Site icon Vistara News

Women’s Day 2023 : ಮುಟ್ಟಿನ ರಜೆ ನಮ್ಮ ಸಂವೇದನೆಯ ಸಂಕೇತ

Born as a female, then you will know...

#image_title

ಚೈತ್ರಾ ಎನ್, ಪತ್ರಕರ್ತೆ

#image_title

ಕಳೆದ ವರ್ಷ ಕೇರಳದ ಮಾಲ್ ಮತ್ತು ಕಾಲೇಜುಗಳಲ್ಲಿ ಪೀರಿಯಡ್ಸ್ ಹೊಟ್ಟೆ ನೋವಿನ ಬಗ್ಗೆ ಕ್ಯಾಂಪೇನ್ ಮಾಡಲಾಗಿತ್ತು. ಅದರಲ್ಲಿ ಕೃತಕವಾಗಿ ಮುಟ್ಟಿನ ನೋವನ್ನು ಸೃಷ್ಟಿಸಲಾಗಿತ್ತು. ಹುಡುಗರು ತಮ್ಮ ಹೊಟ್ಟೆಗೆ ಪೀರಿಯಡ್ಸ್ ನೋವಿನ ಬೆಲ್ಟ್ ಕಟ್ಟಿಕೊಳ್ಳುವ ಮೂಲಕ ಪೀರಿಯಡ್ಸ್ ನೋವು ಹೇಗಿರುತ್ತದೆ ಎಂದು ಅನುಭವಿಸಿ ಬೆಚ್ಚಿ ಬೀಳುತ್ತಿದ್ದರು. ಹುಡುಗಿಯರು ಈ ದೃಶ್ಯವನ್ನು ಕಂಡು ನಗುತ್ತಾ ನಿಂತಿದ್ದರು. ಇನ್ನೂ ಕೆಲವು ಹುಡುಗಿಯರು ಅರೆ! ನಾವು ಇಷ್ಟು ನೋವು ಅನುಭವಿಸುತ್ತೇವಾ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ರು ಕೂಡ.

ಆದರೆ ಈ ಪ್ರಯೋಗಕ್ಕೆ ಒಳಗಾದ ಪ್ರತಿ ಪುರುಷರು ಕೂಡ ಪೀರಿಯಡ್ಸ್ ನೋವಿನ ಬಗ್ಗೆ ಹೊಸದೊಂದು ಅರ್ಥ ಕಂಡುಕೊಂಡರು. ಆ ಮೂಲಕ ಹೆಣ್ಣು ಮಕ್ಕಳ ಬಗ್ಗೆ ಇನ್ನಷ್ಟು ಗೌರವ ಹೆಚ್ಚಾಯಿತು ಎಂದರು. ಪೀರಿಯಡ್ಸ್ ಸಮಯದಲ್ಲಿ ಆಕೆ ಅನುಭವಿಸುವ ಯಾತನೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು.

ಈಗ ಅದೇ ಕೇರಳದಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಇದು ನಿಜಕ್ಕೂ ಸರ್ಕಾರವೊಂದು ಹೆಣ್ಣಿನ ಬಗ್ಗೆ ತೋರಬಹುದಾದ ಸಂವೇದನೆಗೆ ಅತ್ಯುತ್ತಮ ನಿದರ್ಶನವಾಗಿದೆ. ಬಹುಶಃ ಕೇರಳದ ಸಚಿವರು ಮಹಿಳೆಯಾದ್ದರಿಂದ ಈ ಬೆಳವಣಿಗೆ ಸಾಧ್ಯವಾಗಿದ್ದಿರಬಹುದು. ನಮ್ಮಲ್ಲೂ ಕೂಡ ಮುಟ್ಟಿನ ಸಮಯದ ಕೃತಕ ಪೀರಿಯಡ್ಸ್ ನೋವಿನ ಪ್ರಯೋಗಕ್ಕೆ ಒಳಪಡಿಸಿದರೆ ಮುಟ್ಟಿನ ನೋವು ಪುರುಷ ನಾಯಕರಿಗೆ ಅರಿವಿಗೆ ಬರಬಹುದೇನೋ!

ಮುಟ್ಟಿನ ಸಮಯದಲ್ಲಿ ದುಡಿಯುವ ಮಹಿಳೆಯರಿಗೆ ರಜೆ ನೀಡುವುದು ಖಂಡಿತವಾಗಿಯೂ ಉತ್ತಮ ಬೆಳವಣಿಗೆ. ಇದನ್ನು ವೈಯಕ್ತಿಕವಾಗಿ ಅಲ್ಲದೇ ಸಮಗ್ರವಾಗಿ ನೋಡಬೇಕಾಗುತ್ತದೆ. ಕೆಲವರಿಗೆ ಪೀರಿಯಡ್ಸ್ ಎನ್ನುವುದು ಸಾಮಾನ್ಯ ದಿನದಂತೆ ಇರಬಹುದು. ಆದರೆ ಅದು ಬೆರಳೆಣಿಕೆಯಷ್ಟೇ!.

ಬಹುತೇಕ ಹೆಣ್ಣು ಮಕ್ಕಳು ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು, ಸೊಂಟನೋವು, ನಿರಂತರ ಪ್ಯಾಡ್ ಬದಲಾವಣೆಗಳಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ಈ ಸಮಯದಲ್ಲಿ ಕೋಪ, ಇರಿಟೇಷನ್ಗಳು ಸಹ ಹೆಚ್ಚಿರುತ್ತವೆ. ಅಷ್ಟೇ ಅಲ್ಲದೇ ಕೆಲವರು ಸರಿಯಾಗಿ ಆಹಾರ ಕೂಡ ಸೇವಿಸುವುದಿಲ್ಲ ಇದು ಕೂಡ ಶಕ್ತಿ ವ್ಯತ್ಯಯಕ್ಕೆ ಕಾರಣವಾಗಬಹುದು. ಇನ್ನೂ ಆಫೀಸ್ ಕೆಲಸದ ಜೊತೆಗೆ ಮನೆಕೆಲಸವೂ ಸೇರಿಬಿಟ್ಟರೆ ಮಾನಸಿಕ ಸಮಸ್ಯೆಗೆ ಇದೊಂದು ಕಾರಣವಾಗುವ ಸಂಭವವಿದೆ. ಆದ್ದರಿಂದ ಕೆಲಸದಲ್ಲಿ ಹೆಚ್ಚು ಒತ್ತಡ ಹೇರದೇ ಮುಟ್ಟಿನ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಆಯ್ಕೆಗಳನ್ನು ನೀಡಬಹುದು. ಇಲ್ಲವಾದ್ರೆ ಕನಿಷ್ಠ ಪಕ್ಷ ತಿಂಗಳಿಗೆ ಒಂದು ದಿನವಾದ್ರೂ ಮುಟ್ಟಿನ ರಜೆಯನ್ನು ಆಕೆಗೆ ನೀಡುವುದು ನಮ್ಮ ಸಂವೇದನೆಯನ್ನು ತೋರುತ್ತದೆ.

Exit mobile version