ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada Landslide) ಅಂಕೋಲಾ-ಶಿರೂರು ಗುಡ್ಡ ಕುಸಿತ (Ankola landslide) ಪ್ರಕರಣದಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಇಂದು (ಜುಲೈ 25) 10ನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಜತೆಗೆ ಮಣ್ಣಿನಲ್ಲಿ ಹುದುಗಿರುವ ಕೇರಳದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲಕ್ಕೆ ಎತ್ತಲು ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ (Rain News).
ಕಾರ್ಯಾಚರಣೆ ವೇಳೆ ಲಾರಿಯ ಬಗ್ಗೆ ಬುಧವಾರ ಮಹತ್ವದ ಸುಳಿವು ಸಿಕ್ಕಿದೆ. ನಾಪತ್ತೆಯಾಗಿದ್ದ ಕೇರಳದ ಬೆಂಜ್ ಲಾರಿಯನ್ನು ಬೂಮ್ ಹಿಟಾಚಿ ಪತ್ತೆ ಮಾಡಿದೆ. ಗಂಗಾವಳಿ ನದಿ ತೀರದ 20 ಮೀಟರ್ ದೂರದಲ್ಲಿ 60 ಅಡಿ ಆಳದಲ್ಲಿ ತಲೆ ಕೆಳಗಾದ ಸ್ಥಿತಿಯಲ್ಲಿ ಲಾರಿ ಪತ್ತೆಯಾಗಿದೆ.
ಬೂಮ್ ಹಿಟಾಚಿ ಲಾರಿಯ ಸುಳಿವು ನೀಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಎನ್‌ಡಿಆರ್‌ಎಫ್ ಸಿಬ್ಬಂದಿ ಇರುವಿಕೆಯನ್ನ ಖಚಿತಪಡಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಬೋಟ್‌ನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸೇನೆ, ನೌಕಾಪಡೆ ಹಾಗೂ ಸ್ಯಾಟಲೈಟ್ ತಂತ್ರಜ್ಞಾನದಲ್ಲಿ ಟ್ರಕ್ ಮಾದರಿ ವಸ್ತು ಇರುವುದು ಪತ್ತೆಯಾಗಿದ್ದರಿಂದ ಪರಿಶೀಲನೆಯನ್ನು ತೀವ್ರಗೊಳಿಸಲಾಗಿತ್ತು.
ಪ್ರತಿಕೂಲ ಹವಾಮಾನ, ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಬುಧವಾರ ಇಳಿದು ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಇಂದು ಮಳೆ ಕಡಿಮೆಯಿದ್ದಲ್ಲಿ ನೌಕಾನೆಲೆ ಮುಳುಗು ತಜ್ಞರು ಸಮೀಪಕ್ಕೆ ತೆರಳಿ ಶೋಧಿಸಲಿದ್ದಾರೆ. ಲಾರಿ ಒಳಗೆ ಸಿಲುಕಿಕೊಂಡಿರುವ ಚಾಲಕ ಅರ್ಜುನ್‌ಗಾಗಿ ಹುಡುಕಾಟ ಮುಂದುವರಿಯಲಿದೆ. ಕ್ಯಾಬಿನ್‌ನಲ್ಲಿ ಅವರಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಬಳಿಕ ಲಾರಿಯನ್ನು ಮೇಲಕ್ಕೆತ್ತಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಪಾತ್ರದಲ್ಲಿ ಬಿದ್ದಿರುವ ಮಣ್ಣನ್ನ ತೆರವುಗೊಳಿಸಿ ಲಾರಿ ಒಳಗೆ ಶೋಧ ಕಾರ್ಯ ನಡೆಯಲಿದೆ. ಇದೇ ವೇಳೆ ನಾಪತ್ತೆಯಾದ ಜಗನ್ನಾಥ ಹಾಗೂ ಲೋಕೇಶ ಅವರಿಗಾಗಿಯೂ ಸೇನೆ, ಎನ್‌ಡಿಆರ್‌ಎಫ್ ಮತ್ತು ನೌಕಾಪಡೆಗಳು ಹುಡುಕಾಟ ನಡೆಸಲಿವೆ.
ಇದನ್ನೂ ಓದಿ: Karnataka Weather: ಇಂದು ಕರಾವಳಿ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ!
ವಿವಿಧ ಜಿಲ್ಲೆಗಳಲ್ಲಿ ರಜೆ ಘೋಷಣೆ
ಕಾರಾವಾರ: ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ ಮುಂದುವರಿದ ಹಿನ್ನಲೆಯಲ್ಲಿ ಇಂದು ಜಿಲ್ಲೆಯ 7 ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ. ಶಾಲೆ, ಪದವಿ ಪೂರ್ವ, ಡಿಪ್ಲೋಮಾ, ಐಟಿಐ ಕಾಲೇಜುಗಳಿಗೆ ಮಾತ್ರ ರಜೆ ಎಂದು ಸೂಚಿಸಲಾಗಿದೆ.
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಶಾಲೆಗಳಿಗೂ ರಜೆ ಸಾರಲಾಗಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ .ಪಾಂಡು ಮಾಹಿತಿ ನೀಡಿ, ಮಲೆನಾಡು ಸಕಲೇಶಪುರ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ / ಕೊಡಗು: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಶಾಲಾ ಕಾಲೇಜಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ರಜೆ ಘೋಷಿಸಿದ್ದಾರೆ. ಅಂಗನವಾಡಿ ಸೇರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆಯಾಗಿದೆ. ಜತೆಗೆ ಕೊಡಗಿನ 2 ಕ್ಷಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ರಜೆ ಸಾರಲಾಗಿದೆ.