Site icon Vistara News

Bangalore Rain: ರಾಜಧಾನಿಯ ಹಲವೆಡೆ ಅಬ್ಬರಿಸಿದ ವರುಣ; ಆಟೋ ಮೇಲೆ ಮರ ಬಿದ್ದು ಚಾಲಕ ಸೇರಿ ಮೂವರಿಗೆ ಗಾಯ

Bangalore Rain

ಬೆಂಗಳೂರು: ರಾಜಧಾನಿಯ ಬಹುಕೇಕ ಕಡೆ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಮೆಜೆಸ್ಟಿಕ್, ವಿಜಯನಗರ, ಯಶವಂತಪುರ, ವಸಂತ ನಗರ ಸುತ್ತಮುತ್ತ ಧಾರಾಕಾರ ಮಳೆ (Bangalore Rain) ಸುರಿದಿದ್ದು, ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೃಹತ್ ಮರವೊಂದು ಆಟೋ ಮೇಲೆ‌ ಬಿದ್ದಿದೆ. ಇದರಿಂದ ಚಾಲಕ ಸೇರಿ ಮೂವರಿಗೆ ಗಾಯಗಳಾಗಿವೆ.

ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ಬೃಹತ್ ಮರ ಬಿದ್ದಿದ್ದರಿಂದ ಆಟೋ ಜಖಂಗೊಂಡಿದೆ. ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ‌‌ ಬಿಬಿಎಂಪಿ ಸಿಬ್ಬಂದಿ ಭೇಟಿ ನೀಡಿ ಮರ ತೆರವುಗೊಳಿಸುತ್ತಿದ್ದಾರೆ.

ಇನ್ನು ಶುಕ್ರವಾರ ರಾತ್ರಿ ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಮೋರಿಯಲ್ಲಿ ಕಸ ತೆಗೆದ ಪುಟಾಣಿ ಮಕ್ಕಳು

ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಸುರಿದಾಗ ಚರಂಡಿ ಅವ್ಯವಸ್ಥೆಯಿಂದ ರಸ್ತೆಗಳು ಜಲಾವೃತವಾಗುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಬಿಬಿಎಂಪಿ ಮಾಡಬೇಕಿದ್ದ ಕೆಲಸವನ್ನು ಪುಟಾಣಿ ಮಕ್ಕಳು ಮಾಡಿದ್ದಾರೆ. ಸತತ ಮಳೆಯಿಂದ ರಸ್ತೆಯಲ್ಲಿ ಮಳೆ ನೀರು ತುಂಬಿದ್ದರಿಂದ ಜಯನಗರ ಈಸ್ಟ್ ಎಂಡ್ ಬಳಿ ಮೋರಿಯಲ್ಲಿದ್ದ ಕಸವನ್ನು ಪುಟಾಣಿ ಮಕ್ಕಳು ತೆಗೆದು ಕ್ಲೀನ್‌ ಮಾಡಿದ್ದಾರೆ.

ಪ್ರತಿ ಬಾರಿ ಮಳೆಯಾದಾಗ ತಮ್ಮ ಮನೆಗಳ ಮುಂಭಾಗ ಇದೇ ರೀತಿ ನೀರು ನಿಲ್ಲುತ್ತದೆ. ಬಿಬಿಎಂಪಿಗೆ ಹಲವು ಭಾರಿ ಫೋನ್ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮೋರಿಯಲ್ಲಿದ್ದ ಕಸವನ್ನು ತೆಗೆದು ರಸ್ತೆಯಲ್ಲಿ ಓಡಾಡಲು ಮಕ್ಕಳು ಅನುಕೂಲ ಮಾಡಿಕೊಟ್ಟಿದ್ದಾರೆ.

ಇದನ್ನು ಓದಿ | Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!

ಶನಿವಾರ ಹಾಸನ, ಮೈಸೂರು ಸೇರಿ ವಿವಿಧೆಡೆ ಭಾರಿ ಮಳೆ ಮುನ್ಸೂಚನೆ

ಆ.17ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಸನ,
ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡುನ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅದೇ ರೀತಿ ಆ.18ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚು. ದಕ್ಷಿಣ ಒಳನಾಡುನ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡುನ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿ ಆ.21ರವರೆಗೆ ಇರಲಿದೆ.

ಮೀನುಗಾರರಿಗೆ ಎಚ್ಚರಿಕೆ

ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ಕಿಮೀ ನಿಂದ 45 ಕಿಮೀ ವೇಗದಲ್ಲಿ 55 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳು: ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ.. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30° C ಮತ್ತು 22° C ಆಗಿರಬಹುದು

Exit mobile version