ಅಭಿಲಾಷಾ ಎಸ್.
ಮುಟ್ಟು ಎಂಬುದಕ್ಕೇ ‘ರಜೆ’ ಎಂಬ ಪದವನ್ನು ಸಂವಾದಿಯಾಗಿ ಬಳಸುತ್ತಾ ಮುಟ್ಟಾದವಳನ್ನು ದೈನಂದಿನ ಆಗುಹೋಗುಗಳಿಂದ ಮೂರು ದಿನ ಹೊರಗುಳಿಯುವಂತೆ ಮಾಡುವ ಪದ್ಧತಿ ನಮ್ಮ ಮನೆಗಳಲ್ಲಿವೆ. ಇದು ಅವಳ ಆರೋಗ್ಯದ ಬಗೆಗಿನ ಕಾಳಜಿಗಿಂತಲೂ ದೈಹಿಕವಾಗಿ ಅವಳು ಅಶುದ್ಧಳು ಎಂಬುದಕ್ಕೇ ಆಗಿದೆ. ಈಗ ಇದನ್ನೇ ಮುಂದುವರಿಸಿ ಸಾರ್ವಜನಿಕ ವಲಯದಲ್ಲಿಯೂ ರಜೆಯನ್ನು ಅಪೇಕ್ಷಿಸುವುದು ಮತ್ತೊಂದು ಬಗೆಯ ಸಮಸ್ಯೆಗೆ ಆಹ್ವಾನ ನೀಡಿದಂತೆ.
ಆರೋಗ್ಯದ ಬಗೆಗೆ ಕಾಳಜಿ ಅನ್ನುವುದನ್ನೇ ತೆಗೆದುಕೊಂಡರೂ ಸಾರ್ವತ್ರಿಕವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಒಂದೇ ತರದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಅದೂ ಅಲ್ಲದೇ, ಕೆಲಸದಲ್ಲಿ ಸಕ್ರಿಯವಾಗಿ ಮುಳುಗಿದಾಗ ದೈಹಿಕ ನೋವನ್ನು ಹಿಮ್ಮೆಟ್ಟಿಸುವುದೂ ಸಾಧ್ಯ ಇದೆ ಎಂಬುದು ನಮ್ಮೆಲ್ಲರ ಅನುಭವ.
ಮುಟ್ಟಿನ ರಜೆ ಎಂದು ಕೊಟ್ಟರೆ ಅದು ದುರುಪಯೋಗವಾಗುವ ಸಾಧ್ಯತೆಯೇ ಹೆಚ್ಚಿದೆ.ಆದರೂ ಮುಟ್ಟಿನ ಸಮಯದ ಸಮಸ್ಯೆಯನ್ನು ಅವಗಣನೆ ಮಾಡುವ ಹಾಗೆಯೂ ಇಲ್ಲ. ಹಾಗಾಗಿ ಪ್ರತಿ ತಿಂಗಳೂ ರಜೆ ಕೊಡುವ ಬದಲು, ಒಟ್ಟಾರೆಯಾಗಿ, ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗಿಂತ ಜಾಸ್ತಿ Sick Leave ಕೊಟ್ಟರೆ, ಅಗತ್ಯವಿದ್ದಾಗ ಅವರು ಉಪಯೋಗಿಸಬಹುದು.