ತನುಜ ದೊಡ್ಡಮನಿ, ಗೃಹಿಣಿ
ಮುಟ್ಟಿನ ದಿನದ ರಜೆ ಬೇಕೇ ಬೇಡವೇ ಎನ್ನುವ ಪ್ರಶ್ನೆಗೆ ಉತ್ತರ ಒಮ್ಮೊಮ್ಮೆ ಬೇಕು, ಒಮ್ಮೊಮ್ಮೆ ಬೇಡ ಅನ್ನಿಸುವುದು ಹೌದು. ಹಕ್ಕಿನ ರಜೆಯಾಗಿ ಸಿಗುವಂತಿದ್ದರೆ ಇರಲಿ. ಎಲ್ಲರ ಮುಟ್ಟಿನ ದಿನಗಳು ಒಂದೇ ತರಹ ಇರೋಲ್ಲ. ಒಬ್ಬೊಬ್ಬರದ್ದು ಒಂದೊಂದು ತರಹ. ಬೇಕಿದ್ದವರು ತಗೊಳ್ಳಲಿ. ಹಕ್ಕಿನ ರಜೆಯಾಗಿರಲಿ ತಿಂಗಳಲ್ಲಿ ಒಮ್ಮೆ. ಆ ದಿನಗಳ ಕಸಿವಿಸಿ ಹಿಂಸೆ, ಸರಿಯಾದ ಬಾತ್ ರೂಮ್ ಗಳಿಲ್ಲದೇ ಪರದಾಟ ಕೂರಲಾಗದ, ಮಲಗಲಾರದ ನೋವು, ಮನಸ್ಸಿನ ಸ್ಥಿತಿಗಳು, ಊಟ ಸೇರದೆ ಪರದಾಡೋದು ಇದೆಲ್ಲಾ ನೋಡುವಾಗ ಬೇಕು ರಜೆ ಅನ್ನಿಸ್ತದೆ.
ಬೇಡ ಅನ್ನುವುದೂ ಕಷ್ಟವೇ. ಈ ಮೊದಲೇ ಹೇಳಿರುವಂತೆ ಎಲ್ಲರ ದೈಹಿಕ ರೀತಿಗಳು ಒಂದೇ ರೀತಿಯಲ್ಲ. ಆ ದಿನಗಳಲ್ಲೂ ಎಂದಿನಂತೆಯೇ ತಮ್ಮ ಕೆಲಸ ಕಾರ್ಯ ಮಾಡಿಕೊಂಡು ಸಹಜವಾಗಿ ಇರುತ್ತಾರೆ. ಅವರಿಗೆ ರಜೆ ಬೇಡವೇ. ಹಾಗಾಗಿ ಇದು ಹಕ್ಕಿನ ರಜೆಯಾಗಬೇಕೇ ಹೊರತು ತಗೊಳ್ಳಲೇಬೇಕೆಂಬ ಒತ್ತಾಯ ಬೇಡ ಅನ್ನಿಸ್ತಿದೆ. ಪರಿಸ್ಥಿತಿಯ ರೀತಿ ನೋಡಿಕೊಂಡು ರಜೆ ತಗೊಳ್ಳುವುದು ಬಿಡುವುದು ನಮ್ಮ ಹಕ್ಕಾಗಲಿ.
ತುಂಬಾ ಹಿಂದಿನಿಂದ ಈ ಮುಟ್ಟು ಎನ್ನುವ ನೈಸರ್ಗಿಕ ಸಹಜ ಕ್ರಿಯೆಗೆ ಬಹಳ ಮಹತ್ವ ಕೊಟ್ಟು ಇದನ್ನೊಂದು ಅಸಹಜ ಕ್ರಿಯೆಯೆನೋ ಎನ್ನುವಂತೆ ಬಿಂಬಿಸಲಾಗಿರೋದರಿಂದ ಧೈರ್ಯವಾಗಿ ಹೆಣ್ಣುಮಕ್ಕಳು ತಮ್ಮ ಮನದ ಮಾತನ್ನು ಹೇಳಲು ಕಷ್ಟಸಾಧ್ಯವಾಗುತ್ತಿತ್ತು. ಆದರೆ ಈಗಿನೆಲ್ಲ , yeah I am bleeding ಅನ್ನುವಷ್ಟು ಸುಧಾರಿಸಿದ್ದೇವೆ. ಆದರೂ ನಾವು ಎಷ್ಟೇ ಮುಂದುವರಿದರೂ ನೋವು ನೋವೇ. ಆಗ ಒಂದು ರೂಮಲ್ಲಿರಲು ಹೇಳಿ ದೈಹಿಕ ಹಿಂಸೆಯಂತಹ ನೋವಿನಿಂದ ರೆಸ್ಟ್ ಕೊಡುತ್ತಿದ್ದರು. ಈಗ ರಜೆ ತಗೊಳ್ಳಿ ಅಂತಿದಾರೆ. ಈಗ ಕುಟ್ಟುವ ಬೀಸುವ ನೀರೆಳೆಯುವ ಯಾವ ರೀತಿಯ ಕಷ್ಟಕರ ಕೆಲಸವಿಲ್ಲದಿದ್ದರೂ ಆ ನೋವಿನ ದಿನಗಳಲ್ಲಿ ಸುಮ್ಮನೆ ಕೂರೋಣ ಅನ್ನಿಸುವುದು ಹೌದು. ಹಾಗಾಗಿ ಮುಟ್ಟಿನ ಈ ದಿನಗಳಲ್ಲಿ ರಜೆ ತೆಗೆದುಕೊಳ್ಳುವುದು ಸೂಕ್ತ.