ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada Landslide) ಅಂಕೋಲಾ-ಶಿರೂರು ಗುಡ್ಡ ಕುಸಿತ (Ankola landslide) ಪ್ರಕರಣದಲ್ಲಿ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾರ್ಯಾಚರಣೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 8 ಮಂದಿಯ ಶವ ಪತ್ತೆಯಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಇಂದು ಸಣ್ಣಿ ಹನ್ಮಂತ ಗೌಡ (57) ಅವರ ಮೃತದೇಹ ಕಂಡು ಬಂದಿದೆ.
ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಹಠಾತ್ ನೆರೆಯಲ್ಲಿ ಕಾಣಿಸಿಕೊಂಡು ಸಣ್ಣಿ ಹನ್ಮಂತ ಗೌಡ ನಾಪತ್ತೆಯಾಗಿದ್ದರು. ಇದೀಗ ಘಟನೆ ನಡೆದು 8 ದಿನಗಳ ಬಳಿಕ ಅವರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಇನ್ನೂ ಉಳಿದವರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಮಿಲಿಟರಿ ಕಾರ್ಯಪಡೆ ಶೋಧ ಕಾರ್ಯ ಮುಂದುವರಿಸಿದೆ.
ಪತ್ತೆಯಾಗಬೇಕಾದವರು
ಜಗನ್ನಾಥ ನಾಯ್ಕ, ಅರ್ಜುನ್, ಲೋಕೇಶ ಇನ್ನೂ ಕಂಡು ಬಂದಿಲ್ಲ. ಟೀ ಅಂಗಡಿ ಮಾಲೀಕ ಜಗನ್ನಾಥ ನಾಯ್ಕ ಮತ್ತು ಲೋಕೇಶ ಗೌಡ ಸಂಬಂಧಿಕರು. ಅರ್ಜುನ್ ಕೇರಳ ಮೂಲದ ಬೆಂಜ್ ಲಾರಿಯ ಚಾಲಕ. ಗಂಗೆಕೊಳ್ಳದ ನಿವಾಸಿ ಲೋಕೇಶ ಗುಡ್ಡ ಕುಸಿದ ಸಂದರ್ಭದಲ್ಲಿ ಹೊಟೇಲ್‌ನಲ್ಲಿದ್ದರು. ಟೀ ಅಂಗಡಿ ಇದ್ದ ಸ್ಥಳದಲ್ಲಿ ಶೋಧ ನಡೆಸಲು ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ.
ಟೀ ಅಂಗಡಿ ಇದ್ದ ಸ್ಥಳದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ. ಗುಡ್ಡಕುಸಿತ ಪ್ರದೇಶದಲ್ಲಿ ಇಲ್ಲಿಯವರೆಗೆ ಬೆಂಜ್ ಲಾರಿಗಾಗಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಜಿಪಿಎಸ್, ಸೋನಾರ್ ತಂತ್ರಜ್ಞಾನ ಬಳಸಿ ತಂಡಗಳು ಶೋಧ ನಡೆಸುತ್ತಿವೆ. ಇಂದು ನದಿಯಲ್ಲಿ ಸೇನಾ ಸಿಬ್ಬಂದಿ ಶೋಧ ಕಾರ್ಯ ನಡೆಸಲಿದೆ. ಮೆಟಲ್ ಡಿಟೆಕ್ಟರ್ ಬಳಸಿ ಕಾರ್ಯಾಚರಣೆ ನಡೆಯಲಿದೆ. ಮಣ್ಣು ಸಂಗ್ರಹವಾಗಿರುವ ನದಿ ಪಾತ್ರದಲ್ಲಿ ತಂಡ ಪರಿಶೀಲಿಸಲಿದೆ.
ಸ್ಥಳಕ್ಕೆ ಕೇರಳದ ಮಂಜೇಶ್ವರ ಶಾಸಕ ಭೇಟಿ
ಗುಡ್ಡ ಕುಸಿತದಿಂದ ಮಣ್ಣಿನ ಅಡಿಯಲ್ಲಿ ಕೇರಳ ಮೂಲದ ಲಾರಿ ಚಾಲಕ ಸಿಲುಕಿಕೊಂಡಿದ್ದು, ಸ್ಥಳಕ್ಕೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಶಾಸಕ ಕೆ.ಎಂ.ಆಶ್ರಫ್ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ʼʼಗುಡ್ಡ ಕುಸಿತದಲ್ಲಿ ಕಾಣೆಯಾದವರಿಗಾಗಿ ಶೋಧಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಂದಾಗ ಅರ್ಜುನ್ ನಾಪತ್ತೆ ಕುರಿತು ಗಮನಕ್ಕೆ ತಂದಿದ್ದೇನೆ. ಸ್ಥಳೀಯ ಶಾಸಕ ಸತೀಶ್ ಸೈಲ್ ಜತೆ ಸಂಪರ್ಕದಲ್ಲಿದ್ದು ಶೋಧಕಾರ್ಯ ಕೈಗೊಳ್ಳಲು ಸೂಚಿಸಿದ್ದಾರೆ. ಅರ್ಜುನ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಜಿಪಿಎಸ್ ಸಿಗ್ನಲ್ ಕೊನೆಯದಾಗಿ ಸಿಕ್ಕ ಸ್ಥಳದಲ್ಲೂ ಹುಡುಕಾಟ ನಡೆಸಲಾಗಿದೆ. ಅರ್ಜುನ್ ಬದುಕಿ ಬರಲಿ ಎನ್ನುವುದು ನಮ್ಮೆಲ್ಲರ ಪ್ರಾರ್ಥನೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Ankola landslide: ಅಂಕೋಲಾ- ಶಿರೂರು ಗುಡ್ಡ ಕುಸಿತ; 7ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆಗೆ ಸೇನಾ ಪಡೆ ಸಾಥ್
ಕೇರಳ ಮಾಧ್ಯಮಗಳಲ್ಲಿ ಶೋಧಕಾರ್ಯ ವಿಳಂಬವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ʼʼದುರ್ಘಟನೆಯಲ್ಲಿ ಕಾಣೆಯಾದವರು ಮೊದಲು ಸಿಗಬೇಕು. ಖುದ್ದು ಮುಖ್ಯಮಂತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಶಾಸಕರು ವಿಧಾಸಭೆಗೂ ತೆರಳದೇ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಆ ರೀತಿಯ ಟೀಕೆಗಳು ಬೇಡ. ಕಾಣೆಯಾದವರು ಶೀಘ್ರದಲ್ಲಿ ಸಿಗಲಿ ಎನ್ನುವುದಷ್ಟೇ ನಮ್ಮ ಹಾರೈಕೆʼʼ ಎಂದು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.