Site icon Vistara News

Bengaluru Rains : ಬೃಹತ್‌ ಗಾತ್ರದ ಮರದ ಕೊಂಬೆಗಳು ಬಿದ್ದು 6 ಮಂದಿಗೆ ಗಾಯ; ಆರೋಗ್ಯ ವಿಚಾರಿಸಿದ ಡಿಕೆ ಶಿವಕುಮಾರ್

Bengaluru rain

ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಗೆ (Bengaluru rains) ಮರ ಬಿದ್ದು (Tree Fall) ಅನಾಹುತವೇ ಸೃಷ್ಟಿಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಬೃಹತ್ ಮರದ ಕೊಂಬೆಗಳು ಬಿದ್ದಿದೆ. ಬೆಂಗಳೂರಿನ ಮಾರುತಿ ಸೇವಾನಗರದಲ್ಲಿ ಸೋಮವಾರ ಬೆಳಗ್ಗೆ 7ರ ಸುಮಾರಿಗೆ ಘಟನೆ ನಡೆದಿದೆ. ಬೈಕ್‌ನಲ್ಲಿ ಮತ್ತು ನಡೆದುಕೊಂಡು ಹೋಗುವವರ ಮೇಲೆ ಮರ ಬಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಧೈರ್ಯ ತುಂಬಿದರು.

ಎರಡು ತಿಂಗಳಿಂದ ಮರ ತೆರವಿಗೆ ಸ್ಥಳೀಯರು ಮನವಿ ಮಾಡಿದ್ದರು. ಮರ ಸಂಪೂರ್ಣವಾಗಿ ಒಣಗಿದ್ದು, ತೆರವು ಮಾಡಿಸಿ ಎಂದು ಸ್ಥಳೀಯ ಶಾಸಕ ಸಚಿವ ಕೆಜೆ ಜಾರ್ಜ್ ಅವರಿಗೆ ಮನವಿ ಪತ್ರ ನೀಡಿದ್ದರು. ಮರವನ್ನು ತೆರವು ಮಾಡಿದ್ದರೆ ಇಂದು ನಾಲ್ವರು ಆಸ್ಪತ್ರೆಗೆ ಸೇರಿಸುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌ ಮಳೆ ಬಂದಾಗ ನಾನು ಒಂದು ಗಮನಿಸಿದ್ದೀನಿ. ಬೆಂಗಳೂರಿನಲ್ಲಿ ಎಷ್ಟೇ ರಸ್ತೆ ಗುಂಡಿ ಮುಚ್ಚಿದ್ದರೂ ಮತ್ತೆ ಸೃಷ್ಟಿ ಆಗುತ್ತಲೇ ಇರುತ್ತದೆ. ರಸ್ತೆ ಬದಿಗಳಲ್ಲಿ ಇರುವ ರೀಟೈನಿಂಗ್ ವಾಲ್‌ಗಳನ್ನು ಸರಿ ಮಾಡಿಸಲು ತಿಳಿಸಿದ್ದೀನಿ. ರಸ್ತೆ ಪಕ್ಕ ಫುಟ್‌ಪಾತ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಮರ ತೆರವಿಗೆ ಸ್ಥಳೀಯರು ಮನವಿ ಮಾಡಿದ್ದರೂ ತೆರವು ಮಾಡಲಿಲ್ಲ ಎನ್ನುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಗಮನಕ್ಕೆ ಬಂದಿದೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುತ್ತೇವೆ. ಗಾಯಾಳುಗಳ ಎಲ್ಲ ಖರ್ಚು ವೆಚ್ಚಗಳನ್ನು ಬಿಬಿಎಂಪಿ ನಿರ್ವಹಿಸಲಿದೆ ಎಂದರು.

ಈ ಅವಘಡದಲ್ಲಿ ಮೂವರು ಶಾಲಾ ಮಕ್ಕಳ ಸೇರಿ ಒಟ್ಟು ಆರು ಜನರಿಗೆ ಮರ ಬಿದ್ದು ಗಾಯಗೋಮಡಿದ್ದಾರೆ. ಒಬ್ಬ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದ್ದು, ಎದೆ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಒರ್ವ ಮಹಿಳೆಯ ಕಾಲು ಮುರಿದಿದು ಹೋಗಿದೆ. ಸುಬ್ಬಯನ ಪಾಳ್ಯದಲ್ಲಿ ವಾಸವಾಗಿದ್ದ ವಿಶಾಲಾಕ್ಷಿ ಹಾಗೂ ಶಾಂತಕುಮಾರ್ ದಂಪತಿಯ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದೆ. ಹಲಸೂರಿನ ಖಾಸಗಿ ಶಾಲೆಯಲ್ಲಿ ಪರಿಣಿತ ಮತ್ತು ಪ್ರಣತಿ ಶ್ರೀ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗೆ ಹೋಗುವಾಗ ಮರ ಬಿದ್ದು ಗಾಯಗೊಂಡಿದ್ದಾರೆ.

ಸದ್ಯಕ್ಕೆ ನಾಲ್ವರು ಮಕ್ಕಳು ಆರೋಗ್ಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯೆ ತ್ರಿಜಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ತಾಯಿ ವಿಶಾಲಾಕ್ಷಿಗೆ ಕಾಲಿನ ಮೂಳೆ ಮುರಿದಿದೆ. ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮಣಿಕ್ಯವೇಲ್ ಅವರಿಗೆ ಎದೆ ಹಾಗೂ ಬೆನ್ನಿನ ಮೂಳೆ ಮುರಿದಿದ್ದು, ಗಂಭೀರ ಗಾಯವಾಗಿದ್ದು, ಅವರಿಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಸದ್ಯಕ್ಕೆ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.

ಘಟನೆಯಲ್ಲಿ ಕಾಲು ಮುರಿದುಕೊಂಡು ಗಾಯಗೊಂಡ ವಿಶಾಲಕ್ಷಿ ಮಾತನಾಡಿದ್ದಾರೆ. ಇಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆ. ಮರದ ಕೊಂಬೆ ದಿಢೀರ್‌ ಆಗಿ ಬಿತ್ತು. ಮರದ ಕೊಂಬೆ ಬಿದ್ದು ಕಾಲಿಗೆ ತುಂಬ ಪೆಟ್ಟು ಬಿದ್ದಿದೆ. ಇಬ್ಬರು ಮಕ್ಕಳು ಸಹ ಇದ್ದರೂ, ಯಾವುದೇ ದೊಡ್ಡ ತೊಂದರೆ ಆಗಿಲ್ಲ. ಘಟನೆ ಆದಾಗ ಆಂಬ್ಯುಲೇನ್ಸ್ ಕೂಡ ಲೇಟ್ ಆಗಿ ಬಂತು ಅಂತ ಬೇಸರವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಕೆರೆಯಂತಾದ ಬೆಂಗಳೂರು-ಹೊಸೂರು ಹೈವೆ; ಡ್ಯಾಡಿಸ್ ಗಾರ್ಡನ್ ಲೇಔಟ್‌ಗೆ ಜಲದಿಗ್ಬಂದನ

ಬುಡ ಸಮೇತ ಧರೆಗುರುಳಿದ ಮರ, ಕಾರು ಜಖಂ

ಮಳೆಯಾ ಆರ್ಭಟಕ್ಕೆ ಮರವೊಂದು ಧರೆಗುರುಳಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿ ಬುಡ ಸಹಿತ ಬೃಹಾತಕಾರದ ಮರ ಧರೆಗುರುಳಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಗಾಳಿ -ಮಳೆಗೆ ಕುಮಾರಕೃಪಾ ವೆಸ್ಟ್‌ನ ಸುಬ್ರಮಣ್ಯ ದೇವಸ್ಥಾನದ ಬಳಿ ಮರ ಬಿದ್ದು, ಕಾರೊಂದು ಜಖಂಗೊಂಡಿತ್ತು. ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ತೆರವು ಮಾಡಿದ್ದರು.

ಬೆಂಗಳೂರಿನ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡಿ ನಿವಾಸಿಗಳು ಜಾಗರಣೆ ಮಾಡಿದರು. ಮನೆ ಸಾಮಗ್ರಿಗಳನ್ನು ನೀರುಪಾಲಾಗದಂತೆ ರಕ್ಷಿಸಿಕೊಳ್ಳಲು ಜನರು ಪರದಾಡಿದರು. ಅತ್ತ ಮಳೆ ನಿಂತರೂ ಮನೆಯಲ್ಲ ಕೆಸರುಮಯವಾಗಿತ್ತು.

ಇನ್ನೂ ನಿನ್ನೆ ಸುರಿದ ಮಳೆಗೆ ಯಲಹಂಕದ ಅಪಾರ್ಟ್‌ಮೆಂಟ್‌ಗೆ ಕಾಲುವೆ ನೀರು ನುಗ್ಗಿತ್ತು. ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ ಯಲಹಂಕದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿತ್ತು. ಕಳೆದ ಬಾರಿ ಯಲಹಂಕ ನಾರ್ಥ್ ವುಡ್ ವಿಲ್ಲಾಗಳಿಗೆ ನೀರು ನುಗ್ಗಿತ್ತು. ಈಗ ಮತ್ತದೇ ಕಾಲುವೆಯಿಂದ ಸಂಕಷ್ಟ ಎದುರಾಗಿದೆ. ಡಿಸಿಎಂ ವಿಸಿಟ್ ಮಾಡಿ ಸಮ್ಯಸೆ ಪರಿಹಾರಕ್ಕೆ ಅಸ್ತು ಅಂದಿದ್ದರು. ಆದರೆ ಮಳೆ‌ ಬಂದರೆ ಅಪಾರ್ಟ್‌ಮೆಂಟ್ ನಿವಾಸಿಗಳು , ವಿಲ್ಲಾ ನಿವಾಸಿಗಳು ಪರದಾಡುವಂತಾಗಿದೆ. ಜಯದೇವ ಅಂಡರ್ ಪಾಸ್‌ ಮುಳುಗಡೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರ ಹಾಕುತ್ತಿರುವ ದೃಶ್ಯ ಕಂಡು ಬಂತು. ಬನ್ನೇರುಘಟ್ಟ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್‌ ಆಗಿದೆ.

ಸಿಲ್ಕ್ ಬೋರ್ಡ್‌ನಲ್ಲಿ ಫಿಶಿಂಗ್

ಭಾರಿ ಮಳೆಗೆ ಸಿಲ್ಕ್‌ ಬೋರ್ಡ್‌ ಜಲಾವೃತಗೊಂಡಿದೆ. ರಸ್ತೆ ಮೇಲೆ ಮೀನುಗಳು ಬಂದಿದ್ದು, ಜನರು ಮೀನು ಹಿಡಿಯುತ್ತಿರುವ ದೃಶ್ಯವು ಕಂಡು ಬಂತು. ಇತ್ತ ಮಳೆಯಿಂದಾಗಿ ಹೆಬ್ಬಾಳ ಫ್ಲೈ ಓವರ್ ಸಂಪೂರ್ಣ ಟ್ರಾಫಿಕ್‌ ಜಾಮ್‌ ಆಗಿತ್ತು. ವರ್ತುರು ವಾರ್ಡ್‌ನಲ್ಲಿ ರಸ್ತೆಗಳೆಲ್ಲ ಮಳೆಯ ನೀರಿನಿಂದ ಆವೃತವಾಗಿತ್ತು.

ಶಿಶುವಿಹಾರ ಕಾಂಪೌಂಡ್‌ ಕುಸಿತ

ಬೆಂಗಳೂರಿನ ಮಾಗಡಿ ರಸ್ತೆಯ ಕೆ.ಪಿ ಅಗ್ರಹಾರ ಶಿಶುವಿಹಾರ ಕಾಂಪೌಂಡ್ ಕುಸಿದು ಬಿದ್ದಿದೆ. ಸ್ವಲ್ಪದರಲ್ಲೇ ಮಕ್ಕಳು ಪಾರಾಗಿದ್ದಾರೆ. ಶಿಶುವಿಹಾರದ ಕಾಂಪೌಂಡ್ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಶಿಕ್ಷಕಿಯರು ಆತಂಕದಲ್ಲೇ ಶಿಶುವಿಹಾರವನ್ನು ನಡೆಸುತ್ತಿದ್ದಾರೆ.

ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ

ಕೊಡಿಗೇಹಳ್ಳಿ – 61 ಮಿಮೀ
ವಿವಿಪುರಂ – 57 ಮಿಮೀ
ವಿದ್ಯಾಪೀಠ – 56 ಮಿಮೀ
ಹಗದೂರು – 54 ಮಿಮೀ
ಯಲಹಂಕ – 51 ಮಿಮೀ
ಆರ್ ಆರ್ ನಗರ – 50 ಮಿಮೀ
ವಿ ನಾಗೇನಹಳ್ಳಿ – 50 ಮಿಮೀ
ಪುಲಿಕೇಶಿ ನಗರ – 49 ಮಿಮೀ
ಅರೆಕರೆ – 48 ಮಿಮೀ
ಹೆಚ್ ಎಸ್ ಆರ್ ಲೇಔಟ್ -45 ಮಿಮೀ
ನಾಗಪುರ – 44 ಮಿಮೀ
ಕಾಟನ್ ಪೇಟೆ – 43 ಮಿಮೀ
ಚಾಮರಾಜಪೇಟೆ – 43 ಮಿಮೀ
ಬಿಟಿಎಂ ಲೇಔಟ್ – 41 ಮಿಮಿ
ಹೂಡಿ – 40 ಮಿಮೀ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version