ಚಿಕ್ಕಮಗಳೂರು: ಮಲೆನಾಡಿನ ಚಿಕ್ಕಮಗಳೂರು ಸೇರಿ ರಾಜ್ಯಾದ್ಯಂತ ಭಾರಿ (Karnataka Rain) ಮಳೆಯಾಗುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕವೊಂದು ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ ಮನೆಯ ಮುಂಭಾಗವೇ 30 ಅಡಿ ಆಳದ ಕಂದಕ ಸೃಷ್ಟಿಯಾಗಿದೆ. ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ಕಂದಕ ಸೃಷ್ಟಿಯಾಗಿದ್ದು, ವಿಚಿತ್ರ ಕಂದಕ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಂದಕದ ಒಳಗಿಂದ ಭೂಮಿ ಒಳಗೆ ನೀರಿನ ಬುಗ್ಗೆ ಹರಿಯುತ್ತಿದೆ. ಬಾವಿ ಆಕಾರದಲ್ಲಿ ಕಂದಕ ಸೃಷ್ಟಿಯಾಗಿದೆ.
ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ಮನೆಯ ಹಿಂಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಕಳಸ ತಾಲೂಕಿನ ಮಾವಿನಕೆರೆ ಕಲ್ಲಾನೆಯಲ್ಲಿ ಘಟನೆ ನಡೆದಿದೆ. ಕಲ್ಲಾನೆಯ ಬಾಸ್ಕರ್ ಪೂಜಾರಿ ಎಂಬುವವರು ಕಂಗಲಾಗಿದ್ದಾರೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದೆ.
ಪ್ರಪಾತಕ್ಕೆ ಬಿದ್ದ ಲಾರಿ, ಚಾಲಕ ಗ್ರೇಟ್ ಎಸ್ಕೇಪ್
ಚಿಕ್ಕಮಗಳೂರಿನಲ್ಲಿ ಲಾರಿ ಚಾಲಕರೊಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವಶಾತ್ ಚಾಲಕ ಬದುಕುಳಿದಿದ್ದಾರೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು, ಲಾರಿಯೊಂದು ಸುಮಾರು 50 ಅಡಿ ಆಳದಲ್ಲಿ ಬಿದ್ದಿದೆ. ಲಾರಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಶೃಂಗೇರಿ ನೆಮ್ಮಾರು ಬಳಿ ರಸ್ತೆ ಕುಸಿದ ಪರಿಣಾಮ ಲಾರಿಯು ಪ್ರಪಾತಕ್ಕೆ ಬಿದ್ದಿದೆ. ನೆಮ್ಮಾರು ವ್ಯಾಪ್ತಿಯ ಹೊಸದೇವರಹಡ್ಳು ಸಮೀಪದಲ್ಲಿ ಘಟನೆ ನಡೆದಿದೆ.
ನಿದ್ರೆಗೆ ಜಾರಿದಾಗ ಮನೆ ಮೇಲೆ ಬಿದ್ದ ಬೃಹತ್ ಮರ
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರಿಕಟ್ಟೆ ಸುತ್ತಮುತ್ತ ಅಪಾಯದ ಮಟ್ಟ ಮೀರಿ ಹಳ್ಳ ಕೊಳ್ಳಗಳು ಹರಿಯುತ್ತಿದ್ದು, ಬಸರಿ ಕಟ್ಟೆ -ಬಿಲಾಳು ಕೊಪ್ಪ ರಸ್ತೆಯು ಜಲಾವೃತಗೊಂಡಿದೆ. ಇತ್ತ ಅಜ್ಜಂಪುರ ತಾಲೂಕಿನ ಗುಡ್ಡದಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕುಟುಂಬಸ್ಥರು ಮನೆಯಿಂದ ಎದ್ದು ಓಡಿದ್ದಾರೆ. ಕುಟುಂಬಸ್ಥರು ನಿದ್ದೆಯಲ್ಲಿದ್ದಾಗ ಏಕಾಏಕಿ ಮರ ಬಿದ್ದು, ಚಾವಣಿ ಸಂಪೂರ್ಣ ಹಾನಿಯಾಗಿದೆ. ಗ್ರಾಮದ ರವಿ ಎಂಬುವರಿಗೆ ಸೇರಿದ ಮನೆಯವರು ಪಾರಾಗಿದ್ದಾರೆ.
ಕೊಚ್ಚಿ ಹೋದ ಅಡಿಕೆ ತೋಟ
ಭದ್ರಾ ನದಿ ಪ್ರವಾಹದಿಂದ ತೋಟ-ಗೆದ್ದೆಗಳು ಜಲಾವೃತಗೊಂಡಿದೆ. ಮಹಾಮಳೆಗೆ ಅರ್ಧ ಎಕರೆ ಅಡಿಕೆ ತೋಟ ಕೊಚ್ಚಿ ಹೋಗಿದೆ. ಕಳಸ ತಾಲೂಕಿನ ಮಕ್ಕಿಮನೆಯ ನಾಗೇಂದ್ರ ಎಂಬುವರಿಗೆ ಸೇರಿದ ತೋಟದಲ್ಲಿ ಮಣ್ಣು ಕುಸಿತವಾಗಿ ಅರ್ಧ ಎಕರೆ ಅಡಿಕೆ ಗಿಡಗಳು ಮಣ್ಣುಪಾಲಾಗಿದೆ. ನಡ್ಲುಮನೆಯ ವರ್ಧಮಾನಯ್ಯ ಎಂಬುವವರ 3 ಎಕರೆ ನಾಟಿ ಮಾಡಿದ ಭತ್ತದ ಗದ್ದೆ ಜಲಾವೃತವಾಗಿದೆ.
ಇದನ್ನೂ ಓದಿ: Kannada Actress: `ಬ್ಯಾಕ್ ಬೆಂಚರ್ಸ್’ ಬಿಡುಗಡೆಗೂ ಮುನ್ನವೇ ಹಲವು ಅವಕಾಶಗಳು ಈ ನಟಿಗೆ!
ಕೊಡಗಿನಲ್ಲಿ ಗುಡ್ಡ ಕುಸಿತ ಭೀತಿ; ರಾತ್ರಿ ಸಂಚಾರ ಬಂದ್
ಕೊಡಗಿನಲ್ಲಿ ಮಳೆ ತಗ್ಗಿದರೂ ಪ್ರವಾಹದ ಪರಿಸ್ಥಿತಿ ತಗ್ಗಿಲ್ಲ. ಕುಶಾಲನಗರದ ಸಾಯಿ ಬಡಾವಣೆಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಸುಮಾರು 25ಕ್ಕೂ ಅಧಿಕ ಮನೆಗಳಿರುವ ಸಾಯಿ ಬಡಾವಣೆಯೊಳಗೆ ಕಾವೇರಿ ನದಿ ನೀರು ನುಗ್ಗಿ ಜಲಾವೃತಗೊಂಡಿದೆ. ಹೀಗಾಗಿ ನಿವಾಸಿಗಳು ಮನೆಗಳನ್ನು ತೊರೆಯುತ್ತಿದ್ದಾರೆ. ಮಳೆ ಹೆಚ್ಚಾದರೇ ಬಡಾವಣೆಯೇ ಮುಳುಗುವ ಆತಂಕವಿದೆ. ಸಾಯಿ ಬಡಾವಣೆ ಜತೆಗೆ ಕುವೆಂಪು ಬಡಾವಣೆಗೂ ಜಲ ಕಂಟಕವಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಮಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಬಳಿ ಗುಡ್ಡ ಕುಸಿಯುವ ಭೀತಿ ಇದೆ. ಹೀಗಾಗಿ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಿ ಕೊಡಗು ಡಿಸಿ ಆದೇಶ ಹೊರಡಿಸಿದ್ದಾರೆ. ಗುಡ್ಡದ ಕೆಳಭಾಗದಲ್ಲಿ ಸ್ವಲ್ಪ ಮಣ್ಣು ಜರಿದಿದ್ದು, ಬಿರುಕು ಮೂಡುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ಜೋರು ಮಳೆಗೆ ಕುಸಿದು ಬಿದ್ದ ಮನೆ
ಕರಾವಳಿ, ಮಲೆನಾಡು ಮಾತ್ರವಲ್ಲದೇ ಒಳನಾಡು ಭಾಗದಲ್ಲೂ ಮಳೆಯು ಅಬ್ಬರಿಸುತ್ತಿದೆ. ಮೈಸೂರಿನಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಮೈಸೂರಿನ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸರೋಜಮ್ಮ ದೇವೇಗೌಡ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಪಾತ್ರೆಗಳು, ದಿನಸಿ ಸಾಮಗ್ರಿಗಳು, ಬಟ್ಟೆ ಬರೆ ಎಲ್ಲವೂ ಹಾನಿಯಾಗಿದೆ. ಮನೆಯವರು ಕೆಲಸ ನಿಮಿತ್ತ ಹೊರಗಡೆ ಹೋದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮಳೆಯಿಂದ ವಾಸದ ಮನೆ ಕಳೆದುಕೊಂಡ ಸರೋಜಮ್ಮ, ದೇವೇಗೌಡ ಕಂಗಲಾಗಿದ್ದಾರೆ. ಸಾಲಿಗ್ರಾಮ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಜೋರಾಗಿ ಬೀಸಿದ ಗಾಳಿಗೆ ನೆಲಕ್ಕುರುಳಿದ ಟವರ್
ಭಾರಿ ಗಾಳಿ- ಮಳೆಗೆ ಬೃಹತ್ ಗಾತ್ರದ ಟವರ್ ನೆಲಕ್ಕೆ ಉರುಳಿ ಬಿದ್ದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ಘಟನೆ ನಡೆದಿದೆ. ಏಕಾಏಕಿ ಬೀಸಿದ ಭಾರೀ ಗಾಳಿಗೆ ಬೃಹತ್ ಟವರ್ ನೆಲಕ್ಕುರುಳಿದ ಪರಿಣಾಮ ಅಂಗಡಿ ಮುಂಗಟ್ಟು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್ ಟ್ರಂಪ್ ಸೂಚನೆ
ಹಾಸನದಲ್ಲಿ ಸೇತುವೆ ಮುಳುಗಡೆ, ಹೊಳೆಮಲ್ಲೇಶ್ವರ ದೇಗುಲ ಜಲಾವೃತ
ಹಾಸನ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಬಾಣಗೇರಿ ಹೊಳೆ ನೀರು ಉಕ್ಕಿ ಹರಿಯುತ್ತಿದೆ. ಮಾಗೇರಿ ಗ್ರಾಮದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಸಕಲೇಶಪುರ ತಾಲೂಕಿನ ಮಾಗೇರಿ ಗ್ರಾಮದ ಸೇತುವೆ ಮುಳುಗಡೆಗೊಂಡಿದೆ. ಇದರಿಂದಾಗಿ ಸಕಲೇಶಪುರ-ಮಾಗೇರಿ-ಸೋಮವಾರಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಇನ್ನೂ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಮಳೆ ಮುಂದುವರಿದಿದ್ದು, ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಅಕ್ಕ-ಪಕ್ಕ ಹಾಗೂ ತಗ್ಗು ಪ್ರದೇಶಕ್ಕೂ ನೀರು ನುಗ್ಗಿದೆ. ಹೇಮಾವತಿ ನದಿ ದಂಡೆಯಲ್ಲಿರುವ ಸಕಲೇಶಪುರದ ಹೊಳೆಮಲ್ಲೇಶ್ವರ ದೇಗುಲದ ಮೆಟ್ಟಿಲು ಜಲಾವೃತಗೊಂಡಿದೆ. ಮಳೆ ಹೀಗೆ ಮುಂದುವರೆದರೆ ದೇಗುಲವೂ ಜಲಾವೃತವಾಗುವ ಸಾಧ್ಯತೆ ಇದೆ.
ಉಡುಪಿಯ ಆತ್ರಾಡಿಯಲ್ಲಿ ಕೃತಕ ನೆರೆ
ಉಡುಪಿಯ ಮಲ್ಪೆ- ಮೊಳಕಾಲ್ಮೂರು ಹೆದ್ದಾರಿ ಅವ್ಯವಸ್ಥೆಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಹೆದ್ದಾರಿಯಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಆತ್ರಾಡಿಯ ಮನೆಗಳಿಗೆ ನೀರು ನುಗ್ಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸಿದ ಹಿನ್ನೆಲೆಯಲ್ಲಿ ಚರಂಡಿ ನೀರು ನುಗ್ಗಿ ಈ ಸಮಸ್ಯೆ ಸೃಷ್ಟಿಯಾಗಿದೆ.
ಶಿರೂರು ಗುಡ್ಡ ಕುಸಿತ; ನಿಂತಲ್ಲೇ ನಿಂತ ಟ್ರಕ್‌ಗಳು
ಅಂಕೋಲಾ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಹಿನ್ನೆಲೆ, ಟ್ರಕ್ ಚಾಲಕರು ಕಂಗಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್‌ನಲ್ಲಿ ಕಳೆದ ಮೂರು ದಿನಗಳಿಂದ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆರವಾಗದ ಕಾರಣ ಸಂಪರ್ಕ ಬಂದ್ ಆಗಿದೆ. ಮಂಗಳೂರಿನಿಂದ ಎಲ್‌ಪಿಜಿ ಸಾಗಿಸುತ್ತಿದ್ದ ಟ್ಯಾಂಕರ್‌ಗಳು ಶಿರೂರು ಟೋಲ್ ನಲ್ಲಿಯೇ ಸ್ಟ್ರಕ್ ಆಗಿವೆ. ಸುಮಾರು 120 ಅಧಿಕ ಸರಕು ಮತ್ತು ಗ್ಯಾಸ್ ಟ್ಯಾಂಕರ್‌ಗಳು ಟೋಲ್ ಬಳಿ ಮೊಕ್ಕಾಂ ಹೂಡಿವೆ. ಮೂರು ದಿನಗಳಿಂದ ಟ್ರಕ್‌ಗಳಲ್ಲೆ ಅಡುಗೆ ಮನೆ ಮಾಡಿಕೊಂಡು, ಅಲ್ಲೆ ಊಟ ಅಲ್ಲೆ ನಿದ್ರೆ ಮಾಡುತ್ತಿದ್ದಾರೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆರವಾಗದೆ ಇಲ್ಲಿಂದ ತೆರಳಾಗದ ಸ್ಥಿತಿಯಲ್ಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ