ಬೆಂಗಳೂರು/ಮಂಡ್ಯ: ಜಸ್ಟ್ ಅರ್ಧ ಗಂಟೆ ಸುರಿದ ಭಾರಿ ಗಾಳಿ ಮಳೆಗೆ (Karnataka Rains) ಸಾವು-ನೋವುಗಳು ಸಂಭವಿಸಿವೆ. ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿಯೊಬ್ಬರು ಬಲಿಯಾದರೆ, ಬೆಂಗಳೂರಲ್ಲಿ ಟೆಕ್ಕಿಯ ಬೆನ್ನು ಮೂಳೆ ಮುರಿದಿದೆ.
ಸೋಮವಾರ ಬೆಂಗಳೂರಲ್ಲಿ ಸುರಿದ ಮಳೆಗೆ ಟೆಕ್ಕಿಯೊಬ್ಬರು ಬೆನ್ನು ಮೂಳೆ ಮುರಿದುಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಗಾಳಿಗೆ ಮರದ ಕೊಂಬೆ ಮೈ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದಿದೆ. ಬೆಂಗಳೂರಿನ ಸಿ.ವಿ ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.
ಐಟಿ ಕಂಪನಿ ಉದ್ಯೋಗಿಯಾಗಿ ರವಿಕುಮಾರ್ (26) ಎಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರ ಬಿದ್ದಿರುವ ಹಿನ್ನೆಲೆಯಲ್ಲಿ ಸ್ಪೈನ್ ಕಾರ್ಡ್ ಮುರಿದುಕೊಂಡಿದ್ದಾರೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳು ರವಿಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯದಲ್ಲಿ ಬಿರುಗಾಳಿ ಮಳೆ ಎಫೆಕ್ಟ್‌ಗೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರಿನ ಮೇಲೆ ಬೃಹತ್ ಮರ ಬಿದ್ದಿದ್ದು, ಅದರೊಳಗೆ ಇದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಕಾರ್ತಿಕ್ ಮೃತ ದುರ್ದೈವಿ. ಮಂಡ್ಯ ನಗರದ ನೆಹರು ನಗರದಲ್ಲಿ ದುರ್ಘಟನೆ ನಡೆದಿದೆ.
ಕಾರ್ತಿಕ್ ಮಂಡ್ಯ ನಗರದ ಖಾಸಗಿ ನರ್ಸಿಂಗ್ ಹೋಮ್‌ಗೆ ಬಂದಿದ್ದರು. ಈ ವೇಳೆ ಮಳೆ ಬಂದ ಕಾರಣಕ್ಕೆ ಮರದ ಕೆಳಗೆ ಕಾರ್ ಪಾರ್ಕ್ ಮಾಡಿ ಕುಳಿತಿದ್ದರು. ಆದರೆ ಜೋರಾಗಿ ಬೀಸಿದ ಬಿರುಗಾಳಿಗೆ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಜಖಂಗೊಂಡಿತ್ತು. ಪರಿಣಾಮ ಕಾರೊಳಗೆ ಸಿಲುಕಿದ ಕಾರ್ತಿಕ್ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಇನ್ನೂ ಘಟನೆಯಲ್ಲಿ ಹಲವು ಬೈಕ್‌ಗಳು ಜಖಂಗೊಂಡಿದ್ದವು. ಸ್ಥಳಕ್ಕೆ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!
ಧರೆಗೆ ಬಿದ್ದ ಮರಗಳು, ವಿದ್ಯುತ್ ಕಂಬಗಳು
ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರಸ್ತೆ ಮಧ್ಯೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಹೆದ್ದಾರಿ ಸೇರಿದಂತೆ ನಗರದ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಪೂರ್ತಿ ವಿದ್ಯುತ್ ಸ್ಥಗಿತವಾಗಿತ್ತು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿತ್ತು. ಪರಿಣಾಮ ಬೈಕ್‌ಗಳು, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿತ್ತು. ಇನ್ನೂ ಮುರಿದು ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ನಗರಸಭೆ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಯಿಂದ ಹರಸಾಹಸ ಪಡಬೇಕಾಯಿತು.
ಮಳೆಯ ಅವಾಂತರಕ್ಕೆ ರಾಜಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಕಾರು, 2 ಸ್ಕೂಟರ್ ಜಖಂಗೊಂಡಿತ್ತು. ರಾತ್ರಿ ಬಿದ್ದ ಮರವನ್ನು ಮರು ದಿನ ಬೆಳಗ್ಗೆಯಾದರೂ ತೆರವು ಮಾಡದ ಪಾಲಿಕೆ ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ರಸ್ತೆಯಲ್ಲಿ ಓಡಾಡಲು ಜನರು ಪರದಾಡಬೇಕಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ರಾಜೇಶ್ವರಿ ಚಿತ್ರಮಂದಿರ ಬಳಿ ಮರಗಳು ಧರೆಗುರಳಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಲ್ಲೇಶ್ವರಂ ಚಿತ್ತಾಪುರ ಮಠದ ಬಳಿಯೂ ಬೃಹತ್ ಮರವು ಅಪ್ಪಳಿಸಿದ್ದು, ಆ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇನ್ನೂ ಮಳೆ ಗಾಳಿಗೆ ನಗರದ 15 ಬೃಹತ್ ಗಾತ್ರದ ಮರ ಧರೆಗುರುಳಿವೆ ಎಂದು ತಿಳಿದು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ