Site icon Vistara News

Karnataka Weather : ಬಿಸಿಲ ಬೇಗೆಗೆ ಬೆಂದು ಸುಸ್ತಾದ ಜನರು; ಶುಷ್ಕ ವಾತಾವರಣ ಮುಂದುವರಿಕೆ

Dry weather continues in karnataka

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ರಾಜ್ಯದಲ್ಲಿ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ವಾತಾವರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನೂ ರಾಜ್ಯಾದ್ಯಂತ ಭಾನುವಾರ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37.4 ಡಿ.ಸೆ ದಾಖಲಾಗಿದ್ದರೆ, ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ 16.9 ಡಿ.ಸೆ ದಾಖಲಾಗಿತ್ತು. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 15.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರಿನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇನ್ನೂ ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 9 ಡಿಗ್ರಿ ಸೆಲ್ಸಿಯಸ್ ನಿಂದ 11 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ. ರಾಯಚೂರು ಮತ್ತು ದಾವಣಗೆರೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Haveri News : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ; ಯುವಕ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಅರಬ್ಬಿ ಸಮುದ್ರದಲ್ಲಿ ಭಾರೀ‌ ಗಾಳಿ; ಕೆಟ್ಟು ನಿಂತ ಬೋಟ್‌ ಮುಳುಗಡೆ

ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದೆ. ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 17 ಮೀನುಗಾರರ ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡದ ಕಾರವಾರದ ಮುದಗಾ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಂದ್ರು ತಾಂಡೇಲ್ ಎಂಬುವವರಿಗೆ ಸೇರಿದ್ದ ಓಂ ನಮಃ ಶಿವಾಯ ಹೆಸರಿನ ಬೋಟು, ಮುದಗಾ ಬಂದರಿನಿಂದ ಹೊರಟಿತ್ತು. ಆದರೆ ಈ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೋಟ್‌ ಸಮುದ್ರದಲ್ಲಿ ಮುಳುಗಡೆ ಆಗಿತ್ತು. ಈ ವೇಳೆ ಬೋಟ್‌ನಲ್ಲಿದ್ದ ಮೀನುಗಾರರನ್ನು ಇನ್ನೊಂದು ಬೋಟ್ ಮೂಲಕ ರಕ್ಷಣೆ ಮಾಡಲಾಗಿತ್ತು. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version