Site icon Vistara News

Wayanad Landslide: ಎಲ್ಲೆಂದರಲ್ಲಿ ಮಣ್ಣಿನ ರಾಶಿ: ಕೊಚ್ಚಿ ಹೋದ ಸೇತುವೆ, ರಸ್ತೆ: ವಯನಾಡಿನಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆ

ವಯನಾಡ್‌: ದೇವರನಾಡು ಕೇರಳ (Kerala) ಮತ್ತೊಮ್ಮೆ ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದೆ. ಅದರಲ್ಲಿಯೂ ವಯನಾಡಿನಲ್ಲಿ ಭೀಕರ ಭೂಕುಸಿತ (Wayanad Landslide) ಸಂಭವಿಸಿದ್ದು, ಮೃತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ (Meppadi) ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಇದೀಗ ಎಲ್ಲಿ ನೋಡಿದರೂ ಮಣ್ಣಿನ ರಾಶಿಯೇ ಕಂಡು ಬಂದಿದ್ದು, ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸಿಬ್ಬಂದಿ, ಸರ್ಕಾರಿ ಸಂಸ್ಥೆ ಸಿಬ್ಬಂದಿ ಸೇರಿದಂತೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಹ ಸಜ್ಜುಗೊಳಿಸಲಾಗಿದೆ. ಇದೇ ವೇಳೆ ಸೇತುವೆ ಕುಸಿದಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಈವರೆಗೆ ಗುಡ್ಡಗಾಡು ಪ್ರದೇಶಗಳಿಂದ 250 ಜನರನ್ನು ರಕ್ಷಿಸಲಾಗಿದೆ.

ಮಂಗಳವಾರ ಮುಂಜಾನೆ 2ರಿಂದ4 ಗಂಟೆಯ ನಡುವೆ ಸಂಭವಿಸಿದ ಭೂಕುಸಿತದಿಂದ ಮುಂಡಕೈ ಮತ್ತು ಚೂರಲ್‌ಮಾಲಾ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಕುಸಿದ ಸೇತುವೆ, ಕೊಚ್ಚಿ ಹೋದ ರಸ್ತೆ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಚೂರಲ್‌ಮಾಲಾದಲ್ಲಿ ಒಟ್ಟು 250 ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಸಂಪರ್ಕ ಕಡಿತ

ಮುಂಡಕೈ, ಚೂರಲ್‌ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ  ಭೂಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ಪರಿಸ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.

ವಯನಾಡ್‌ ಮಾಜಿ ಸಂಸದ ರಾಹುಲ್ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದಾರೆ. ವಯನಾಡಿನ ಮೆಪ್ಪಡಿ ಬಳಿ ಸಂಭವಿಸಿದ ಭಾರೀ ಭೂಕುಸಿತದಿಂದ ನಾನು ತೀವ್ರ ನೊಂದಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಸಿಲುಕಿಕೊಂಡವರನ್ನು ಶೀಘ್ರದಲ್ಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ನಾನು ಕೇಂದ್ರ ಸಚಿವರೊಂದಿಗೆ ಮಾತನಾಡಿ ವಯನಾಡಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಏಜೆನ್ಸಿಗಳು ಕೈಜೋಡಿಸಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯ ಸಚಿವರು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ), ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗಳ ಜತೆಗೆ ಸೇನೆ ರಕ್ಷಣಾ ಕಾರ್ಯಪ್ರವೃತ್ತವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

Exit mobile version