Site icon Vistara News

Load Shedding : ವಿದ್ಯುತ್‌ ಬೇಡಿಕೆ ಹೆಚ್ಚಿದೆ, ಖರೀದಿ ಬಗ್ಗೆ ಇಂದು ಸಭೆ; ಕರೆಂಟ್ ಉತ್ಪಾದಕರು ರಾಜ್ಯಕ್ಕೇ ಮಾರಬೇಕು: ಸಿಎಂ

CM siddaramaiah

ಬೆಂಗಳೂರು: ರಾಜ್ಯದಲ್ಲಿ ಮಳೆ ಕಡಿಮೆ (Less rainfall) ಆಗಿದೆ. ಇದರಿಂದ ವಿದ್ಯುತ್‌ ಅಭಾವ ಸೃಷ್ಟಿಯಾಗಿದೆ. ಜತೆಗೆ ಈಗಲೇ ಬೇಸಿಗೆ ಕಾಲದಲ್ಲಿ ಬರುವ ರೀತಿಯಲ್ಲಿ ವಿದ್ಯುತ್ತಿಗೆ ಬೇಡಿಕೆ (Demand for electricity) ಹೆಚ್ಚಾಗಿದೆ. ಇದರಿಂದ ಮತ್ತಷ್ಟು ಅಭಾವ ಆಗಿದೆ. ಹೀಗಾಗಿ ವಿದ್ಯುತ್‌ ಸರಬರಾಜಿನ (Power Supply) ಬಗ್ಗೆ ಪರ್ಯಾಯ ಮಾರ್ಗಗಳತ್ತ ಸರ್ಕಾರ ದೃಷ್ಟಿ ಹರಿಸಿದೆ. ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿ (Purchase of power from other states) ಮಾಡುವ ಬಗ್ಗೆ ಚರ್ಚೆ ನಡೆಸಲು ಇಂದು (ಶುಕ್ರವಾರ – ಅ. 13) ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಈ ಮೂಲಕ ಲೋಡ್‌ ಶೆಡ್ಡಿಂಗ್‌ಗೆ (Load Shedding) ವಿದ್ಯುತ್‌ ಕೊರತೆಯೇ (Power shortage) ಇರುವ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೆ, ಈ ಬಾರಿ ಈ ಅವಧಿಯಲ್ಲಿ 15 ಸಾವಿರದಿಂದ 16 ಸಾವಿರ ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಗರಿಷ್ಠ ಬೇಡಿಕೆ ಬಂದಿದೆ. ಆದರೆ, ಕಳೆದ ವರ್ಷ ಇದೇ ಅವಧಿಗೆ 9 ಸಾವಿರದಿಂದ 10 ಸಾವಿರ ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಬಳಕೆಯಾಗಿತ್ತು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Drought in Karnataka : ಬರಪೀಡಿತ ರಾಜ್ಯದತ್ತ ಕರ್ನಾಟಕ; ಬರ್ಬರ ಬರಕ್ಕೆ ತುತ್ತಾದ 216 ತಾಲೂಕು!

ಹೊರ ರಾಜ್ಯದಿಂದ ಖರೀದಿಗೆ ಇಂದು ಸಭೆ

ವಿದ್ಯುತ್ ಅನ್ನು ಹೊರಗಿನಿಂದ (ಬೇರೆ ರಾಜ್ಯಗಳಿಂದ) ಹೇಗೆ ಖರೀದಿಸುವುದು ಎಂದು ಚರ್ಚಿಸಲು ಇಂದು ಮಧ್ಯಾಹ್ನ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚೆ ನಡೆಸಿ ವಿದ್ಯುತ್‌ ಖರೀದಿ ಬಗ್ಗೆ ತೀರ್ಮಾನಿಸಲಾಗುವುದು. ಇನ್ನು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ಮಾರಾಟ ಮಾಡಬೇಕು. ಬೇರೆಲ್ಲಿಯೂ ಮಾರಾಟ ಮಾಡಬಾರದು ಎಂದು ಆದೇಶವನ್ನೂ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಗೆ ವಸ್ತುಸ್ಥಿತಿ ತಿಳಿದಿಲ್ಲ

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಹೇಳಿದ್ದಕ್ಕೆಲ್ಲ ಉತ್ತರ ನೀಡಲು ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೆ ತಿಳಿದಿದೆಯೇ? ಮಳೆ ಇಲ್ಲದೆ ಬರಗಾಲ ಬಂದು ತೊಂದರೆಯಾಗಿದೆ. ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್‌ನಲ್ಲಿ 7 ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಇಂಧನ ಖರೀದಿಗೆ ಮುಂದಾಗಿದ್ದೇವೆ: ಜಾರ್ಜ್

ಈ ಬಗ್ಗೆ ನವ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್‌, ವಿದ್ಯುತ್‌ ಕೊರತೆ ನೀಗಿಸಲು ಬೇರೆ ಬೇರೆ ರಾಜ್ಯಗಳ ಬಗ್ಗೆ ಮಾತನಾಡುತ್ತಾ ಇದ್ದೇವೆ. ನಮಗೆ ತೊಂದರೆ ಆಗಿದೆ. ಇದಕ್ಕೆ ಬಿಜೆಪಿ ಕಾರಣ. ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಅನ್ನು ಹೆಚ್ಚಿಸುವ ಯಾವ ಕೆಲಸವನ್ನೂ ಈ ಸರ್ಕಾರ ಮಾಡಿಲ್ಲ. ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನದ ಉತ್ಪಾದನೆಯನ್ನು ಹೆಚ್ಚು ಮಾಡಿದ್ದೆವು. ಆದರೆ, ಬಿಜೆಪಿಯವರು 4 ವರ್ಷ ನಿದ್ದೆ ಮಾಡಿರುವ ಸಲುವಾಗಿ ಇಂದು ನಮಗೆ ವಿದ್ಯುತ್ ಕೊರತೆ ಆಗಿದೆ ಎಂದು ಹೇಳಿದ್ದಾರೆ.

ವಿದ್ಯುತ್‌ ಕೊರತೆ ನೀಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಬೇರೆ ರಾಜ್ಯದಿಂದ ವಿದ್ಯುತ್‌ ಖರೀದಿ ಮಾಡಿ ನೀಡಲಾಗುವುದು ಎಂದು ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಜಾಗ ಕೇಳಿದ್ದೇವೆ

ಸಬ್ ಸ್ಟೇಷನ್‌ಗಳಲ್ಲಿ ಸೋಲಾರ್ ಎನರ್ಜಿ ಅಳವಡಿಕೆ ಕ್ರಮ ವಹಿಸಲಾಗಿದೆ. ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವುದಕ್ಕೆ ಕೆಲ ಸರ್ಕಾರಿ ಭೂಮಿಗಳನ್ನು ಸಹ ಇಂಧನ ಇಲಾಖೆಯಿಂದ ಕೇಳಿದ್ದೇವೆ. ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೂ ಸಹ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಬಿಜೆಪಿಗೆ ತಿರುಗೇಟು

ಕೆ.ಜೆ. ಜಾರ್ಜ್ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು 4 ವರ್ಷ ನಿದ್ದೆ ಮಾಡಿದ್ದಾರೆ. ಜಾರ್ಜ್ ಕಾಣೆಯಾಗಿಲ್ಲ. ನಾನು ದೆಹಲಿಗೆ ಬಂದು ಕೇಂದ್ರದ ಇಂಧನ ಸಚಿವರನ್ನು ಭೇಟಿ ಮಾಡಿದ್ದೇನೆ. ರಾಜ್ಯಕ್ಕೆ ಹೆಚ್ಚಿನ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದ್ದೇನೆ. ಅಲ್ಲದೆ, ಇತರೆ ಕೇಂದ್ರ ಸರ್ಕಾರದ ಅಧಿಕಾರಗಳನ್ನು ಇಂಧನ ವಿಚಾರವಾಗಿಯೇ ಭೇಟಿ ಮಾಡಿದ್ದೇನೆ. ನಾನು ದೆಹಲಿಗೆ ಬಂದಿದ್ದರೂ ಕರ್ನಾಟಕದ ವಿಚಾರವನ್ನೇ ಮಾತನಾಡುತ್ತಿದ್ದೇನೆ. ಬಿಜೆಪಿಯವರಿಂದಾಗಿಯೇ ಈ ಕೊರತೆ ಬಂದಿದೆ. ಒಂದು ದಿನದಲ್ಲಿ ಈ ಕೊರತೆ ನೀಗಿಸಲು ಸಾಧ್ಯ ಇಲ್ಲ. ಹಾಗಾಗಿ ಕೊರತೆ ಸರಿದೂಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Load Shedding : ಕೆ.ಜೆ. ಜಾರ್ಜ್‌ ಕಾಣೆ; ಹುಡುಕಿಕೊಟ್ಟರೆ ಸಿಂಗಲ್‌ ಫೇಸ್‌ ವಿದ್ಯುತ್‌ ಉಚಿತ, ಖಚಿತ, ನಿಶ್ಚಿತ!

ನಿದ್ದೆ ಮಾಡಿದ್ದು ಬಿಜೆಪಿ ಗ್ಯಾರಂಟಿನಾ?

ಕರೆಂಟ್ ಕಟ್ ಎಂಬುದು ಕಾಂಗ್ರೆಸ್ ಗ್ಯಾರಂಟಿನಾ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಜೆ. ಜಾರ್ಜ್‌, 4 ವರ್ಷ ಸುಮ್ಮನೆ ಕುಳಿತು, ನಿದ್ದೆ ಮಾಡಿದ್ದು ಬಿಜೆಪಿ ಗ್ಯಾರಂಟಿನಾ? ಇಂಧನ ಸಚಿವರು ಕಾಣೆಯಾಗಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ನಾನೇನು ಹೋಗಿ ಬಿಜೆಪಿ ಆಫೀಸ್‌ನಲ್ಲಿ ಕುಳಿತುಕೊಳ್ಳಲಾ? ಅಥವಾ ಬಸವರಾಜ ಬೊಮ್ಮಾಯಿ ಅವರ ಮನೆಗೆ ಹೋಗಿ ಕುಳಿತುಕೊಳ್ಳಲೇ? ನಾನಂತೂ ಕಾಣೆಯಾಗಿಲ್ಲ. ನಾನು ನವ ದೆಹಲಿಗೆ ಬಂದು ಏನು ಮಾಡಿದ್ದೇನೆ ಎಂದು ಫೋಟೊ ಸಮೇತ ಹಾಕಿದ್ದೇನೆ. ಬಿಜೆಪಿಯನ್ನು ಜನ ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಅದಕ್ಕೆ ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಜನ ಅಥವಾ ರೈತರು ಪ್ರತಿಭಟನೆ ಮಾಡೋದಾದರೆ ಬಿಜೆಪಿ ಆಫೀಸ್ ಮುಂದೆ ಹೋಗಿ ಪ್ರತಿಭಟನೆ ಮಾಡಲಿ. ಅವರೇ ಇವತ್ತಿನ ಸ್ಥಿತಿಗೆ ಹೊಣೆ ಎಂದು ಹೇಳಿದ್ದಾರೆ.

Exit mobile version