Site icon Vistara News

Women’s Day 2023: ಹಲವು ದೇಶಗಳಲ್ಲಿ ಇರುವ ವ್ಯವಸ್ಥೆ ನಮ್ಮಲ್ಲೂ ಬರಲಿ

Let the system that exists in many countries also come to us

#image_title

ಶ್ರೀಕಲಾ ಡಿ.ಎಸ್

‘ಅವಳಿಗೆ ಇವತ್ತು ರಜೆ.’ ನಮ್ಮ ಮನೆಗಳಲ್ಲೆಲ್ಲಾ ಮುಟ್ಟಿನ ದಿನಗಳಿಗೆ ಇರುವ ಹೆಸರೇ ರಜೆ! ಈ ರಜೆಗಾಗಿ ಪ್ರತ್ಯೇಕ ಬೇಡಿಕೆಯ ಅರ್ಜಿ ಸಲ್ಲಿಸದೆ ಹಿರಿಯರು `ನೀನು ಆರಾಮಾಗಿ ರಜೆ ತೆಗೆದುಕೋ’ ಎಂದಿದ್ದರು. ತಿಂಗಳಿಡೀ ದುಡಿವ ಅವಳಿಗೆ ಮೂರು ದಿನ ಹಾಯಾಗಿರಲು ಕೇಳದೆಯೇ ಅವಕಾಶ ಕಲ್ಪಿಸಿದ್ದರು. ಸಾಮಾಜಿಕ, ಕೌಟುಂಬಿಕ, ಔದ್ಯೋಗಿಕ ಸ್ಥಿತಿಗಳು ಬೇರೆಯಾಗಿತ್ತು, ಕಾಲ ಹಳತಾಗಿತ್ತು ಎಂದರೂ ಅವರ ನಿರ್ಧಾರ ಸರಿಯಾಗಿಯೇ ಇತ್ತು.
ಆದರಿದು ಹೆಣ್ಣು ಮಕ್ಕಳು ಓದಲು, ದುಡಿಯಲು ಹೊರಹೋಗುತ್ತಿರುವ ಕಾಲ. ರಜೆ ಬೇಕೇ ಎಂದರೆ ಖಂಡಿತ ಕೊಡಬೇಕು ಎನ್ನುತ್ತೇನೆ. ನಾನು ಇಷ್ಟು ವರ್ಷ ನೋಡಿದಂತೆ ಶೇಕಡಾ ತೊಂಭತ್ತರಷ್ಟು ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಹಲವು ಥರದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಯಾವುದೇ ಸರ್ವೇಯ ಅಂಕಿ-ಅಂಶವನ್ನು ಆಧರಿಸಿ ಹೇಳುತ್ತಿರುವುದಲ್ಲ. ನನ್ನ ಸ್ನೇಹಿತೆಯೊಬ್ಬಳಿಗೆ ಯಾವ ಪರಿ ಕಿಬ್ಬೊಟ್ಟೆ ಸೆಳೆಯುತ್ತಿತ್ತೆಂದರೆ ಮಾತ್ರೆಗೆಲ್ಲ ನೋವು ಬಗ್ಗುತ್ತಲೇ ಇರಲಿಲ್ಲ. ಪ್ರತೀ ತಿಂಗಳು ಇಂಜೆಕ್ಷನ್ ಬೇಕೇ ಬೇಕು. ನನಗಂತೂ ರಕ್ತಸ್ರಾವ ಯಾವಾಗಲೂ ಮೂರು ಪಟ್ಟು ಹೆಚ್ಚೇ. ಪ್ರತಿ ಹೆಣ್ಣು ಮಗಳಿಗೂ ಇಂತಹ ಥರಥರದ ಸಮಸ್ಯೆಗಳಿರುತ್ತವೆ. ಆದರೂ ಹೊರಗೆ ತೋರಿಸದೆ ಓಡಾಡುತ್ತಾಳೆ. ಅದವಳ ಸಹಜ ಪ್ರವೃತ್ತಿಯಲ್ಲವೇ?

ಅದೂ ಅಲ್ಲದೆ ಇವೆಲ್ಲಾ ಅಷ್ಟು ‘ಓಪನ್’ ಆಗಿ ಮಾತನಾಡುವ ವಿಚಾರವೂ ಆಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಮಡಿವಂತಿಕೆ ಕಡಿಮೆಯಾಗುತ್ತಿದೆ ಎನ್ನುವುದು ಖುಷಿಯ ಸಂಗತಿ. ಹಾಗಾಗಿಯೇ ರಜೆಯ ವಿಚಾರವೂ ಮುನ್ನೆಲೆಗೆ ಬಂದಿದೆ.
ಇದು ಪ್ರಕೃತಿಯ ಸಹಜ ಕ್ರಿಯೆಯೇ ಆದರೂ ಎಲ್ಲರಿಗೂ ಎಂದಿನಂತೆ ಆರಾಮಾಗಿ ಇರಲು ಸಾಧ್ಯವೇ? ಕೆಲವರು ಟ್ರೆಕ್ಕಿಂಗ್, ಜಿಮ್, ಕ್ರೀಡೆಯಲ್ಲಿ ತೊಡಗಿಕೊಳ್ಳಬಹುದು.. ಇವೆಲ್ಲಾ ಅವರವರ ವೈಯಕ್ತಿಕ ಸಾಮರ್ಥ್ಯ, ನಿಭಾಯಿಸುವಿಕೆಯ ಮಟ್ಟ, ಮನಸ್ಥಿತಿ-ದೇಹಸ್ಥಿತಿ ಎಲ್ಲವನ್ನೂ ಅವಲಂಬಿಸಿದೆ. ನಾನೂ ಋತುಸ್ರಾವದ ದಿನಗಳಲ್ಲಿ ಎಷ್ಟೋ ಬಾರಿ ಭರತನಾಟ್ಯ ಪ್ರದರ್ಶನ ಕೊಟ್ಟದ್ದಿದೆ. ಇವೆಲ್ಲಾ ಅನಿವಾರ್ಯತೆಗಳು.
ರಜೆ ಕೊಡಬೇಕು ಎಂದ ಮಾತ್ರಕ್ಕೆ ಋತುಸ್ರಾವವನ್ನು ಸಮಸ್ಯೆ ಅಥವಾ ರೋಗ ಎಂಬ ದೃಷ್ಟಿಯಿಂದ ನೋಡಬಾರದು. ಪ್ರಕೃತಿ ಸುಗಮವಾಗಿ ಕಾರ್ಯ ನಡೆಸುವಲ್ಲಿ ಸೃಷ್ಟಿಕ್ರಿಯೆ ಇರಲೇಬೇಕಾದದ್ದು. ಅಂತಹ ಸೃಷ್ಟಿ ಕ್ರಿಯೆಯ ಬೀಜಾಂಕುರದ ಬಲಿಷ್ಠ ಮೂಲವಿದು ಎನ್ನುವ ಧೋರಣೆ ಮುಖ್ಯ.

ಕೆಲವು ಕ್ರಿಯೆಯ ಅನಿವಾರ್ಯತೆ ಹೆಚ್ಚಿದಷ್ಟೂ ಸವಾಲೂ ಹೆಚ್ಚುತ್ತದೆ. ಈ ಸವಾಲಿಗೆ ಸಹಕರಿಸಲು ಉದ್ಯೋಗದ ಸ್ಥಳಗಳಲ್ಲಿ ರಜೆ ಇರಲಿ. ಈಗಾಗಲೇ ಬೆರಳೆಣಿಕೆಯ ಕಂಪನಿಗಳಲ್ಲಿ ತಿಂಗಳ ಮುಟ್ಟಿನ ದಿನಗಳಿಗೆ ರಜೆ ಮೀಸಲಿದೆ ಕೂಡಾ. ಹಲವು ದೇಶಗಳಲ್ಲೂ ಈ ವ್ಯವಸ್ಥೆ ಇದೆ. ನಮ್ಮಲ್ಲೂ ಬರಲಿ. ಆ ಮೂಲಕ ಹೆಣ್ಣಿನ ಬದುಕಿನ ಸೂಕ್ಷ್ಮ ಮತ್ತು ಅಷ್ಟೇ ಮಹತ್ವದ ಕ್ರಿಯೆಗೆ ಸಮಾಜ ಕೇವಲ ‘ಪಾಪ, ಈ ಹೆಣ್ಣು ಮಕ್ಳಿಗೆ ಇದೊಂದು ಕಷ್ಟ’ ಎನ್ನದೆ ಸಮರ್ಥವಾಗಿ ಸ್ಪಂದಿಸಲೂ ಅವಕಾಶ ಸಿಕ್ಕಂತಾಗುತ್ತದೆ.

Exit mobile version