Site icon Vistara News

Karnataka Weather: ಕರ್ನಾಟಕದಲ್ಲಿ ಹೆಚ್ಚಲಿದೆ ಸೆಕೆ; ಗರಿಷ್ಠ ಉಷ್ಣಾಂಶದಲ್ಲೂ ಏರಿಕೆ

Karnataka Weather Maximum temperature to rise

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಮತ್ತು ಬುಧವಾರ ಸೆಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಹೇಳಿದೆ. ಒಟ್ಟಾರೆಯಾಗಿ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 2 – 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶದಲ್ಲಿಯೂ 2 – 3 ಡಿಗ್ರಿ ಸೆಲ್ಸಿಯಸ್‌ ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಈ ಮೂಲಕ ರಾಜ್ಯದಲ್ಲಿ ಬಹುತೇಕ ಸೆಕೆಯ ವಾತಾವರಣ ಇರಲಿದ್ದು, ಬೇಸಿಗೆ ಕಾಲದ ಮುನ್ಸೂಚನೆಯನ್ನು ನೀಡತೊಡಗಿದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಲಿದ್ದು, ಮೈಸುಡಲಿದೆ. ಹೀಗಾಗಿ ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನವು 2-3 ಡಿ.ಸೆ ಏರಿಕೆ ಆಗಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ಶುಷ್ಕ ವಾತಾವರಣ ಇರಲಿದೆಯಾದರೂ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ಏರಿಕೆ ಕಾಣಲಿದೆ.

ಬೆಂಗಳೂರಿನಲ್ಲಿ ಹೀಗಿರಲಿದೆ ವಾತಾವರಣ

ಬೆಂಗಳೂರಿನ ಕೆಲವು ಕಡೆ ಮಂಗಳವಾರ ಮುಂಜಾನೆ ಅಲ್ಲಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಬೆಳಗ್ಗೆ ನಂತರ ಬಿಸಿಲಿನ ಕಾವು ಹೆಚ್ಚಾಗಲಿದ್ದು, ಸೆಕೆ ಭಾದಿಸಲಿದೆ. ಇನ್ನು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.

ಗದಗ, ಬೆಳಗಾವಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಬಿಸಿಲ ಧಗೆ ಹೆಚ್ಚಾಗಲಿದೆ. ಬೆಳಗಾವಿಯಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಅದೇ ಗದಗಿನಲ್ಲಿ ಮಂಗಳವಾರ ಮತ್ತು ಬುಧವಾರ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶಗಳು ಕ್ರಮವಾಗಿ 34 – 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಕರಾವಳಿಯಲ್ಲಿಯೂ ಸೆಕೆ

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉಡುಪಿಯ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಸೆಕೆಯ ವಾತಾವರಣ ಇರಲಿದೆ.

ಇದನ್ನೂ ಓದಿ: Ayushman Bharat : ಮೋದಿ ಗ್ಯಾರಂಟಿಯ ಆಯುಷ್ಮಾನ್ ಭಾರತ್​ ಕಾರ್ಡ್​ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ -17 ಡಿ.ಸೆ
ಮಂಗಳೂರು: 35 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 34 ಡಿ.ಸೆ – 17 ಡಿ.ಸೆ
ಹೊನ್ನಾವರ: 33 ಡಿ.ಸೆ- 21 ಡಿ.ಸೆ
ಕಲಬುರಗಿ: 35 ಡಿ.ಸೆ – 22 ಡಿ.ಸೆ
ಬೆಳಗಾವಿ: 33 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

Exit mobile version