ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನದ(World Menstrual Hygiene Day) ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ತಾವು ಮೊದಲ ಬಾರಿಗೆ ಮುಟ್ಟಿನ ಬಗ್ಗೆ ತಿಳಿದುಕೊಂಡ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಒಂದು ಚಿಕ್ಕ ವಿಡಿಯೋ ಮೂಲಕ ಮಾತನಾಡಿದ ಅವರು, ನನ್ನ ಶಾಲೆಯಲ್ಲಿ ಮುಟ್ಟಿನ ಬಗ್ಗೆ ನಮಗೆ ಶಿಕ್ಷಣ ನೀಡುವುದಕ್ಕೂ ಮೊದಲೇ ನನ್ನ ಆತ್ಮೀಯ ಸ್ನೇಹಿತೆಯೊಬ್ಬಳ ತಾಯಿ ನಮ್ಮಲ್ಲಿ ಅರಿವು ಮೂಡಿಸಿದ್ದರು ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು nuawoman ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ಪೀರಿಯಡ್ಸ್ ಬಗ್ಗೆ ಪಾಸಿಟಿವ್ ತಿಳಿವಳಿಕೆ ಮೂಡಿಸುವ ಇಂಥ ವಿಡಿಯೋಗಳನ್ನು ನಾವು ಹೆಚ್ಚೆಚ್ಚು ಶೇರ್ ಮಾಡಿದಷ್ಟೂ ಒಳ್ಳೆಯದು. ಇದರಿಂದಾಗಿ ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ತಮ್ಮ ಬಗ್ಗೆ ಜಾಸ್ತಿ ಕಾಳಜಿ ವಹಿಸಿಕೊಳ್ಳುತ್ತಾರೆ ಎಂದು ಕ್ಯಾಪ್ಷನ್ ಬರೆಯಲಾಗಿದೆ. ಹಾಗೇ, ಕಮೆಂಟ್‌ನಲ್ಲಿ ನೀವೂ ನಿಮ್ಮ ಪೀರಿಯಡ್ ಸ್ಟೋರಿ ಹಂಚಿಕೊಳ್ಳಿ ಎಂದು ಹೇಳುವ ಮೂಲಕ ಚಿಕ್ಕ ಅಭಿಯಾನವನ್ನೇ ಈ ಇನ್‌ಸ್ಟಾಗ್ರಾಂ ಪೇಜ್ ನಡೆಸುತ್ತಿದೆ.
ದೀಪಿಕಾ ಪಡುಕೋಣೆ ಹೇಳಿದ್ದೇನು?
ʼನಾನು ಮುಟ್ಟಿನ ಬಗ್ಗೆ ತಿಳಿದುಕೊಂಡ ಆ ದಿನವನ್ನು ಎಂದಿಗೂ ಮರೆಯಲಾರೆ. ನನ್ನ ಆತ್ಮೀಯ ಸ್ನೇಹಿತೆ ದಿವ್ಯಾ ಮತ್ತು ನಾನು ಇಬ್ಬರೂ ಅಕ್ಕಪಕ್ಕ, ನಮ್ಮ ಅಮ್ಮಂದಿರ ಜತೆ ಕುಳಿತುಕೊಂಡಿದ್ದೆವು. ಆಗ ದಿವ್ಯಾಳ ತಾಯಿ ನಮಗೆ ಪೀರಿಯಡ್ಸ್ ಬಗ್ಗೆ ತುಂಬ ವಿವರವಾಗಿ ತಿಳಿಸಿಕೊಟ್ಟರು. ಮುಟ್ಟು ಅಂದರೆ ಏನು? ಹೇಗೆ ಆಗುತ್ತದೆ ಮತ್ತು ಯಾಕಾಗಿ ಈ ಕ್ರಿಯೆ ನಡೆಯುತ್ತದೆ ಎಂಬುದನ್ನು ತುಂಬ ಚೆನ್ನಾಗಿ, ಸಕಾರಾತ್ಮಕವಾಗಿ ತಿಳಿಸಿಕೊಟ್ಟರು. ನಮಗೆ ಯಾವುದೇ ಮುಜುಗರ ಆಗದಂತೆ, ಅತ್ಯಂತ ತಾಳ್ಮೆಯಿಂದ, ನಮ್ಮ ಮನಸಲ್ಲಿ ಏನು ಓಡುತ್ತಿದೆ ಎಂಬುದನ್ನು ಗ್ರಹಿಸುತ್ತ ಮುಟ್ಟಿನ ಬಗ್ಗೆ ಹೇಳಿದರು. ಆಗಿನ್ನೂ ನಮ್ಮ ಶಾಲೆಯಲ್ಲೂ ಈ ಬಗ್ಗೆ ಶಿಕ್ಷಣ ಕೊಟ್ಟಿರಲಿಲ್ಲ. ದಿವ್ಯಾಳ ತಾಯಿ ಹೇಳಿದ್ದು ನನಗೆ ಮುಂದೆ ನಾನು ಬೆಳೆಯುತ್ತ ಹೋದಂತೆ ಸಹಾಯಕ್ಕೆ ಬಂತು. ಅಂದು ಅವರು ನಮಗೆ ಅರಿವು ಮೂಡಿಸಿದ ರೀತಿಯಲ್ಲೇ ನಾನು ಈಗಿನ ಮಕ್ಕಳಿಗೆ, ಸುತ್ತಲಿನ ಜನರಿಗೆ ಮುಟ್ಟಿನ ಬಗ್ಗೆ ತಿಳಿವಳಿಕೆ ಮೂಡಿಸಲು ಬಯಸುತ್ತೇನೆʼ ಎಂದು ನಟಿ ದೀಪಿಕಾ ಪಡುಕೋಣೆ ಸಣ್ಣ ವಿಡಿಯೋ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Cannesನಲ್ಲಿ ದೀಪಿಕಾ ಪಡುಕೋಣೆ ರಂಗು: ಜ್ಯೂರಿಯಾಗಿ ಮಿಂಚಿದ ಡಿಂಪಲ್ ಸುಂದರಿ