ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಚಾಮರಾಜನಗರ, ಬೆಳಗಾವಿ, ಧಾರವಾಡ ಸೇರಿ ವಿವಿಧೆಡೆ ಶನಿವಾರವೂ ಭಾರಿ ಮಳೆ (Rain News) ಸುರಿಯಿತು. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸಿಡಿಲು ಬಡಿದು ಕಾರ್ಮಿಕ ಮೃತಪಟ್ಟು, ಇಬ್ಬರಿಗೆ ಗಾಯಗಳಾಗಿದೆ. ಅದೇ ರೀತಿ ಕೊಪ್ಪಳದಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬಾಳೆ ತೋಟ ನೆಲಕಚ್ಚಿದೆ. ಇನ್ನು ಹಲವೆಡೆ ಧಾರಕಾರವಾಗಿ ಸುರಿದ ಮಳೆಯು ಅವಾಂತರ ಸೃಷ್ಟಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಸಿಡಿಲು ಬಡಿದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ
ಮಂಗಳೂರು: ಸಿಡಿಲು ಬಡಿದು ಕಾರ್ಮಿಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ. ನದಿ ಬದಿಯ ಶೆಡ್‌ನಲ್ಲಿದ್ದ ವೇಳೆ ಅವಘಡ ನಡೆದಿದೆ. ಮರಳು ತೆಗೆಯುವ ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದು ರೈತ ಸ್ಥಳದಲ್ಲೇ ಸಾವು
ಕೊಪ್ಪಳ: ಸಿಡಿಲು ಬಡಿದು ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಐ ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳ ಬಳಿ ನಡೆದಿದೆ. ಕನಕರಾಯಪ್ಪ ಕಾಟಾಪುರ (28) ಮೃತ ರೈತ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ
ಕುಂದಾನಗರಿಯಲ್ಲಿ ಮನೆ, ಮಳಿಗೆಗಳಿಗೆ ನುಗ್ಗಿದ ನೀರು
ಬೆಳಗಾವಿ: ಕುಂದಾನಗರಿಯಲ್ಲಿ ಧಾರಾಕಾರವಾಗಿ ಸುರಿದ ಮೊದಲ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಧಾರಾಕಾರ ಮಳೆಯಿಂದ ರಸ್ತೆಗಳು ನದಿಯಂತಾಗಿದ್ದು, ಹಲವೆಡೆ ಮರಗಳು ಧರೆಗುರಳಿವೆ. ಇನ್ನು ಅನೇಕ ಮನೆ, ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಳಗಾವಿ ನಗರದ ಪಾಂಗೋಲ್ ಗಲ್ಲಿ, ಬೆಂಡಿ ಬಜಾರ್ ಏರಿಯಾದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಚರಂಡಿ ನೀರು ರಸ್ತೆಗೆ ಬಂದು ಸಂಚಾರಕ್ಕೆ ಅಡಚಣೆಯಾಯಿತು. ಒಂದು ಗಂಟೆಗಳ ಕಾಲ ಸುರಿದ ಭಾರೀ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹಣ್ಣಿನ ಮಾರುಕಟ್ಟೆಗೂ ನೀರು ನುಗ್ಗಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು.
ಚಿಕ್ಕೋಡಿ ತಾಲೂಕಿನ ವಿವಿಧೆಡೆ ಭಾರಿ ಮಳೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾರಿ ಮಳೆ ಸುರಿದಿದೆ. ಭಾರಿ ಮಳೆಯಿಂದ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯಿತು. ಅಕಾಲಿಕ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ತೋಟ
ಚಾಮರಾಜನಗರ: ಗಾಳಿ ಮಳೆಗೆ ಬಾಳೆ ತೋಟ ನೆಲಕಚ್ಚಿದ ಘಟನೆ ತಾಲೂಕಿನ ಉತ್ತುಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರವಿ ಎಂಬುವವರ ಬಾಳೆ ತೋಟದಲ್ಲಿ ಸಂಜೆ ಸುರಿದ ಗಾಳಿ ಮಳೆಗೆ ಸುಮಾರು 3 ಸಾವಿರ ಬಾಳೆ ಗಿಡ ನಾಶವಾಗಿವೆ. ಇದರಿಂದ ಸುಮಾರು 6 ತಿಂಗಳ ಶ್ರಮ 6 ನಿಮಿಷದಲ್ಲಿ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ತೆಂಗಿನ ಮರಕ್ಕೆ ಬಡಿದ ಸಿಡಿಲು
ಧಾರವಾಡ: ಧಾರಾಕಾರ ಮಳೆ ಹಿನ್ನೆಲೆ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದ ಘಟನೆ ನಗರದ ಎನ್‌ಟಿಟಿಎಫ್ ಬಳಿ ಕಂಡುಬಂತು. ಮತ್ತೊಂದೆಡೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಜಿಲ್ಲೆಯ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ.
ಸಿಡಿಲುಗೆ ಮೇಕೆ ಬಲಿ, ವ್ಯಕ್ತಿಗೆ ಗಂಭೀರ ಗಾಯ
ರಾಯಚೂರು: ಸಿಡಿಲು ಬಡಿದು ಮೇಕೆ ಮೃತಪಟ್ಟು, ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಜಂಗಿರಾಂಪೂರ ತಾಂಡಾದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಗೆ ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಮೇಕೆಗೆ ಪರಿಹಾರ ಹಾಗೂ ಗಾಯಗೊಂಡ ವ್ಯಕ್ತಿ ಚಿಕಿತ್ಸೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.