Site icon Vistara News

Weather report : ರಿಲ್ಯಾಕ್ಸ್‌ ಆಗಿದ್ದ ಮಳೆರಾಯ ಮತ್ತೆ ಆ್ಯಕ್ಟಿವ್‌!

woman with red umbrella wearing red dress dancing in the rain

ಬೆಂಗಳೂರು: ವೀಕೆಂಡ್‌ ಮೋಜಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಜತೆಗೆ ಮಿಂಚು ಸಹಿತ ಗುಡುಗು ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಅತಿ ಕಡಿಮೆ ಮಳೆ ಬೀಳಲಿದೆ. ಉಳಿದ ಭಾಗಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಉತ್ತರ ಒಳನಾಡಿನ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸಂಭವವಿದೆ.

ಇದನ್ನೂ ಓದಿ: Child Death : ಆಟವಾಡುತ್ತಾ ಬಾವಿಯಲ್ಲಿ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು

ಶುಕ್ರವಾರ ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಬಾಗಲಕೋಟೆಯ ಲೋಕಾಪುರದಲ್ಲಿ 4 ಸೆಂ.ಮೀ, ಕುಮಟಾ, ಕೂಡಲಸಂಗಮದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಕ್ಯಾಸಲ್‌ ರಾಕ್‌, ಯಲ್ಲಾಪುರ, ನಿಪ್ಪಾಣಿ, ಕೆರೂರು, ಬಾದಾಮಿ, ದಾವಣಗೆರೆಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಹಳಿಯಾಳ, ಶಿರಾಲಿ, ಕದ್ರಾ, ಮುಂಡಗೋಡ, ಗೋಕರ್ಣ, ಜೋಯಿಡಾ ಸೇರಿದಂತೆ ಚಿಕ್ಕೋಡಿ, ಸೇಡಬಾಳ, ಗೋಕಾಕ, ಸಂಕೇಶ್ವರ, ಬೈಲಹೊಂಗಲ ಹಾಗೂ ದೇವದುರ್ಗ, ಕಲಬುರಗಿ, ಸೇಡಂ, ಕವಡಿಮಟ್ಟಿ, ಶಹಾಪುರ, ಶೋರಾಪುರ, ಹುಣಸಗಿ, ಬಾಗಲಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಶನಿವಾರ ಯಾದಗಿರಿ ನಗರದಲ್ಲಿ ಭಾರಿ ಮಳೆ

ಯಾದಗಿರಿ ನಗರದಲ್ಲಿ ಶನಿವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಅಬ್ಬರಿಸಿದೆ. ಮಳೆಯಿಲ್ಲದೆ ರೈತರು ಕಂಗಲಾಗಿದ್ದರು. ಮಳೆ ಇಲ್ಲದೆ ನೀರಿನ ಕೊರತೆ ಉಂಟಾಗಿ, ಪರಿಣಾಮ ಬೆಳೆಗಳೆಲ್ಲವೂ ಒಣಗುತ್ತಿದ್ದವು. ಇತ್ತ ದಿಢೀರ್‌ ಮಳೆಗೆ ಬೈಕ್‌ ಸವಾರರು ಬಸ್‌ ನಿಲ್ದಾಣದ ಆಶ್ರಯ ಪಡೆದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version