ಮಂಗಳೂರು: ಕರಾವಳಿಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ (Karnataka Rain News). ಭಾರಿ ಗಾಳಿ ಮಳೆಗೆ ಮನೆ ಕುಸಿದು ಬಾಲಕ ಮೃತಪಟ್ಟಿರುವ ಘಟನೆ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ. ಮೃತ ಬಾಲಕನ್ನು ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ಗುರುತಿಸಲಾಗಿದೆ.
ಭಾರಿ ಗಾಳಿ-ಮಳೆಗೆ ಮನೆಯ ಮೇಲೆ ತಡೆಗೋಡೆ ಕುಸಿದು ಈ ದುರಂತ ಸಂಭವಿಸಿದೆ. ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿಯಾಗಿರುವ ಶೈಲೇಶ್ ಕುಸಿತವಾದ ಮನೆಗೆ ಅತಿಥಿಯಾಗಿ ಬಂದಿದ್ದ. ಬುಧವಾರ ರಾತ್ರಿ ಮಂಗಳೂರು ಭಾಗದಲ್ಲಿ ಭಾರಿ ಮಳೆಯಾಗಿತ್ತು. ಈ ಹಿನ್ನಲೆಯಲ್ಲಿ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದಿದೆ.
ಚಿಕ್ಕಮಗಳೂರಲ್ಲಿ ಸಂಚಾರ ಅಸ್ತವ್ಯಸ್ತ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಾಳಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ತಾಲೂಕಿನ ಮಾವಿನಗುಣಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದು ನಾಲ್ಕೈದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದ ಕಾರ್ಮಿಕರು, ಸಾರ್ವಜನಿಕರು ಬೇರೆಡೆಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಗಿದೆ. ಒಂದೇ ರಸ್ತೆಯಲ್ಲಿ ಎರಡು ಕಡೆ ಮರಗಳು ಬಿದ್ದಿದ್ದು, ತೆರವಿಗೆ ಅರಣ್ಯ ಸಿಬ್ಬಂದಿ, ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ
ಇನ್ನು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ ಬಿದ್ದಿದೆ. ಈ ವೇಳೆ ವಿದ್ಯುತ್ ಇಲ್ಲದ ಪರಿಣಾಮ ಭಾರಿ ಅನಾಹುತವೊಂದು ತಪ್ಪಿದೆ. ತೀವ್ರ ಮಳೆಯಿಂದ ಮುಳ್ಳಯ್ಯನಗಿರಿ ರಸ್ತೆಯ ಐದಾರು ಕಡೆ ವಿದ್ಯುತ್ ಕಂಬಗಳು ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹಲವು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ.
ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ಬುಡಸಮೇತ ಬೃಹತ್ ಮರ ರಸ್ತೆಗುರುಳಿದ್ದು, ವಸ್ತಾರೆ-ಆಲ್ದೂರು ರೋಡ್ ಬ್ಲಾಕ್ ಆಗಿದೆ. ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್.ಪುರದ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಕಂಡು ಬಂದಿದೆ. ಸ್ಥಳಿಯರು, ಅರಣ್ಯ ಇಲಾಖೆ ಅಧಿಕಾರಿಗಳಿಂದ ತೆರವು ಕಾರ್ಯ ನಡೆಯುತ್ತಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಾರ್ಕಂಡೇಯ ನದಿ
ಬೆಳಗಾವಿ: ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೋಕಾಕ್ ತಾಲೂಕಿನ ಕುಂದರಗಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂಕಲಗಿ ಗ್ರಾಮದಲ್ಲಿರುವ ಅಡವಿಸಿದ್ದೇಶ್ವರ ಮಠ ಜಲಾವೃತಗೊಂಡಿದೆ. ಮಠಕ್ಕೆ ನೀರು ನುಗ್ಗುವ ಮುನ್ನವೇ ಎರಡು ಅಡಿ ನೀರಲ್ಲೇ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ, ಅಡುಗೆ ಸಿಬ್ಬಂದಿ ಮತ್ತು ಹತ್ತಕ್ಕೂ ಅಧಿಕ ಮಕ್ಕಳು ಸುರಕ್ಷಿತವಾಗಿ ಹೊರಕ್ಕೆ ಬಂದಿದ್ದಾರೆ. ಅಂಕಲಗಿ ಗ್ರಾಮದಲ್ಲಿರುವ ಮೂಲ ಮಠಕ್ಕೆ ಸ್ವಾಮೀಜಿ ತೆರಳಿದ್ದಾರೆ. ಮಾರ್ಕಂಡೇಯ ನದಿಯಲ್ಲಿ 6 ಸಾವಿರ ಕ್ಯೂಸೆಕ್‌ನಷ್ಟು ಹರಿವು ಇದೆ. ಇದರಿಂದ ಕುಂದರಗಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ: 10ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ
ಮನೆ ಮೇಲೆ ಉರುಳಿ ಬಿದ್ದ ಮರ
ಕೊಡಗು: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ಹಿನ್ನಲೆಯಲ್ಲಿ ವಾಸದ ಮನೆ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರಪೇಟೆಯ ಹಾನಗಲ್ಲು ವ್ಯಾಪ್ತಿಯ ಕಲ್ಕಂದೂರುನಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಎಂಬವರಿಗೆ ಸೇರಿದ ವಾಸದ ಮನೆ ಹಾನಿಗೆ. ಊರಿನವರ ಸಹಾಯದಿಂದ ಮರ ತೆರವುಗೊಳಿಸಲಾಗುತ್ತಿದೆ.
ಎರಡು ಮನೆಗಳ ಮೇಲೆ ಮರ ಬಿದ್ದು ಹಾನಿ
ಉಡುಪಿ: ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಮರ ಬಿದ್ದು ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ನಡೆದ ಘಟನೆ ನಡೆದಿದೆ. ಸೀತಾ ಪೂಜಾರಿ ಮತ್ತು ಲಚ್ಚ ಪೂಜಾರಿ ಅವರ ಮನೆಗೆ ಹಾನಿಯಾಗಿದೆ. ಒಂದು ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದರೆ ಇನ್ನೊಂದು ಮನೆಯ ಮೇಲೆ ಎರಡು ಅಡಿಕೆ ಮರಗಳು ಬಿದ್ದು ಹಾನಿ ಸಂಭವಿಸಿದೆ. ಮನೆಯ ಪಕ್ಕದಲ್ಲಿದ್ದ ಹಲಸಿನ ಮರ ಮತ್ತು ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಸುಮಾರು ಒಂದು ಲಕ್ಷ ರೂ. ನಷ್ಟವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.