ಉಡುಪಿ/ಮೈಸೂರು: ಭಾರಿ ಮಳೆಗೆ (Karnataka Rain) ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಕೂಲಿಕಾರ್ಮಿಕ ಕೊಚ್ಚಿ ಹೋಗಿದ್ದಾರೆ. ಉಡುಪಿಯ ಹೆಬ್ರಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚಿರೋಳ್ಳಿ ಎಂಬಲ್ಲಿ ಘಟನೆ ನಡೆದಿದೆ. ತುಮಕೂರು ಮೂಲದ ಆನಂದ್ (45) ನೀರು ಪಾಲಾದವರು. ಕೆಲಸಕ್ಕೆ ತೆರಳಲು ಸೀತ ನದಿಯ ಉಪನದಿಯನ್ನು ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಕಾಲು ಸೇತುವೆ ಇಲ್ಲದ ಹಿನ್ನೆಲೆಯಲ್ಲಿ ಹಗ್ಗದ ಸಹಾಯದಿಂದ ಹೊಳೆ ದಾಟುವಾಗ ಹಗ್ಗ ತುಂಡಾಗಿದೆ. ಪರಿಣಾಮ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನಾಡ್ಪಾಲಿನ ಮನೋರಮ ಹೆಗ್ಡೆ ಎಂಬುವರ ತೋಟದಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದರು. ಘಟನಾ ಸ್ಥಳಕ್ಕೆ ಹೆಬ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ
ಮೈಸೂರು ಜಿಲ್ಲೆಯಲ್ಲಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಹೇಮಲತಾ (22) ಮೃತ ದುರ್ದೈವಿ. ಅವಘಡದಲ್ಲಿ ತಾಯಿ ಮೃತಪಟ್ಟರೆ ಜತೆಗಿದ್ದ ಮಗುವನ್ನು ರಕ್ಷಣೆ ಮಾಡಲಾಗಿದೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮನೆ ಘಟನೆ ನಡೆದಿದೆ.
ಚಿಕ್ಕಮಗಳೂರಲ್ಲಿ ಭಾರಿ ಗಾಳಿ ಮಳೆಗೆ ಮನೆ ನೆಲಸಮ
ಚಿಕ್ಕಮಗಳೂರಿನಲ್ಲಿ ಅವಾಂತರಗಳು ಮುಂದುವರಿದಿದ್ದು, ಭಾರಿ ಗಾಳಿ ಮಳೆಗೆ ಮನೆಯೊಂದು ನೆಲಸಮವಾಗಿದೆ. ಗೋಡೆ ಕುಸಿದು ಮನೆಯ ಚಾವಣಿ ಧ್ವಂಸಗೊಂಡಿದೆ. ಮೂಡಿಗೆರೆ ತಾಲೂಕಿನ ಬೆಟ್ಟಿಗೆರಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸುಂದರ್ ಎಂಬುವವರ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥ ನಾಶವಾಗಿವೆ. ಮನೆಯ ಗೋಡೆ ಕುಸಿದು ಸ್ವಲ್ಪದರಲ್ಲೇ ಕುಟುಂಬ ಸದಸ್ಯರು ಪಾರಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ, ಒಡೆಯರ ಪುರ ಗ್ರಾಮದಲ್ಲಿ ಗ್ರಾಮದ ದ್ಯಾವಯ್ಯ, ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆಗೂ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಮಳೆಗೆ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಹಾಸನದಲ್ಲೂ ಕುಸಿದು ಬಿದ್ದ ಮನೆ ಗೋಡೆ
ಇತ್ತ ಹಾಸನ ಜಿಲ್ಲೆಯಲ್ಲೂ ಮಳೆ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ವ್ಯಾಪಕವಾಗಿ ಸುರಿದ ಮಳೆಗೆ ಮನೆಯ ಗೋಡೆಯು ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ವಿಶೇಷ ಚೇತನ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಂದೀಶ್ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಅವಘಡ ನಡೆದಿದೆ. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ವಾಸದ ಮನೆ ಕಳೆದುಕೊಂಡು ನಂದೀಶ್ ಕಂಗಾಲಾಗಿದ್ದಾರೆ.
ಇದನ್ನೂ ಓದಿ: Dengue Fever : ಡೆಂಗ್ಯೂ ಭೀತಿ- ಸೊಳ್ಳೆಗಳ ನಾಶಕ್ಕೆ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಹೆದ್ದಾರಿ ಮಧ್ಯೆ ನೆಲ ಕಚ್ಚಿದ ಬೃಹತ್ ಮರ
ರಾಜ್ಯ ಹೆದ್ದಾರಿಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಸೊರಬ – ಆನವಟ್ಟಿ – ಶಿರಸಿ ಸಂಚಾರ ವ್ಯತ್ಯಯವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ನಿಂತಲೇ ನಿಲ್ಲುವಂತಾಯಿತು. ಸ್ಥಳಕ್ಕೆ ಅರಣ್ಯಾಧಿಕಾರಿ ತಂಡ ಭೇಟಿ ನೀಡಿ ಮರ ತೆರವು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಳೆಯು ಅಬ್ಬರಿಸುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಿಸಿದೆ. ಕ್ಷಣ ಕ್ಷಣಕ್ಕೂ ತುಂಗಾ ನದಿಯ ಹರಿವಿನ ಮಟ್ಟ ಏರಿಕೆ ಆಗುತ್ತಿದ್ದು, ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆ ಜನರು ಆತಂಕದಲ್ಲೇ ದಿನಕಳೆಯುವಂತಾಗಿದೆ.
ಅದ್ಯಪಾಡಿಯಲ್ಲಿ ನೆರೆ ಸೃಷ್ಟಿ
ದಕ್ಷಿಣ ಕನ್ನಡದ ಮಂಗಳೂರಿನ ಅದ್ಯಪಾಡಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಫಲ್ಗುಣಿ ನದಿಯಲ್ಲಿ ನೆರೆ ಬಂದು ಗ್ರಾಮಕ್ಕೆ ನೀರು ನುಗ್ಗಿದ್ದು, ಅದ್ಯಪಾಡಿಯಲ್ಲಿ 35 ಮನೆಗಳಿಗೆ ಜಲ ದಿಗ್ಬಂಧನ ಹಾಕಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಂತ್ರಸ್ತರ ಮನೆಗಳಿಗೆ ದೋಣಿಯಲ್ಲಿ ತೆರಳಿ ಪರಿಶೀಲನೆ ನಡೆಸಿದ್ದರು. ನೆರೆ ನೀರಿನಿಂದ ಸಂತ್ರಸ್ತರಾಗಿರುವ 80 ಮಂದಿಯ ಸ್ಥಳಾಂತರಕ್ಕೆ ಸೂಚನೆ ನೀಡಿದರು.
ನದಿ ದಾಟಲು ಎಮ್ಮೆ ಬಾಲವೇ ಆಸರೆ
ನದಿ ದಾಟಲು ಎಮ್ಮೆ ಬಾಲವೇ ರೈತರಿಗೆ ಆಸರೆಯಾಗಿದ್ದು, ಈ ದೃಶ್ಯ ಎದೆ ಝೆಲ್ ಎನಿಸುತ್ತದೆ. ಜೀವ ಪಣಕ್ಕಿಟ್ಟು ರೈತರು ಮಲಪ್ರಭಾ ನದಿ ದಾಟುತ್ತಿದ್ದಾರೆ. ಹತ್ತು ಸಾವಿರ ಕ್ಯೂಸೆಕ್‌ನಷ್ಟು ನೀರಿನ ಹರಿವಿನಲ್ಲಿ ನದಿ ದಾಟುತ್ತಿದ್ದು, ಬೆಳಗಾವಿಯ ಹುಣಶೀಕಟ್ಟಿ ಗ್ರಾಮದ ರೈತರು ಗೋಳಾಟ ಹೇಳತಿರದು. ದಿನವೂ ಪ್ರಾಣ ಕೈಯಲ್ಲಿ ಹಿಡಿದುಕೊಂಡು ನದಿ ದಾಟಿ ಜಮೀನಿಗೆ ಹೋಗುವ ಪರಿಸ್ಥಿತಿ ಇದೆ.
ಯುವಕರು ಎಮ್ಮೆಯೊಟ್ಟಿಗೆ ಈಜಿ ದಡ ಸೇರಿ ಜಮೀನಿನಲ್ಲಿ ಕೆಲಸ ಮಾಡಿದರೆ, ಮಹಿಳೆಯರು ತೆಪ್ಪದಲ್ಲಿ ನದಿ ದಾಟಿ ಜಮೀನಿಗೆ ಹೋಗುತ್ತಾರೆ. ಕಾರವಾರದಿಂದ ಈಗಾಗಲೇ ಒಂದು ಬೋಟ್ ನೀಡಿದರೂ ಪ್ರಯೋಜನವಾಗಿಲ್ಲ. ಬೋಟ್ ನಿರ್ವಹಣೆ ಮತ್ತು ಸಿಬ್ಬಂದಿಗೆ ಸಂಬಳ ಕೊಡಲು ಆಗದೇ ಸ್ಥಗಿತಗೊಂಡಿದೆ. ಹೊಲಗದ್ದಗಳಿಗೆ ಹೋಗುವುದಕ್ಕೆ ಇಲ್ಲಿ ತೆಪ್ಪವೇ ಆಸರೆಯಾಗಿದೆ. ಡಿಸೇಲ್ ಬೋಟ್ ಇದ್ದರೂ ಪ್ರಯೋಜನವಿಲ್ಲ. ಹೀಗಾಗಿ ಅನಿವಾರ್ಯವಾಗಿ ತೆಪ್ಪದಲ್ಲಿಯೇ ಹೊಲಗದ್ದೆಗಳಿಗೆ ತೆರಳುವಂತಾಗಿದೆ.
ಕುಮಟಾದಲ್ಲೂ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯಾಟಕ್ಕೆ ಈಗಾಗಲೇ ಶಿರೂರು ಗುಡ್ಡ ಕುಸಿದಿದೆ. ಇದೀಗ ಕುಮಟಾ ಭಾಗದಲ್ಲೂ ಗುಡ್ಡ ಕುಸಿದಿದೆ. ಕುಮಟಾ-ಸಿದ್ದಾಪುರ ಹೆದ್ದಾರಿಯ ಉಳ್ಳೂರುಮಠ ರಸ್ತೆಗೆ ಧರೆ ಕುಸಿದಿದೆ. ನೂರು ಮೀಟರ್ ಎತ್ತರದಿಂದ ಗುಡ್ಡದ ಮಣ್ಣು, ಮರವು ಕುಸಿದು ಹೆದ್ದಾರಿಗೆ ಬಿದ್ದಿದೆ. ಹೀಗಾಗಿ ಕುಮಟಾ-ಸಿದ್ದಾಪುರ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ