ಬೆಂಗಳೂರು: ಕೆಲ ದಿನಗಳಿಂದ ವರುಣನ ಆಗಮನವಿಲ್ಲದೆ ಆಕಾಶದ ಕಡೆ ಮುಖ ಮಾಡುವಂತಾಗಿದ್ದ ಪರಿಸ್ಥಿತಿ ಈಗ ಬದಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇನ್ನು ಭಾನುವಾರವೂ (ಸೆಪ್ಟೆಂಬರ್ 3) ಬೆಂಗಳೂರು (Bengaluru) ಸೇರಿ ರಾಜ್ಯದ ಹಲವೆಡೆ ಭಾರಿ (Rain News) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ, ಬೆಂಗಳೂರಿಗರಿಗೆ ವೀಕೆಂಡ್ ಮಸ್ತಿಗೆ ವರುಣ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿವೆ.
ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ. ಚಾಮರಾಜಪೇಟೆ, ಮೆಜೆಸ್ಟಿಕ್ ಸೇರಿ ಕೆಲವೆಡೆ ತುಂತುರು ಮಳೆಯಾಗಿದೆ. ಸೆಪ್ಟೆಂಬರ್ 7ರವರೆಗೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ, ಭಾನುವಾರ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ವರುಣನ ಸಿಂಚನ
ಎಲ್ಲೆಲ್ಲಿ ಜೋರು ಮಳೆ?
ಉತ್ತರ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ವರುಣನ ಆರ್ಭಟ ಜೋರಿರಲಿದೆ. ಭಾನುವಾರ ಬೀದರ್, ಕಲಬುರಗಿ, ಸೋಮವಾರ ಕಲಬುರಗಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: India vs Pakistan Match Live Updates: ಭಾರತ-ಪಾಕ್ ಪಂದ್ಯ ಮಳೆಯಿಂದ ರದ್ದು
ಹಾಗೆಯೇ, ಬೆಳಗಾವಿ, ಚಾಮರಾಜನಗರ, ಕೋಲಾರ, ರಾಮನಗರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ, ಕೋಣನಕುಂಟೆ, ಉತ್ತರಹಳ್ಳಿ ಭಾಗದಲ್ಲಿ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲ ದಿನಗಳಿಂದ ಮಳೆಯಾಗದೆ ಒಣಹವೆಯಿಂದಾಗಿ ಬೇಸಿಗೆ ಅನುಭವವಾಗಿತ್ತು. ಆದರೆ, ಆಗಸ್ಟ್ 31ರಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿರುವುದು ರೈತರು ಸೇರಿ ಎಲ್ಲರಿಗೂ ಸಂತಸ ಆಗಿದೆ.