ಬೆಂಗಳೂರು: ರಾಜ್ಯಾದ್ಯಂತ ಮಳೆ (Karnataka Rain news) ಅಬ್ಬರಿಸುತ್ತಿದ್ದು, ಹಲವು ಕಡೆ ಪ್ರವಾಹ ಪರಿಸ್ಥಿತಿ (Flood situation) ಉಂಟಾಗಿದೆ. ಕಾವೇರಿ (Kaveri river), ಕೃಷ್ಣಾ (Krishna River), ಘಟಪ್ರಭಾ ನದಿ ತೀರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಗ್ರಾಮಗಳನ್ನು ತೆರವು ಮಾಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ (School holiday) ಮಾಡಲಾಗಿದೆ.
2024ರ ಜುಲೈ ತಿಂಗಳು ಪೂರ್ತಿ ಭರ್ಜರಿ ಮಳೆಯಾದ ಕಾರಣಕ್ಕೆ ಇದೀಗ ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿ ತುಳುಕುತ್ತಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಬರುವ ಮುನ್ಸೂಚನೆ ನೀಡಲಾಗಿದ್ದು ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು- ಮಂಗಳೂರು ನಡುವಿನ ಹಲವು ಸಂಪರ್ಕ ರಸ್ತೆಗಳು ಭೂಕುಸಿತ ಸಮಸ್ಯೆಯಿಂದ ಬಳಲುತ್ತಿದ್ದು, ಈ ಘಾಟಿ ಮಾರ್ಗಗಳಲ್ಲಿ ವಾಹನಗಳ ಸಂಚಾರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭೀಕರ ಮಳೆ ಮುಂದುವರಿದಿದೆ. ಮುಂಗಾರು ಮಳೆ ಅಬ್ಬರಕ್ಕೆ ಪಶ್ಚಿಮ ಘಟ್ಟಗಳು ನಲುಗಿ ಹೋಗಿವೆ. ಭಾರಿ ಮಳೆ ಕಾರಣ ಹಲವೆಡೆ ಭೂಕುಸಿತ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೆಟ್ಟ ಗುಡ್ಡ, ಭೂಮಿ ಕುಸಿದು ಬೀಳುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಿಗೆ ಆಗಸ್ಟ್ 2ರಂದು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆ ಆಗಸ್ಟ್ 2ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲೂ ರಜೆ ಘೋಷಣೆ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಕೂಡ ಮಳೆ ಜೋರಾಗಿ ಸುರಿಯುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ನೆರೆ ಮತ್ತು ಪ್ರವಾಹದ ಭೀತಿಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ತೀರದ ಹತ್ತಾರು ಗ್ರಾಮಗಳು ಮುಳುಗಡೆಯಾಗಿವೆ.
ಇದನ್ನೂ ಓದಿ: Karnataka Weather : 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ತಜ್ಞರು