆ ಅಘೋಷಿತ ಬಂದ್‌ ನಿರ್ಮಾಣವಾಗಿದೆ. ಸದ್ಯ ಅತಿಯಾದ ಬಿಸಿಲಿಗೆ ತತ್ತರಿಸಿದ ರಾಯಚೂರು ಜನರು ಮಧ್ಯಾಹ್ನ ಹೊರಗೆ ಬಾರದಂತೆ ರಾಯಚೂರು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಮುಂದಿನ ಒಂದು ವಾರ ಮತ್ತಷ್ಟು ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ 44 ರಿಂದ 46 ಡಿ.ಸೆ ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಅನಾರೋಗ್ಯ ಸಮಸ್ಯೆ ಜತೆಗೆ ಬಿಸಿಲಾಘಾತಕ್ಕೆ ಸಾವು ಸಂಭವಿಸಬಹುದು. ಹಾಗಾಗಿ ಮಧ್ಯಾಹ್ನ 12 ರಿಂದ 4 ಗಂಟೆವರೆಗೂ ಹೊರಗೆ ಹೋಗದಿರಿ ಎಂದು ಡಿಸಿ ಎಲ್ ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹೊರಗೆ ಹೋಗಲೇಬೇಕಾದ ಅವಶ್ಯಕತೆ ಇದ್ದರೆ ಶುದ್ಧ ಕುಡಿಯುವ ನೀರಿನ ಬಾಟಲ್ ಕೊಂಡೊಯ್ಯಿರಿ. ಟೋಪಿ ಅಥವಾ ಛತ್ರಿ ಬಳಸಿ, ಆದಷ್ಟು ನೆರಳಿನ ಪ್ರದೇಶಗಳಲ್ಲಿ ಓಡಾಡಿ. ಬಾಯಾರಿಕೆ ಆಗದಿದ್ದರೂ ಆಗಾಗ ನೀರು ಕುಡಿಬೇಕು. ಯಾವಾಗಲೂ ನಿಮ್ಮ ಬಳಿ ನೀರು ಇಟ್ಟುಕೊಂಡಿರಿ ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹಾಗೆಯೇ ಮನೆ- ಕಚೇರಿಗಳಲ್ಲಿ ಪಕ್ಷಿಗಳಿಗೂ ನೀರನ್ನು ತುಂಬಿ ಇಡಿ ಎಂದಿದ್ದಾರೆ.

ತುಮಕೂರಲ್ಲಿ ಬಿಸಿ ಗಾಳಿ; ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ

ತುಮಕೂರು ಜಿಲ್ಲೆಯಲ್ಲೂ ಬಿಸಿ ಗಾಳಿಯು ಆತಂಕವನ್ನು ಹೆಚ್ಚಿಸಿದೆ. ಪಾವಗಡ ತಾಲೂಕಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಿಸಿಲ ಬೇಗೆಗೆ ಪ್ರಾಣಿ ಪಕ್ಷಿಗಳೂ ಹೈರಾಣಾಗಿವೆ. ಇತ್ತ ರೈತರು ದನ ಕರುಗಳಿಗೆ ಒದ್ದೆ ಮಾಡಿದ ಗೋಣಿಚೀಲ ಹಾಕುತ್ತಿದ್ದಾರೆ. ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ ಹಾಕಿ, ತಂಪು ಮಾಡುತ್ತಿದ್ದಾರೆ.

ಬಿಸಿಲಿನ ಹೊಡೆತ- ಚಿಕ್ಕಬಳ್ಳಾಪುರ ಪ್ರವಾಸಿತಾಣ ಖಾಲಿ ಖಾಲಿ

ಇತ್ತ ಚಿಕ್ಕಬಳ್ಳಾಪುರದಲ್ಲೂ ಅತಿಯಾದ ತಾಪಮಾನದಿಂದಾಗಿ ಪ್ರವಾಸಿ ತಾಣಗಳು ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ. ನಂದಿ ಬೆಟ್ಟ, ಈಶಾ ಫೌಂಡೇಶನ್ ಜನರಿಲ್ಲದೆ ಖಾಲಿ ಖಾಲಿಯಾಗಿದೆ. ಬಿಸಿಲಿನ ತಾಪಕ್ಕೆ ಜನರು ಮನೆ ಬಿಟ್ಟು‌ ಕದಲದ ಕಾರಣಕ್ಕೆ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಬಳ್ಳಾಪುರದಲ್ಲಿ ಆಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪ್ರತಿನಿತ್ಯ ಪ್ರವಾಸಿಗರಿಂದ ಗಿಜುಗುಡುತಿದ್ದ ನಂದಿಬೆಟ್ಟ ಖಾಲಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version