Site icon Vistara News

Karnataka Weather Forecast : ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

Karnataka Weather Forecast

ರಾಯಚೂರು/ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಉರಿ ಬಿಸಿಲು ಜನರನ್ನು ಸುಸ್ತು (Karnataka Weather Forecast) ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿ ಕುಂತರೂ ನಿಂತರೂ ಬೆವರು ಸುರಿಸುವಂತಾಗಿದೆ. ಬಿಸಿಲಿನ ಆಜ್ಞೆಗೆ ಜನರು ಹೊರಬರಲು ಆಗದೆ ಅಘೋಷಿತ ಬಂದ್‌ ನಿರ್ಮಾಣವಾಗಿದೆ. ಸದ್ಯ ಅತಿಯಾದ ಬಿಸಿಲಿಗೆ ತತ್ತರಿಸಿದ ರಾಯಚೂರು ಜನರು ಮಧ್ಯಾಹ್ನ ಹೊರಗೆ ಬಾರದಂತೆ ರಾಯಚೂರು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಮುಂದಿನ ಒಂದು ವಾರ ಮತ್ತಷ್ಟು ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ 44 ರಿಂದ 46 ಡಿ.ಸೆ ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಅನಾರೋಗ್ಯ ಸಮಸ್ಯೆ ಜತೆಗೆ ಬಿಸಿಲಾಘಾತಕ್ಕೆ ಸಾವು ಸಂಭವಿಸಬಹುದು. ಹಾಗಾಗಿ ಮಧ್ಯಾಹ್ನ 12 ರಿಂದ 4 ಗಂಟೆವರೆಗೂ ಹೊರಗೆ ಹೋಗದಿರಿ ಎಂದು ಡಿಸಿ ಎಲ್ ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹೊರಗೆ ಹೋಗಲೇಬೇಕಾದ ಅವಶ್ಯಕತೆ ಇದ್ದರೆ ಶುದ್ಧ ಕುಡಿಯುವ ನೀರಿನ ಬಾಟಲ್ ಕೊಂಡೊಯ್ಯಿರಿ. ಟೋಪಿ ಅಥವಾ ಛತ್ರಿ ಬಳಸಿ, ಆದಷ್ಟು ನೆರಳಿನ ಪ್ರದೇಶಗಳಲ್ಲಿ ಓಡಾಡಿ. ಬಾಯಾರಿಕೆ ಆಗದಿದ್ದರೂ ಆಗಾಗ ನೀರು ಕುಡಿಬೇಕು. ಯಾವಾಗಲೂ ನಿಮ್ಮ ಬಳಿ ನೀರು ಇಟ್ಟುಕೊಂಡಿರಿ ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹಾಗೆಯೇ ಮನೆ- ಕಚೇರಿಗಳಲ್ಲಿ ಪಕ್ಷಿಗಳಿಗೂ ನೀರನ್ನು ತುಂಬಿ ಇಡಿ ಎಂದಿದ್ದಾರೆ.

karnataka weather forecast

ತುಮಕೂರಲ್ಲಿ ಬಿಸಿ ಗಾಳಿ; ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ

ತುಮಕೂರು ಜಿಲ್ಲೆಯಲ್ಲೂ ಬಿಸಿ ಗಾಳಿಯು ಆತಂಕವನ್ನು ಹೆಚ್ಚಿಸಿದೆ. ಪಾವಗಡ ತಾಲೂಕಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಿಸಿಲ ಬೇಗೆಗೆ ಪ್ರಾಣಿ ಪಕ್ಷಿಗಳೂ ಹೈರಾಣಾಗಿವೆ. ಇತ್ತ ರೈತರು ದನ ಕರುಗಳಿಗೆ ಒದ್ದೆ ಮಾಡಿದ ಗೋಣಿಚೀಲ ಹಾಕುತ್ತಿದ್ದಾರೆ. ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ ಹಾಕಿ, ತಂಪು ಮಾಡುತ್ತಿದ್ದಾರೆ.

ಬಿಸಿಲಿನ ಹೊಡೆತ- ಚಿಕ್ಕಬಳ್ಳಾಪುರ ಪ್ರವಾಸಿತಾಣ ಖಾಲಿ ಖಾಲಿ

ಇತ್ತ ಚಿಕ್ಕಬಳ್ಳಾಪುರದಲ್ಲೂ ಅತಿಯಾದ ತಾಪಮಾನದಿಂದಾಗಿ ಪ್ರವಾಸಿ ತಾಣಗಳು ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ. ನಂದಿ ಬೆಟ್ಟ, ಈಶಾ ಫೌಂಡೇಶನ್ ಜನರಿಲ್ಲದೆ ಖಾಲಿ ಖಾಲಿಯಾಗಿದೆ. ಬಿಸಿಲಿನ ತಾಪಕ್ಕೆ ಜನರು ಮನೆ ಬಿಟ್ಟು‌ ಕದಲದ ಕಾರಣಕ್ಕೆ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಬಳ್ಳಾಪುರದಲ್ಲಿ ಆಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪ್ರತಿನಿತ್ಯ ಪ್ರವಾಸಿಗರಿಂದ ಗಿಜುಗುಡುತಿದ್ದ ನಂದಿಬೆಟ್ಟ ಖಾಲಿಯಾಗಿದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

ಸೆಕೆಗೆ ಕಾವೇರಿ ನದಿಗಿಳಿದ ಜನ

ಮಂಡ್ಯ ಜಿಲ್ಲೆಯಲ್ಲೂ ಬಿಸಿಲ ಬೇಗೆ ಹೆಚ್ಚಾಗಿದೆ. ಬಿಸಿಲಿನ ಸೆಕೆ ತಾಳಲಾರದೆ ಜನರು ನದಿಗಿಳಿದು ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬ ಸಮೇತವಾಗಿ ಬಂದು ಮಂಡ್ಯದ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಇಳಿಯುತ್ತಿದ್ದಾರೆ. ಬಿಸಿಲಿನ ಕಾವಿನಿಂದಾಗಿ ಕಾವೇರಿ ನದಿ ದಂಡೆಯಲ್ಲಿ ಜನರ ದಂಡು ಹೆಚ್ಚಾಗಿದೆ.

ಬೆಂಗಳೂರಲ್ಲಿ ಸುರಿದ ಮಳೆಗೆ ಧರೆಗುರುಳಿದ ಮರಗಳು

ಬೆಂಗಳೂರಿನಲ್ಲಿ ನಿನ್ನೆ ಗುರುವಾರ ಸಂಜೆ ಸುರಿದ ಮಳೆಗೆ ಮರಗಳು ಧರೆಗುರುಳಿವೆ. ಕೆಲವು ಕಡೆ ಅರ್ಧ ಗಂಟೆ, ಮತ್ತೆ ಕೆಲವು ಭಾಗದಲ್ಲಿ ಒಂದು ಗಂಟೆ ಕಾಲ ಮಳೆಯಾಗಿದೆ. ಬನಶಂಕರಿ, ಹಂಪಿನಗರ, ವಿಜಯನರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸೇರಿ ಮೆಜೆಸ್ಟಿಕ್‌ ಸುತ್ತಮುತ್ತ ಉತ್ತಮ ಮಳೆಯಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು 10 ನಿಮಿಷಗಳ ಸಾಧಾರಣ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ)
ವಿದ್ಯಾಪೀಠ – 20, ಹಂಪಿನಗರ – 12.5, ಮಾರುತಿ ಮಂದಿರ – 12, ರಾಜರಾಜೇಶ್ವರಿನಗರ – 7.5, ನಾಯಂಡಹಳ್ಳಿ – 7.5, ಬಸವನಪುರ – 5.5, ದೊಡ್ಡನೆಕ್ಕುಂದಿ – 5, ಎಚ್‌ಎಸ್‌ಆರ್‌ ಲೇಔಟ್‌- 5, ಉತ್ತರಹಳ್ಳಿ – 5 ಹಾಗೂ ಮಹದೇವಪುರ – 4, ರಾಮಮೂರ್ತಿ ನಗರ – 4, ಹೆಮ್ಮಿಗೆಪುರ – 4.5, ಕೆಂಗೇರಿ – 4.5 ಸೇರಿದಂತೆ ಯಲಹಂಕ ಉಪನಗರ – 3.5, ಹೊರಮಾವು – 3.5ಮಿ.ಮೀ ಮಳೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 10-15 ಮರಗಳು ಧರೆಗೆ ಉರುಳಿರುವ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version