ವಯಸ್ಸು ೨೫ ಆಯ್ತು, ಇನ್ನೂ ಮನೆಯವರ ಮುದ್ದಿನ ಮಗಳೇ ಆಗಿ ಎಲ್ಲದಕ್ಕೂ ಹೆತ್ತವರನ್ನೇ ಅವಲಂಬಿಸಿದ್ದೀರಾ? ಅಥವಾ ಇಷ್ಟರಲ್ಲಾಗಲೇ, ಯಾರದೋ ಪತ್ನಿಯಾಗಿ ಒಂದು ರಕ್ಷಣೆಯ ಜಗತ್ತಿನಿಂದ ಇನ್ನೊಂದು ರಕ್ಷಣೆಯ ಜಗತ್ತಿಗೆ ಕಾಲಿಟ್ಟು ಗಂಡನ ಜಗತ್ತಿನೊಳಗೆ ಸೇಫ್ ಫೀಲ್ ಅನುಭವಿಸುತ್ತಿದ್ದೀರಾ? ಹಾಗಿದ್ದರೆ, ಒಮ್ಮೆ ಯೋಚಿಸಿ. ನಿಮಗೆ ನಿಜವಾದ ಜಗತ್ತಿನ ಅರಿವು ಆಗಿಲ್ಲ ಎಂದೇ ಹೇಳಬೇಕು.
ಸಮಾಜ ಹಾಕಿಕೊಟ್ಟ ನೀತಿ ನಿಯಮಗಳಲ್ಲಿ ಬದುಕುವುದು ಹೆಚ್ಚು ಮಹತ್ವಾಕಾಂಕ್ಷೆಗಳಿಲ್ಲದ ಮಂದಿಗೆ ಸುಲಭ. ಆದರೆ, ಕನಸು ಗುರಿಗಳನ್ನು ಹೊತ್ತ ಪ್ರಶ್ನಾ ಸ್ವಭಾವದ, ಹಕ್ಕಿಯಂತೆ ರೆಕ್ಕೆ ಕಟ್ಟಿಕೊಂಡು ಜಗದಗಲ ರೆಕ್ಕೆ ಹರವಿ ಬದುಕುವ ಕನಸು ಹೊತ್ತ ಮಂದಿಗೆ ಕಷ್ಟ. ಹೆಣ್ಣು ಈ ಚೌಕಟ್ಟಿನೊಳಗೇ ಇದ್ದರೆ ಜಗತ್ತು ಪ್ರಶ್ನಿಸುವುದಿಲ್ಲ. ಹೆಚ್ಚು ಸವಾಲುಗಳೂ ಎದುರಾಗುವುದಿಲ್ಲ. ಎಲ್ಲರಿಂದ ಗೌರವ ಪಡೆದುಕೊಂಡು, ಮನೆಯ ಹೆಣ್ಣುಮಗಳೆಂಬ ಪ್ರೀತಿ ಕಾಳಜಿ ದೊರೆತು ಯಾವುದೇ ತೊಂದರೆಯೇ ಇಲ್ಲದಂತೆ ಬದುಕು ಸವೆಸಲೂ ಬಹಳಷ್ಟು ಹೆಣ್ಣುಮಕ್ಕಳಿಗೆ ಸಾಧ್ಯವಿದೆ. ಸುಲಭ ಕೂಡಾ. ಆದರೆ, ಒಮ್ಮೆ, ಒಬ್ಬರೇ ಮನೆಯಿಂದ ಹೊರಬಂದು, ಸಮಾಜದ ಈ ಸೋ ಕಾಲ್ಡ್ ಸೆಕ್ಯೂರಿಟಿಗಳ ಜಗತ್ತಿನಿಂದ ಹೊರ ನಿಂತು, ನಿಮ್ಮ ಜೀವನ, ನಿಮ್ಮ ಗುರಿ, ನಿಮ್ಮ ಕನಸು ಎಂದು ನಿಮ್ಮದಷ್ಟೇ ಆಂಗಲ್‌ನಿಂದ ಚೌಕಟ್ಟು ರಹಿತವಾಗಿ ಬದುಕನ್ನು ನೋಡಿ. ಆಗ ಬದುಕು ನಾವು ಕಂಡಿದ್ದಷ್ಟೇ ಅಲ್ಲ ಎಂಬ ಅರಿವಾಗುತ್ತದೆ. ೨೫ರ ವಯಸ್ಸಿಗೆ ಬಂದಾಗ ಇಷ್ಟಾದರೂ ಒಬ್ಬ ಹೆಣ್ಣುಮಗಳಿಗೆ ದಕ್ಕದಿದ್ದರೆ ಹೇಗೆ? ಹಾಗಾದರೆ, ೨೫ ಆಗುವುದರೊಳಗೆ ಹೀಗಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ.
೧. ಸಮಾಜ ಹೆಣ್ಣಿನಿಂದ ಏನು ಬಯಸುತ್ತದೆ ಎಂಬ ನೀತಿ ನಿಯಮಕ್ಕೆ ಹೂಂಗುಟ್ಟುವ ಮೊದಲು ತನಗೆ ಬೇಕಾದಂತೆ ತಾನು ಬದುಕುತ್ತಿದ್ದೇನಾ ಎಂದು ಪ್ರಶ್ನೆ ಹಾಕಿಕೊಂಡು, ಅದಕ್ಕೆ ಹೌದು ಎಂದು ಉತ್ತರ ಸಿಕ್ಕಿದರೆ ನೀವು ಧನ್ಯ.
೨. ಒಂದು ಬ್ಯಾಂಕ್ ಅಕೌಂಟ್ ಹಾಗೂ ಇನ್ನು ಕೆಲವು ತಿಂಗಳ ಕಾಲ ಯಾವುದೇ ಟೆನ್ಶನ್ ಇಲ್ಲದೆ ಯಾರ ಬಳಿಯೂ ಕೈಚಾಚದೆ ಬದುಕುವಷ್ಟು ಅದರಲ್ಲಿ ಬ್ಯಾಲೆನ್ಸ್ ಇರುವುದು ಬಹಳ ಮುಖ್ಯ.
೩. ಅಕ್ಕನಂತೆ ಸಂತೈಸುವ, ಯಾವಾಗಲೂ ಜೊತೆಗೆ ನಿಲ್ಲುವ ಒಳಹೊರಗನ್ನು ಅರ್ಥ ಮಾಡಿಕೊಳ್ಳುವ ಗೆಳತಿಯೊಬ್ಬಳಿದ್ದರೆ ಚೆನ್ನ.
೪. ಮನೆಯೊಳಗೆ ನಿಮ್ಮದೇ ಒಂದು ಸಣ್ಣ ಜಾಗ ಇದ್ದರೆ ಒಳ್ಳೆಯದು. ಅಲ್ಲಿ ನಿಮಗೆ ಪ್ರೈವಸಿ ಸಿಗುತ್ತದೆ ಎಂದಾದಲ್ಲಿ ಬಹಳ ಒಳ್ಳೆಯದು.
೫. ಸಂಗಾತಿ ಬೇಕು ಅಂತನಿಸಿ ತನ್ನ ಕಾಲಲ್ಲಿ ನಿಂತು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಿಮಗೆ ಇದ್ದರೆ ಹಾಗೂ ಆ ಬಗ್ಗೆ ನಿಮಗೆ ಸಂತೋಷವಿದ್ದರೆ ಚಿಂತೆಯಿಲ್ಲ. ಆದರೆ, ಸಮಾಜಕ್ಕಾಗಿ ಹೀಗಿರಲೇಬೇಕಲ್ಲ, ಗೆಳತಿಯರೆಲ್ಲ ಮದುವೆಯಾದರು, ಮದುವೆಯಾದರೆ ಸೇಫ್ ಎಂಬ ಉತ್ತರಗಳು ನಿಮ್ಮವಾಗಿರದಿರಲಿ.
ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?
೬. ವೈಯಕ್ತಿಕ ಸ್ವಾತಂತ್ರ್ಯ ಬಹಳ ಮುಖ್ಯ. ತನ್ನ ಗೆಳೆಯರೊಂದಿಗೆ, ಇಷ್ಟಡುವವರ ಜೊತೆಗೆ ಸಮಯ ಕಳೆಯುವ ಹಾಗೂ ಆ ಬಗ್ಗೆ ನಿರ್ಧರಿಸುವ ಸ್ವಾತಂತ್ರ್ಯ ಇರಬೇಕು.
೭. ಶಾಪಿಂಗ್, ಫ್ಯಾಷನ್ ಇವುಗಳ ಹೊರತಾಗಿಯೂ ನಿಮ್ಮಲ್ಲಿ ಆಸಕ್ತಿಕರವೇನಾದರೂ ಹವ್ಯಾಸಗಳು ಒಂದಾದರೂ ಇದ್ದರೆ ಚೆನ್ನ. ಅದು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
೮. ಯೆಸ್. ಒಂದಿಷ್ಟು ಅಡುಗೆ ಗೊತ್ತಿರಬೇಕು. ಇದು ಅಡಗೂಲಜ್ಜಿಯ ಹಳೆ ನಿಯಮವಾಯಿತು ಎಂದು ಮೂಗು ಮುರಿಯುವುದು ಬೇಡ. ಅಡುಗೆ ಎಂಬುದೊಂದು ಲೈಫ್ ಸ್ಕಿಲ್. ತನ್ನ ಹೊಟ್ಟೆಗೆ ಹಾಕಿಕೊಳ್ಳುವಷ್ಟಾದರೂ ಅಡುಗೆ ಮಾಡಿ ತಿನ್ನುವ ಕಲೆ ಗೊತ್ತಿರಬೇಕು ಹಾಗೂ ಸುಲಭದ ರೆಸಿಪಿಗಳು ತಲೆಯೊಳಗಿರಬೇಕು. ಬೆಳಗ್ಗೆದ್ದು ಚುರುಕಾಗಿ, ಫಟಾಫಟ್ ಮಾಡಿ ತಿನ್ನುವುದು ಎಷ್ಟು ಹಿತವಾದ ಸಾತಂತ್ರ್ಯ.
೯. ತನ್ನ ಪಾಡಿಗೆ ತಾನು ಬ್ಯಾಕ್‌ಪ್ಯಾಕ್ ಹೆಗಲಿಗೇರಿಸಿ ತನ್ನಿಚ್ಛೆಯಂತೆ ಎಲ್ಲಾದರೂ ಸುತ್ತಾಡಿ ಬಂದು ಗೊತ್ತಿರಬೇಕು. ಪ್ರಪಂಚ ಸುತ್ತಿದರಷ್ಟೇ ವಾಸ್ತವದ ಅರಿವಾಗುತ್ತದೆ.
೧೦. ತನ್ನ ಗುರಿಯೇನು ಎಂಬ ಅರಿವು ಈ ವಯಸ್ಸಿಗೆ ಬಂದಿರಬೇಕು. ತಾವು ಯಾವ ಕ್ಷೇತ್ರದಲ್ಲಿ ಮುಂದೆ ಹೋಗಬೇಕು, ತನ್ನ ಕನಸುಗಳೇನು ಎಂಬ ಬಗೆಗೆ ಸ್ಪಷ್ಟ ಅರಿವು ಹೊಂದಿರಬೇಕು.
ಇದನ್ನೂ ಓದಿ | ಪ್ರತಿ ಹೆತ್ತವರೂ ತಮ್ಮ ಹೆಣ್ಣುಮಕ್ಕಳಿಗೆ ಕಲಿಸಲೇಬೇಕಾದ 10 ಸಂಗತಿ!