ಮಣಿಪುರದ ಇಂಫಾಲ್‌ನ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೊಂದು ಇತಿಹಾಸವೇ ಇದೆ. ಇದು ೫೦೦ ವರ್ಷಗಳ ಹಿಂದಿನ ಮಾರುಕಟ್ಟೆ. ಆದರೆ, ಇದರ ಚರಿತ್ರೆ ಇಷ್ಟಕ್ಕೇ ನಿಲ್ಲುವುದಿಲ್ಲ. ʻಇಮಾ ಕೈತಾಲ್ʼ ಎಂಬ ಈ ಮಾರುಕಟ್ಟೆಯ ವಿಶೇಷತೆಯೇ ಅಂಥದ್ದು. ಪ್ರತಿ ದಿನವೂ ೩೦೦೦ಕ್ಕೂ ಹೆಚ್ಚು ವ್ಯಾಪಾರಿಗಳು ವಹಿವಾಟು ನಡೆಸುವ ಈ ಮಾರುಕಟ್ಟೆ ಕೇವಲ ಮಹಿಳೆಯರಿಂದಲೇ ನಡೆಯುವಂಥದ್ದು. ಬಹುಷಃ ಏಷ್ಯಾದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅಪರೂಪವಾದದ್ದು ಹಾಗೂ ವಿಸ್ತಾರವಾದದ್ದು ಕೂಡಾ.
ಬಹಳಷ್ಟು ವ್ಯಾಪಾರಿ ಮಹಿಳೆಯರ ಬೆಳಗು ಆರಂಭವಾಗುವುದೇ ಈ ಮಾರುಕಟ್ಟೆಯಲ್ಲಿ. ಅವರ ಮಾಲಿಗೆ ಈ ಮಾರುಕಟ್ಟೆಯೇ ಮನೆ. ಬೆಳಗ್ಗೆದ್ದು ಬೆಳಕು ಹರಿವ ಮೊದಲೇ ಈ ಮಾರುಕಟ್ಟೆಗೆ ಕಾಲಿಟ್ಟು ವ್ಯಾಪಾರ ಆರಂಭಿಸಿದರೆ, ಮನೆಗೆ ಮರಳುವುದು ಸೂರ್ಯ ಮುಳುಗಿ ಕತ್ತಲಾದ ಮೇಲೆಯೇ. ಜೀವನದ ಬಹುಮುಖ್ಯ ಹೊತ್ತನ್ನು ಕಳೆಯುವುದೇ ಇಲ್ಲಿ. ಯಾಕೆಂದರೆ, ಬಹಳಷ್ಟು ಮಹಿಳೆಯರಿಗೆ ಅನ್ನ ನೀಡುವ ಜಾಗವಿದು. ಬಟ್ಟೆಬರೆಯಿಂದ ಹಿಡಿದು ಮನೆಯ ದಿನಸಿ, ತರಕಾರಿಯವರೆಗೆ ಈ ಮಾರುಕಟ್ಟೆಯಲ್ಲಿ ಇಲ್ಲ ಎಂಬ ವಸ್ತುವೇ ಇಲ್ಲ. ಹಾಗಾಗಿಯೇ ಇದು ಬಹಳಷ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ.
ʻಇಮಾ ಕೈತಾಲ್ʼ ಎಂದರೆ ಮಣಿಪುರಿ ಭಾಷೆಯಲ್ಲಿ ʻಅಮ್ಮನ ಮಾರುಕಟ್ಟೆʼ ಎಂದರ್ಥವಂತೆ. ಹೆಸರಿನಲ್ಲಿಯೇ ಇದು ಮಹಿಳೆಯರ ಮಾರುಕಟ್ಟೆ ಎಂದೇ ಹೇಳುತ್ತಿದ್ದು, ಮಣಿಪುರದ ಚರಿತ್ರೆಯ ಹೆಮ್ಮೆ ಕೂಡಾ. ಈ ಮಾರುಕಟ್ಟೆ ಯಾವಾಗ ಆರಂಭವಾಯಿತು ಎಂಬ ಬಗ್ಗೆ ಸರಿಯಾದ ಆಧಾರವಿಲ್ಲದಿದ್ದರೂ, ಇದು ೧೬ನೇ ಶತಮಾನಕ್ಕೆ ಸೇರಿದ ಮಾರುಕಟ್ಟೆಯಂತೆ. ನಮ್ಮ ಮುತ್ತಾತನ ಕಾಲದಿಂದಲೇ ಈ ಮಾರುಕಟ್ಟೆ ಇದೆ, ನಾವಿಲ್ಲಿನ ವ್ಯಾಪಾರಿಗಳು ಎಂದಷ್ಟೇ ಇಲ್ಲಿನ ಮಹಿಳೆಯರು ಕಥೆ ಹೇಳುತ್ತಾರೆ. ೧೫೩೩ರಲ್ಲಿ, ಮನೆಯ ಪುರುಷರು ದೂರದ ಭೂಮಿಯಲ್ಲಿ ಅಥವಾ ಸೈನ್ಯಕ್ಕೆ ಸೇರಲೇಬೇಕೆಂಬ ಹೊಸ ಕಾಯಿದೆ ಆರಂಭಿಸಿದ ಕಾರಣಕ್ಕಾಗಿ ಈ ಮಾರುಕಟ್ಟೆಯನ್ನು ಆರಂಭಿಸಿದರು. ಆಗ ಮಹಿಳೆಯರಿಗೆ ಕೆಲಸ ಮಾಡದೆ ಬೇರೆ ಉಪಾಯವಿರಲಿಲ್ಲ. ಮನೆಯ ಏಕೈಕ ದುಡಿವ ಕೈಗಳಾಗಿ ಮಹಿಳೆಯರು ಬೆಳೆ ಬೆಳೆದು ಮಾರಾಟ ಮಾಡುವ ಕೇಂದ್ರವಾಗಿ ಇದನ್ನು ಆರಂಭಿಸಿದರು ಎಂದು ಇತಿಹಾಸ ಹೇಳುತ್ತದೆ.
ಇಲ್ಲಿ ಮಹಿಳೆಯರಿಗೆ ಯಾವ ಭಯವೂ ಇಲ್ಲ. ತಾವೇ ನಡೆಸುವ ತಮ್ಮದೇ ಮಾರುಕಟ್ಟೆ ಎಂಬ ಹೆಮ್ಮೆಯೂ ಅವರಿಗಿದೆ. ಇಲ್ಲಿ ಒಬ್ಬರೂ ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡ ಉದಾಹರಣೆಯಿಲ್ಲ, ನಮ್ಮದೇ ಸ್ವಾತಂತ್ರ್ಯದಿಂದ ನಾವು ವ್ಯಾಪಾರ ನಡೆಸುವ ಸುಖ ಇಲ್ಲಿ ಸಿಕ್ಕಿದೆ ಎನ್ನುವ ಮಾತು ಇಲ್ಲಿನ ಮಹಿಳೆಯರದ್ದು.
ಇದನ್ನೂ ಓದಿ: Viral Video : ʼಇವರೇ ನೋಡಿ ಫಾದರ್ ಆಫ್ ದಿ ಇಯರ್ʼ ಎನ್ನುತ್ತಿದ್ದಾರೆ ನೆಟ್ಟಿಗರು; ವೈರಲ್ ಆಗಿದೆ ವಿಡಿಯೊ
ಈ ಮಾರುಕಟ್ಟೆಗೆ ಕಾಲಿಟ್ಟರೆ ಕೇಳುವ ಧ್ವನಿ ಮಹಿಳೆಯರದ್ದೇ. ಗ್ರಾಹಕರನ್ನು ಕರೆಯುವುದು, ಚೌಕಾಸಿಗೆ ಉತ್ತರ ಕೊಡುವುದು, ವ್ಯವಹಾರ ಮಾಡುವುದು ಎಲ್ಲವೂ ಮಹಿಳೆಯರೇ. ಪುರುಷ ವ್ಯಾಪಾರಿಗಳಿಗೆ ಇಲ್ಲಿ ಜಾಗವಿಲ್ಲ. ಅವರು ಇಲ್ಲಿ ಬಂದು ವಸ್ತುಗಳನ್ನು ಮಾರುವಂತಿಲ್ಲ. ಆದರೆ ಖರೀದಿಸಲು ಬರಬಹುದು. ಮಾರುಕಟ್ಟೆ ಹೊರಾಂಗಣದ ಆಸುಪಾಸಿನಲ್ಲಿ, ಫಾಸ್ಟ್‌ಫುಡ್, ಹಾಗೂ ಸಣ್ಣ ವ್ಯಾಪಾರ ಮಾಡುವ ಪುರುಷ ವ್ಯಾಪಾರಿಗಳನ್ನಿಲ್ಲಿ ಕಾಣಬಹುದಾದರೂ, ಮಾರುಕಟ್ಟೆಯ ಒಳಗೆ ಕೇವಲ ಮಹಿಳಾ ವ್ಯಾಪಾರಿಗಳಷ್ಟೆ ಇಲ್ಲಿ ತಮ್ಮ ಕೆಲಸ ಮಾಡಬಹುದಾಗಿದೆ.
ಈ ಮಾರುಕಟ್ಟೆ ಕೇವಲ ಮಾರುಕಟ್ಟೆಯಾಗಿ ಈಗ ಉಳಿದಿಲ್ಲ. ಮಹಿಳೆಯರದ್ದೇ ಎಂಬ ಹೆಗ್ಗಳಿಕೆಯ ಮಾರುಕಟ್ಟೆ ಇದಾಗಿರುವುದರಿಂದಲೇ, ಇಂದು ಇದು ಸಾಕಷ್ಟು ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತಿದೆ. ಮಣಿಪುರ ಭೇಟಿ ಕೊಡುವ ಪ್ರವಾಸಿಗರು ಕಣ್ಮನ ತಣಿಸುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮರಳಬಹುದಾದರೂ, ಇಂತಹ ಅಪರೂಪದ ನಿಜಾನುಭವ ನೀಡುವ ಮಾರುಕಟ್ಟೆ ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ವಿದೇಶೀ ಪ್ರವಾಸಿಗರು, ಹಾಗೂ ಅಲೆಮಾರಿತನ ಬಯಸುವ ಹೊಸಕಾಲದ ಪ್ರವಾಸಿಗರು ಭೇಟಿ ಕೊಡಲು ಆಸಕ್ತಿ ವಹಿಸುತ್ತಿದ್ದಾರೆ.
ಇದನ್ನೂ ಓದಿ: Virat Kohli: ಪಠಾಣ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್