ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರು ಜನರಿಗೆ ಶುಕ್ರವಾರದಂದು ಮಳೆಯು (Bengaluru Rains) ಧರೆಗಿಳಿದು ಬಂದಿತ್ತು. ಶುಕ್ರವಾರ ಬೆಳಗ್ಗೆ ರಣ ಬಿಸಿಲು, ಧಗೆಯಿಂದ ಜನರು ಕಂಗಲಾಗಿದ್ದರು. ಮಧ್ಯಾಹ್ನದ ಊಟ ಮುಗಿಸಿ ಹೊರಗೆ ಬಂದವರಿಗೆ ಕಾರ್ಮೋಡ ಕವಿದಿತ್ತು. ನೋಡನೋಡುತ್ತಿದ್ದ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆ ಸುರಿದಿದೆ.
ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದರು.
ಆಲಿಕಲ್ಲು ಸಹಿತ ಮಳೆಯಾರ್ಭಟ
ಇನ್ನೂ ರಾಜ್ಯ ಗಡಿ ಡೆಂಕಣಿಕೋಟೆ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಸೂಲಗಿರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಜೋರು ಮಳೆಯಾಗುತ್ತಿದೆ.
ಬ್ಯಾರಿಕೇಟ್ ಹಾಕಿ ಅಂಡರ್‌ಪಾಸ್ ಕ್ಲೋಸ್
ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ನದಿಯಂತಾಗಿತ್ತು. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್ ಬಿಲ್ಡಿಂಗ್ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಎಂಎಸ್ ಬಿಲ್ಡಿಂಗ್ ಸಮೀಪವೇ ಇರುವ ಅಂಡರ್ ಪಾಸ್‌ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.
ಧರೆಗೆ ಬಿದ್ದ ಮರಗಳು
ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ಇನ್ನೂ ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದ ಎಟಿಎಂ (ATM) ಕೊಠಡಿಗೆ ನೀರು ನುಗ್ಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ