Site icon Vistara News

Women’s Day 2023: ಅಗತ್ಯ ಬಿದ್ದಾಗ ಒಂದೆರಡು ದಿನ ರಜೆ ಕೊಡಿ

Give a couple of days off if needed

Give a couple of days off if needed

ಶುಭಶ್ರೀ ಭಟ್ಟ

ಮುಟ್ಟಿನ ರಜೆ ಅಗತ್ಯವಾ ಇಲ್ಲವಾ ಎಂಬ ಪ್ರಶ್ನೆಯೊಂದನ್ನು ನನ್ನ ಮುಂದಿಟ್ಟಾಗ ಅರೆಕ್ಷಣ ಯೋಚಿಸುವಂತಾಯ್ತು. ಮುಟ್ಟು ಅಂದರೆ ರೋಗವಲ್ಲ ಅದೊಂದು ಪ್ರಕೃತಿದತ್ತ ಸಹಜ ಪ್ರಕ್ರಿಯೆ. ಮುಟ್ಟಿನ ರಜೆಗೂ ಮೊದಲು ಅದರ ಅರಿವಿನ ಅಗತ್ಯವಿದೆ ಜನರಿಗೆ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ತೆರನಾಗಿದ್ದು, ಅವರು ಅನುಭವಿಸುವ ನೋವುಗಳೂ ಬೇರೆ ತರಹದ್ದು. ಒಬ್ಬರಿಗೆ ತೀವ್ರಸ್ರಾವಾದರೆ ಇನ್ನೊಬ್ಬರಿಗೆ ವಾಂತಿ ತಲೆಸುತ್ತು. ಮತ್ತೊಬ್ಬರಿಗೆ ವಿಪರೀತ ಎಂಬಂತಹ ಹೊಟ್ಟೆನೋವು, ಬೆನ್ನುನೋವು. ಮಗದೊಬ್ಬರಿಗೆ ಎದುರಿಗೆ ಬಂದವರಿಗೆ ಬಾರಿಸುವಷ್ಟು ಕೋಪ. ಹೀಗೆ ಸಮಸ್ಯೆಯೂ ವೈಯಕ್ತಿಕವಾದಾಗ ಮುಟ್ಟಿನ ರಜೆಯೂ ವೈಯಕ್ತಿಕವೇ ಆಗಬೇಕು. ಅಗತ್ಯವಿದ್ದರೆ ರಜೆ ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುವ ಸೌಲಭ್ಯವಂತೂ ಬೇಕೇ ಬೇಕು. ಅದಕ್ಕೂ ಮುನ್ನ ಮುಟ್ಟಾದವಳನ್ನು ಎಂಥದೋ ಅಪರಾಧ ಮಾಡಿದ್ದಾಳೆಂಬಂತೆ, ಅಸ್ಪ್ರಶ್ಯಳಂತೆ ನೋಡುವುದನ್ನು ನಿಲ್ಲಿಸುವ ಕಾನೂನು ಮೊದಲಾಗಿ ಬರಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಬಹಳ ಮಾರ್ಪಾಟಾದರೂ ಮುಟ್ಟಿನ ಹೆಸರಿನ ಶೋಷಣೆ ಅಲ್ಲಲ್ಲಿ ಇನ್ನೂ ನಡೆಯುತ್ತಲೇ ಇದೆ.

ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ನನ್ನ ಸ್ನೇಹಿತೆಯೊಬ್ಬಳು ಮಾನಸಿಕ ಜರ್ಜರಿತಳಾಗಿದ್ದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಂದು ಅದನ್ನೇ ಉದಾಹರಣೆಯಾಗಿ ಬಳಸುತ್ತಿದ್ದೇನೆ. ಅವಳಿಗೆ ಮುಂಚಿನಿಂದಲೂ 22ರಿಂದ 24 ದಿನಕ್ಕೆ ಋತುಚಕ್ರ. ಅದನ್ನು ವೈದ್ಯರು ಸಹ ಇದೊಂದು ಸಹಜ ಪ್ರಕ್ರಿಯೆ ಯಾವ ದೋಷವೂ ಇಲ್ಲ ಎಂದು ಹೇಳಿದ್ದರೂ ಅವಳ ಸಂಪ್ರದಾಯಸ್ಥ ಕುಟುಂಬ ಅದನ್ನ ಒಪ್ಪಿಕೊಳ್ಳಲೇ ಇಲ್ಲ. ಪ್ರತೀ ಬಾರಿ ಮುಟ್ಟಾದಾಗಲೂ ತಿಂಗಳಲ್ಲೆರಡು ಬಾರಿ ಮುಟ್ಟಾಗುತ್ತಾಳೆಂದು ಹಂಗಿಸುವುದು, ಅವಳು ನಡೆದ ನೆಲಕ್ಕೆಲ್ಲಾ ಗೋಮಯ ಹಾಕಿ ಅಸ್ಪ್ರಶ್ಯಳಾಗಿ ಕಾಣುವುದೆಲ್ಲಾ ಮಾಡುತ್ತಿದ್ದರು. ಅವಳೊಮ್ಮೆ ಸಿಕ್ಕಾಗ ತೀರಾ ಹತಾಶಳಾಗಿ ‘ಸಾಕಾಗಿದೆ ಇದಕ್ಕೆಲ್ಲ ಕಾರಣವಾದ ಗರ್ಭಕೋಶವನ್ನೇ ತೆಗೆಸಿಬಿಡುತ್ತೇನೆ’ ಎಂದು ಹೇಳಿದ್ದು ಆ ಸಮಯದಲ್ಲಿ ಅವಳು ಅನುಭವಿಸಿರಬಹುದಾದ ಮಾನಸಿಕ ತೊಳಲಾಟವನ್ನು ತೋರಿಸುತ್ತದೆ. ಮುಟ್ಟಿನ ಸಮಯದಲ್ಲಿ ಅವಳಿಗೆ ದೈಹಿಕವಾಗಿ ಎಷ್ಟು ವಿಶ್ರಾಂತಿಯ ಅವಶ್ಯಕತೆಯಿದೆಯೋ, ಮಾನಸಿಕವಾಗಿಯೂ ಅಷ್ಟೇ ವಿಶ್ರಾಂತಿಯ ಅಗತ್ಯವಿದೆ. ಬೇಗ ಮುಟ್ಟಾದಳೆಂದು ಮೂಗು ತಿರುಪುವುದು, ತಡವಾಗಿ ಮುಟ್ಟಾದಳೆಂದು ಕೊಂಕಾಡುವುದನ್ನು ಮೊದಲು ನಿಲ್ಲಿಸಿ ಪ್ರೀತಿಯಿಂದ ಕಾಳಜಿ ಮಾಡುವ ಮನಸ್ಥಿತಿ ಬೆಳೆಯಬೇಕಿದೆ.
ಅಗತ್ಯ ಬಿದ್ದಾಗ ಒಂದೆರಡು ದಿನಗಳ ಮುಟ್ಟಿನ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಜೊತೆಗೆ ಇದನ್ನು ದುರುಪಯೋಗಪಡಿಸಿಕೊಂಡು ಇರುವ ಸೌಲಭ್ಯವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವ ನೈತಿಕ ಜವಾಬ್ದಾರಿಯೂ ನಮ್ಮದಾಗಿರಬೇಕು.

Exit mobile version