Site icon Vistara News

ಎನ್‌ಸಿಸಿಯಿಂದ ಸೂಪರ್ ಮಾಡೆಲ್‌, ನೃತ್ಯದಿಂದ ಕನ್ನಡ ಹೀರೋಯಿನ್:‌ ಇದು ಆಶಾ ಭಟ್‌ ಲೈಫ್‌ ಸ್ಟೋರಿ

asha bhat

ಕನ್ನಡತಿ ಆದರೂ ‘ರಾಬರ್ಟ್’ ಸಿನಿಮಾದಲ್ಲಿ ನಟಿಸುವ ಮುನ್ನ ಆಶಾ ಭಟ್‌ ಅವರ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿರಲಿಲ್ಲ. ಮೊದಲ ಕನ್ನಡ ಚಿತ್ರದಲ್ಲೇ ದರ್ಶನ್ ಜೊತೆ ಆಶಾ‌ ಭಟ್ ನಟಿಸಿದರು. ಅಭಿಮಾನಿಗಳು ಮೊದಲಿಗಿಂತ ರಾಬರ್ಟ್‌ ಸಿನಿಮಾ ನಂತರ ಇವರನ್ನು ಹೆಚ್ಚಾಗಿ ಗುರುತಿಸುತ್ತಾರೆ.

ಹಾಗೇ ನಿಮಗಿದು ಗೊತ್ತೊ ಇಲ್ಲವೋ, ಸೂಪರ್‌ ಮಾಡೆಲ್‌ ಆಗಿರುವ ಆಶಾ ತಮ್ಮ 17ನೇ ವಯಸ್ಸಿನಲ್ಲೇ NCC ಕೆಡೆಟ್‌ ಕೂಡ ಆಗಿದ್ದರು. ಬನ್ನಿ ಇವರ ಬಗ್ಗೆ ಇನ್ನಷ್ಟು ತಿಳಿಯೋಣ.

asha bhat

ಆಶಾ ಭಟ್ ಕರ್ನಾಟಕದಿಂದ ಬಂದ ಮಾಡೆಲ್, ಎಂಜಿನಿಯರ್ ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದವರು. ಅವರು 20014ರ ಮಿಸ್ ಸುಪ್ರಾನ್ಯಾಷನಲ್ ಸ್ಪರ್ಧೆಯನ್ನು ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮಾಡೆಲ್‌ ಎಂಬ ಹೆಗ್ಗಳಿಕೆ ಇವರದು. ಪೋಲೆಂಡ್‌ನ ವಾರ್ಸಾದಲ್ಲಿ ನಡೆದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಭಟ್ ಕಿರೀಟ ಮುಡಿಗೇರಿಸಿಕೊಂಡರು. ಸೌಂದರ್ಯ ಸ್ಪರ್ಧೆಯಲ್ಲಿ ಜಯ ಗಳಿಸಿದ ಆಶಾಭಟ್‌ಗೆ ಕಳೆದ ಬಾರಿಯ ಮಿಸ್ ಸುಪ್ರಾನ್ಯಾಷನಲ್ ಫಿಲಿಪೈನ್ಸ್‌ನನ ಮುತ್ಯಾ ದತೂಲ್ ಕಿರೀಟ ತೊಡಿಸಿದ್ದರು.

ಆಶಾ ಭಟ್ ಸಾಧನೆಗಳು:
ಮಿಸ್ ಸೂಪರ್‌ನ್ಯಾಷನಲ್ -2014
ಮಿಸ್ ದಿವಾ ಯುನಿವರ್ಸ್- 2014 (ರನ್ನರ್ ಅಪ್)
ಮಿಸ್ ಬ್ಯೂಟಿಫುಲ್ ಸ್ಮೈಲ್ -2014 ಭಾರತದ ಸಾರ್ಕ್ ಅಂಬಾಸಿಡರ್

ಆಶಾ ಭಟ್‌ ಭಾಲ್ಯದ ಪೋಟೊ

ಆಶಾ ಭಟ್ ಹುಟ್ಟಿದ್ದು 1992ರ ಸೆಪ್ಟೆಂಬರ್ 5, ಶಿವಮೊಗ್ಗದ ಭದ್ರಾವತಿಯಲ್ಲಿ. ಆಶಾ ತಂದೆ ಸುಬ್ರಹ್ಮಣ್ಯ ಭಟ್ ಹಾಗೂ ಶ್ಯಾಮಲಾ ಭಟ್. ಆಶಾ ತಂದೆ ತಾಯಿ ಇಬ್ಬರೂ ಮೆಡಿಕಲ್ ಲ್ಯಾಬೊರೇಟರಿಯಲ್ಲಿ ಟೆಕ್ನಿಷಿಯನ್​​​ಗಳು. ಆಶಾಗೆ ಅಕ್ಷತಾ ಎಂಬ ಒಬ್ಬರು ಅಕ್ಕ ಇದ್ದು, ಆಕೆ ಮಕ್ಕಳ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಭದ್ರಾವತಿಯ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಆಶಾ ಭಟ್, ನಂತರ ದಕ್ಷಿಣ ಕನ್ನಡದ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಓದುವಾಗ ಎನ್​ಸಿಸಿ ಕೆಡೆಟ್ ಆಗಿದ್ದರು. ದೆಹಲಿಯಲ್ಲಿ ನಡೆದ ರಿಪಬ್ಲಿಕ್ ಡೇ ಪೆರೇಡ್​​​ (ಆರ್​​ಡಿ ಕ್ಯಾಂಪ್​​) ನಲ್ಲಿ ಕೂಡಾ ಆಕೆ ಭಾಗವಹಿಸಿದ್ದರು. 2009ರಲ್ಲಿ ಶ್ರೀಲಂಕಾ ಮಿಲಿಟರಿ ಅಕಾಡೆಮಿಗೆ ಕೂಡಾ ಭೇಟಿ ನೀಡಿ ಅಲ್ಲಿ ಕೂಡಾ ಆಲ್​ರೌಂಡರ್​​​​​​ ಪ್ರಶಸ್ತಿ ಪಡೆದಿದ್ದಾರೆ. ಆಗಿನ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ್ದರು. ನಂತರ ಆರ್​ವಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

NCC ಕೆಡೆಟ್‌ ಆಗಿದ್ದ ಆಶಾ

ಭಾಲ್ಯದಿಂದಲೂ ಚುರುಕು ಸ್ವಭಾವದವರಾದ ಆಶಾ, ಶಾಲಾ-ಕಾಲೇಜುಗಳಲ್ಲಿ ಸಕತ್‌ ಆಕ್ಟೀವ್‌. ನೃತ್ಯದಲ್ಲೂ ಆಸಕ್ತಿ ಇರುವ ಕಾರಣ 14 ವರ್ಷದಿಂದ ಕ್ಲಾಸಿಕಲ್‌ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಇವರ ಡಯಟ್‌ ಕಟ್ಟುನಿಟ್ಟಾಗಿ ಸಸ್ಯಾಹಾರ. ಕೆಲಸದ ಮಧ್ಯೆ ಕಾಫಿ ಕುಡಿಯುವುದು ಇಷ್ಟ. ಓದುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುವ ಆಶಾ ಅವರ ಇಷ್ಟದ ಪುಸ್ತಕ “ಯು ಕ್ಯಾನ್‌ ವಿನ್‌”. ಪ್ರವಾಸ ಹಾಗೂ ಅಡುಗೆ ಮಾಡುವುದು ಕೂಡ ಇವರ ಇಷ್ಟಗಳಲ್ಲಿ ಒಂದು. ನಾಯಿಗಳೆಂದರೆ ನಟಿ ಆಶಾಗೆ ತುಂಬಾ ಇಷ್ಟ. ಆ್ಯಕ್ಟಿಂಗ್ ಮಾತ್ರವಲ್ಲದೆ, ಅಸ್ತ್ರ ಫೌಂಡೇಶನ್ ಎಂಬ ಎನ್​ಜಿಒ ಸಂಸ್ಥೆಯನ್ನು ನಡೆಸುತ್ತಿದ್ದಾರೆ ನಟಿ ಆಶಾ.

asha bhat

2019ರಲ್ಲಿ ಹಿಂದಿಯ ‘ಜಂಗ್ಲಿ’ ಚಿತ್ರದ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಆಶಾ ಭಟ್ ನಂತರ ‘ರಾಬರ್ಟ್’​ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಲು ಆಯ್ಕೆಯಾದರು. ಇದರೊಂದಿಗೆ ದೋಸ್ತಾನ – 2 ಹಿಂದಿ ಚಿತ್ರದಲ್ಲಿ ಕೂಡಾ ಆಶಾ ಭಟ್ ನಟಿಸುತ್ತಿದ್ದಾರೆ. ಕರ್ನಾಟಕದ ಹೆಣ್ಣು ಮಗಳಿಂದು ಜಗತ್ತಿನ ವಿವಿದೆಡೆಗಳಲ್ಲಿ ಮಾಡೆಲಿಂಗ್‌, ನಟನೆಯ ಮೂಲಕ ಮಿಂಚುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

asha bhat

ಇದನ್ನೂ ಓದಿ: ಮಿಸ್ ಮಾಡಬೇಡಿ, ವೇಶ್ಯೆಯರ ಬದುಕಿನ ಕಥಾನಕದ ಟಾಪ್ 5 ಸಿನಿಮಾ

Exit mobile version