ಶಿಲ್ಪಶ್ರೀ ಕಲ್ಲಿಗನೂರ್, ಚಿತ್ರ ಕಲಾವಿದೆ
ಒಮ್ಮೊಮ್ಮೆಯಂತೂ ನಮ್ಮನೇಲೂ ಹೆಣ್ಮಕ್ಳಿದಾರೆ. ಅವರು ಯಾರೂ ರಜೆ ಹಾಕಿ ಮನೇಲಿ ಕೂರೊಲ್ಲ. ನಿಮ್ದೇನ್ರಿ? ಪ್ರತೀ ತಿಂಗಳೂ ರಜೆ ಅಂತಿರಾ? ಇನ್ನೂ ಕೆಲವರು ಅಂತಾರೆ. ಇದೊಂದು ನೆಪ ಅಲ್ವಾ ರಜೆ ತಗೋಂಡು ಮಜಾ ಮಾಡಕ್ಕೆ?
ಇಂತ ಮಾತುಗಳನ್ನ ಕೇಳಿದಾಗೆಲ್ಲ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟು.. ಆಗ್ಲಾದ್ರೂ ಅದರ ನೋವು ಗೊತ್ತಾಗಬಹುದು.. ಅಂತ ತಲೇಮೇಲೆ ನಾಲ್ಕು ಬಿಟ್ಟು ಹೇಳಬೇಕು ಅನಿಸುತ್ತೆ…
ಅಷ್ಟಕ್ಕೂ ನೀವೆಲ್ಲ ಪೀರಿಯಡ್ಸ್ ಅಂದ್ರೆ ಏನ್ ಅಂನ್ಕೊಂಡಿದೀರಾ…ಕೂರಕ್ಕಾಗದೆ ನಿಲ್ಲೋಕಾಗದೇ ಒದ್ದಾಡ್ತಿವಿ…
ಮನಸ್ಸೋ ಸಮಾಧಾನವೇ ಇಲ್ಲದೆ ಮುದುಡಿಬಿಟ್ಟಿರತ್ತೆ.. ಮೈಯಲ್ಲಿ ತ್ರಾಣವೇ ಇಲ್ಲದೇ ಕುಸಿದುಹೋಗ್ತಿರ್ತಿವಿ..
ತೊಡೆಗಳು ಹರಿಯೋ ರೀತಿಗಂತೂ ಯಾಕಪ್ಪ ಬೇಕು ಈ ಹೆಣ್ಣು ಜನ್ಮ ಅನ್ನುವಂತಾಗಿರ್ತೀವಿ. ಮಾತಾಡೋಕೆ ಸಮಾಧಾನ ಮಾಡಕ್ಕೆ ಒಂದು ಹೆಗಲು ಸಿಗದಿದ್ರೂ ಒಂದು ಹಾಟ್ ವಾಟರ್ ಬ್ಯಾಗನ್ನ ಹೊಟ್ಟೆಗಿಟ್ಟು ಅಡ್ಡವಾದ್ರೆ ಸಾಕಪ್ಪಾ ಅನಿಸ್ತಿರುತ್ತೆ..
ಮಗುವಿಗಿಂತ ಕೆಟ್ಟ ಹಠ ಮಾಡ್ತಿರುತ್ತೆ ನಮ್ಮ ದೇಹ ಮತ್ತು ಮನಸ್ಸು. ಮುಟ್ಟು ಶುರುವಾಗೋ 4-5 ದಿನದ ಮೊದಲೇ ಪ್ರಾರಂಭವಾಗುವ ನೋವು, ಸುಸ್ತು, ಮನಸ್ಸಿನ ಹೊಯ್ದಾಟ… ಮುಟ್ಟು ಬಂದ ಮೇಲೆ ಅದರದ್ದು ಅತೀರೇಕ..ಇನ್ನು ನಿಂತಮೇಲೆ ಅದರಿಂದಾಗೋ rashes ಇನ್ನೊಂದು ತರಹ…
ಇಷ್ಟೊಂದು ನರಳೋ ನಮಗೆ ಒಂದು ದಿನ ರಜೆಯನ್ನ ಯಾಕೆ ನೀವೆಲ್ಲ ಮೀಸಲಿಡಬಾರದು?
ನಾವೂ ನೆಮ್ಮದಿಯಾಗಿ ಮಲಗುತ್ತೇವೆ, ಸುಧಾರಿಸಿಕೊಳ್ಳುತ್ತೇವೆ, ಒಂದು ಸಣ್ಣ ವಿಶ್ರಾಂತಿ. ಮಾರನೇ ದಿನ ನೆಮ್ಮದಿಯಿಂದ ಕೆಲಸ ಮಾಡೋಕೆ ಅನುವು ಮಾಡಿಕೊಡಬಹುದು. ನಿಮ್ಮ ಬಗ್ಗೆ ನಮಗೂ ಒಳ್ಳೆಯ ಅಭಿಪ್ರಾಯ ಮೂಡಬಹುದು.