ಹೆಣ್ಣು ಮಗು ಜನಿಸುತ್ತಿದ್ದಂತೆ ಸಮಾಜದಲ್ಲಿ ಆಕೆಯ ಮುಂದೊಂದು ಲಕ್ಷ್ಮಣರೇಖೆ ಸಿದ್ಧವಾಗಿರುತ್ತದೆ. ಕಾಲ ಬದಲಾಗಿದೆ, ಆಧುನಿಕ ಮನಸ್ಥಿತಿ ಇದೆ ಎಂದುಕೊಂಡರೂ, ಆಕೆ ಮುಂದೊಂದು ದಿನ ಬೇರೆ ಮನೆಗೆ ಹೋಗಬೇಕಾದವಳು, ಹಾಗಾಗಿ, ಆಕೆ ಹೀಗಿರಬೇಕು, ಹಾಗಿರಬೇಕು ಎಂಬ ಸಮಾಜದ ನೀತಿ ನಿಯಮಗಳು, ಕಟ್ಟುಪಾಡುಗಳು ಆಕೆಯನ್ನು ಆರಂಭದಲ್ಲೇ ಸುತ್ತುವರಿದಿರುತ್ತದೆ ಎಂಬುದಂತೂ ಸತ್ಯ. ಸಮಾಜದಲ್ಲಿ ಆಗಾಗ ನಡೆಯುವ ಒಂದಿಲ್ಲೊಂದು ಘಟನೆಗಳಿಂದಾಗಿ ಹೆಣ್ಣು ಹೆತ್ತವರ ಮನಸ್ಸಿನಲ್ಲಿ ಅಂಜಿಕೆಯ ಭಾವವೊಂದು ಹೊದ್ದೇ ಇರುತ್ತದೆ. ಹಾಗಾದರೆ, ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಹೇಳಲೇಬೇಕಾದ ಕಿವಿಮಾತುಗಳೇನು? ಅವರು ಸಮಾಜದಲ್ಲಿ ದಿಟ್ಟತನದಿಂದ, ಧೈರ್ಯದಿಂದ ತಮ್ಮದೇ ಅಸ್ತಿತ್ವವನ್ನು ರೂಪಿಸಿಕೊಳ್ಳಲು ನೀಡಬೇಕಾದ ಆತ್ಮವಿಶ್ವಾಸದ ಸಾಥ್ ಯಾವುದು ಎಂದು ನೋಡೋಣ.
೧. ನಿನ್ನ ಹಕ್ಕಿಗಾಗಿ ಹೋರಾಡು: ಪ್ರತಿ ಅಪ್ಪಂದಿರೂ, ಅಮ್ಮಂದಿರೂ ತಮ್ಮ ಮಗಳು ತನಗಾಗುವ ಅನ್ಯಾಯಕ್ಕೆ ʻಬಾಯಿ ಮುಚ್ಚಿಕೊಂಡಿರುʼ ಎಂದು ಹೇಳುವುದನ್ನು ನಿಲ್ಲಿಸಬೇಕು. ಮಹಿಳೆಯರಿಗೂ ಸಮಾಜದಲ್ಲಿ ಎಲ್ಲರಂತೆ ಹಕ್ಕುಗಳಿವೆ, ಆ ಹಕ್ಕುಗಳಿಗೆ ಹೋರಾಡುವ ಹಕ್ಕು ನಿನಗಿದೆ ಎಂದು ತಿಳಿಸಿಕೊಡಬೇಕು. ಜೊತೆಗೆ, ತಮ್ಮ ಹೆಣ್ಣುಮಕ್ಕಳಿಗೆ ಕಾನೂನು ಸಂಬಂಧೀ ಅರಿವು/ತಿಳುವಳಿಕೆ ಮೂಡಿಸುವುದು ಅಗತ್ಯ.
೨. ತಲೆತಗ್ಗಿಸುವ ಅಗತ್ಯವಿಲ್ಲ: ಹೆಣ್ಣುಮಕ್ಕಳಲ್ಲಿ ಮುಖ್ಯವಾಗಿ ಎಳವೆಯಿಂದಲೇ ಧೈರ್ಯ, ಆತ್ಮವಿಶ್ವಾಸವನ್ನು ಕಲಿಸಬೇಕು. ತನಗೆ ಇಷ್ಟವಾಗದ್ದನ್ನು ನಿರ್ಬಿಢೆಯಿಂದ ಹೇಳಲು ಹಾಗೂ ತನಗೆ ಅಸಹನೀಯವಾದ ವಾತಾವಾರಣದಲ್ಲಿ ತಲೆತಗ್ಗಿಸುವ ಅಗತ್ಯವಿಲ್ಲ ಎಂಬುದನ್ನು ಕಲಿಸಬೇಕು.
೩. ನೀನು ಯಾವುದರಲ್ಲೂ ಕಡಿಮೆಯಿಲ್ಲ: ಮಹಿಳೆ ಎಂದ ಕೂಡಲೇ ಪುರುಷ ಪ್ರಧಾನ ಸಮಾಜದಲ್ಲಿ ಎರಡನೇ ದರ್ಜೆಯ ನಾಗರಿಕಳಂತೆ ಇರಬೇಕಾದ ಪರಿಸ್ಥಿತಿ ಎದುರಾಗುವುದು ಸಾಮಾನ್ಯ. ಆದರೆ, ಎಂತಹ ಪರಿಸ್ಥಿತಿಯಲ್ಲೂ ಮಹಿಳೆ ಎಂದ ಮಾತ್ರಕ್ಕೆ ನಿನ್ನಿಂದ ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡು ಸುಮ್ಮನಿರಬೇಕಾಗಿಲ್ಲ ಎಂಬ ಗುಟ್ಟನ್ನು ಪೋಷಕರು ಹೇಳಬೇಕು. ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸಬೇಕು.
೪. ಕನಸು ಕಾಣುವ ಹಾಗೂ ಆ ಕನಸನ್ನು ನನಸಾಗಿಸಲು ಮುನ್ನುಗ್ಗುವ ಹಕ್ಕು ನಿನಗಿದೆ: ಹೆಣ್ಣಾದ ಕಾರಣ ಆಕೆಯನ್ನು ದೊಡ್ಡ ದೊಡ್ಡ ಕನಸು ಕಾಣುವುದರಿಂದ ವಂಚಿತಳನ್ನಾಗಿಸಬಾರದು. ಮಹಿಳೆಯ ಜೀವನ ಯಾವಾಗಲೂ ಆಕೆಯ ಸುತ್ತಮುತ್ತಲು ಇರುವ ಮಂದಿಯಿಂದಲೇ ನಿರ್ಧರಿತವಾಗುತ್ತದೆ ಹಾಗೂ ಅವರೇ ಆಕೆಯ ಭವಿಷ್ಯದ ಬಗ್ಗೆ ನಿರ್ಧರಿಸುತ್ತಾರೆ ಎಂಬುದರಿಂದ ಆಕೆಗೆ ಹೊರಬರಲು ಹಾಗೂ ಆಕೆಯ ನಿರ್ಧಾರಗಳನ್ನು ಆತ್ಮವಿಶ್ವಾಸದಿಂದ ತೆಗೆದುಕೊಳ್ಳಲು, ತನ್ನ ಗುರಿ, ದಾರಿ, ಸಾಧನೆಯ ಬಗ್ಗೆ ಕನಸು ಕಾಣಲು ಹಾಗೂ ಆಕೆ ಆ ಕನಸಿನತ್ತ ಮುನ್ನಡೆಯಲು ಆಕೆಗೆ ಪೋಷಕರಷ್ಟೇ ಬೆಳಕಾಗಬಲ್ಲರು. ಅವರ ಶ್ರೀರಕ್ಷೆಯೇ ಅವಳ ಆತ್ಮವಿಶ್ವಾಸ.
ಇದನ್ನೂ ಓದಿ | No marriage movement | ಮದುವೆ, ಮಕ್ಕಳು ಯಾವುದೂ ಬೇಡ: ಯುವತಿಯರಲ್ಲೀಗ ಹೊಸ ಟ್ರೆಂಡ್!
೫. ನೀನು ಇಷ್ಟಪಟ್ಟವರನ್ನು ಮದುವೆಯಾಗುವ ಹಕ್ಕು ನಿನಗಿದೆ: ಆಕೆ ಇಷ್ಟಪಟ್ಟವರನ್ನು ಮದುವೆಯಾಗುವ ಹಕ್ಕು ಆಕೆಗಿದೆ, ಹಾಗೂ ಆಕೆಯ ಇಷ್ಟವೇ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ ಎಂಬುದನ್ನು ಹೆತ್ತವರು ತಮ್ಮ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸದ ಸಾಥ್ ನೀಡಬೇಕು. ಭಯ, ಅಭದ್ರತೆ, ಹೆತ್ತವರು ತನ್ನಿಷ್ಟಕ್ಕೆ ಒಪ್ಪುವುದಿಲ್ಲ ಎಂಬ ಅಂಜಿಕೆಗಳೇ ಆಕೆಯನ್ನು ತಪ್ಪು ಮಾಡುವತ್ತ ಪ್ರೇರೇಪಿಸುತ್ತದೆ. ಮನೆಯಲ್ಲಿ ಆಕೆಗೆ ನೀಡುವ ಆತ್ಮವಿಶ್ವಾಸವೇ ಆಕೆಯನ್ನು ಸರಿಯಾದ ಪಥದಲ್ಲಿ ಮುನ್ನಡೆಸುತ್ತದೆ ಎಂಬುದನ್ನು ನೆನಪಿಡಿ. ಯಾವ ಒತ್ತಾಯ, ಹೇರಿಕೆಗಳೂ ಆಕೆಯನ್ನು ಸಂತೋಷವಾಗಿಡಲಾರದು.
೬. ಮದುವೆ ಅನಿವಾರ್ಯವೇ ಅಲ್ಲ: ಮದುವೆಯೆಂಬುದು ಬದುಕಿನ ಆಯ್ಕೆ, ಅದು ಅನಿವಾರ್ಯ ಆಗಬೇಕಿಲ್ಲ ಎಂಬ ಸತ್ಯವೂ ಈಗಿನ ಕಾಲದ ಹೆಣ್ಣುಮಕ್ಕಳಿಗೆ ಅಪ್ಪ ಅಮ್ಮಂದಿರು ಹೇಳಲೇಬೇಕಾದ ಕಾಲ ಇದೆ. ಮದುವೆಯೆಂಬುದು ಅವರವರ ಆಯ್ಕೆ, ಆದರೆ ಅದುವೇ ಆದ್ಯತೆ ಅಲ್ಲ ಎಂಬುದನ್ನು ಪೋಷಕರಾಗಿದ್ದುಕೊಂಡು ಬದಲಾದ ಕಾಲಕ್ಕೆ ತಕ್ಕಂತೆ ಅರಿಯುವುದೂ ಮುಖ್ಯವೇ.
೭. ಯಾವತ್ತೂ ಯಾರಿಗೂ ಹೆದರಬೇಕಾಗಿಲ್ಲ: ಪ್ರತಿ ಮಹಿಳೆಯೂ ತಾನು ಯಾರಿಗೂ ಹೆದರಿಕೊಂಡು ಜೀವನ ಮಾಡಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿ ತನಗಾಗುವ ಅನ್ಯಾಯದ ವಿರುದ್ಧ ಅಥವಾ ಸಮಾಜದ ಹುಳುಕುಗಳಿಗೆ ಧ್ವನಿ ಎತ್ತಲು ಭಯ ಪಡಬೇಕಾಗಿಲ್ಲ ಎಂಬ ಅಭಯವೂ ಮುಖ್ಯ.
ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?
೮. ಹಣಕಾಸಿನ ಸ್ವಾವಲಂಬನೆ: ಗಂಡಿನಂತೆ ಹೆಣ್ಣು ಕೂಡ ಸಾಕಷ್ಟು ಶಿಕ್ಷಣ ಪಡೆಯುವ, ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವ, ಅದಕ್ಕಾಗಿ ಹಣಕಾಸಿನ ಸ್ವಾವಲಂಬನೆ ಹೊಂದುವ ಅಧಿಕಾರ ಹೊಂದಿರುತ್ತಾಳೆ. ಆಕೆ ಎಲ್ಲದಕ್ಕೂ ಗಂಡನ್ನೇ ಅವಲಂಬಿಸಬೇಕಿಲ್ಲ.
೯. ಶಿಕ್ಷಣ ಬಹುಮುಖ್ಯ: ಒಬ್ಬಳ ಮಗಳಾಗಿ, ಒಬ್ಬರ ಹೆಂಡತಿಯಾಗಿ, ಒಬ್ಬರ ಸೊಸೆಯಾಗಿ ಅಸ್ತಿತ್ವ ಕಂಡುಕೊಳ್ಳುವುದು ಮುಖ್ಯವಲ್ಲ. ಓದಿ ವಿದ್ಯಾವಂತರಾಗಿ ತನ್ನ ಕಾಲ ಮೇಲೆ ನಿಲ್ಲುವುದು ಮುಖ್ಯ ಎಂದು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ವಿದ್ಯೆ ಬಹುಮುಖ್ಯ ಆದ್ಯತೆ ಆಗಬೇಕು. ಪ್ರತಿಭೆಗೆ ಪ್ರೋತ್ಸಾಹವೂ ನೀಡಬೇಕು.
೧೦. ಅಪ್ಪ ಅಮ್ಮನ್ನು ನೋಡಿಕೊಳ್ಳುವ ಅಧಿಕಾರ ಮಗನಷ್ಟೇ ಮಗಳಿಗೂ ಇದೆ: ಮಗನಿಗೆ ಮಾತ್ರ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯಿದೆ, ಮಗಳಿಗಿಲ್ಲ ಅಂದುಕೊಂಡರೆ ಅದು ತಪ್ಪು. ಮಗನಷ್ಟೇ ಅಧಿಕಾರ ಎಲ್ಲ ವಿಷಯದಲ್ಲೂ ಮಗಳಿಗಿದೆ ಎಂಬುದೂ ಆಕೆಗೆ ತಿಳಿದಿರಲಿ.