Site icon Vistara News

Women’s Day 2023 : ಮುಟ್ಟಿನ ರಜೆ ಈ ಸಮಾಜ ಮಹಿಳೆಗೆ ಕೊಡುವ ಗೌರವ

Menstrual leave is a respect given to women by this society

#image_title

ನಂದಿನಿ ಹೆದ್ದುರ್ಗ

ಹೆಣ್ಣಿನ ದೇಹ ರಚನೆಯೇ ಅತೀ ಸಂಕೀರ್ಣ.
ಕರ್ವ್ಸ್ ಅ್ಯಂಡ್ ಪ್ಲ್ಯೇನ್ಸ್ ಎನ್ನುವ ದೃಷ್ಟಿಯಿಂದ ಹೆಣ್ಣನ್ನು ನೋಡುವ ಪ್ರತಿಯೊಬ್ಬರು ಆ ಓರೆಕೋರೆಗಳು ಅವಳ ದೈನಂದಿನ ಜೀವನದಲ್ಲಿ ಕೊಡುವ ತ್ರಾಸುಗಳ ಕುರಿತೂ ಅರಿಯಬೇಕು. ಲೈಂಗಿಕ ಶಿಕ್ಷಣದಲ್ಲಿ ಹೆಣ್ಣಿನ ದೇಹ ರಚನೆಯ ಬಗ್ಗೆ ಸಮಾಜ ಅಥವಾ ಸ್ವತಃ ಹೆಣ್ಣೇ ತಿಳಿದುಕೊಳ್ಳಬೇಕಾದಂತಹ ಪಠ್ಯವನ್ನು ಅಳವಡಿಸುವುದರ ತುರ್ತುಕಾಲ ಇದು. ತಾಯಾಗಿ ಮಗಳಾಗಿ ಹೆಂಡತಿಯಾಗಿ ಎನ್ನುವ ಅದೇ ಹಳಸಲು ವ್ಯಾಖ್ಯಾನದಿಂದ ಹೆಣ್ಣನ್ನು ನೋಡುವ ಬಗೆ ಮುಗಿದು ಇವತ್ತು ಸಮಾಜದ ಎಲ್ಲ ರಂಗದಲ್ಲೂ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ತೊಡಗಿಸಿಕೊಂಡಿರುವ ಕಾಲದಲ್ಲಿದ್ದೇವೆ.ಆದರೆ ತೊಡಗಿಸಿಕೊಂಡಿರುವುದ ಅರಿವಾಗಿರುವುದು ಕೇವಲ ಅವಳಿಗೆ ಮಾತ್ರ.

ಪಿತೃ ಸಂಸ್ಕೃತಿಯ ಈ ಸಮಾಜ ತಾಯಾಗಿ ಮಗಳಾಗಿ ಹೆಂಡತಿಯಾಗಿ ಎನ್ನುವ ಪಾತ್ರವನ್ನು ಸರಿಯಾಗಿ ನಿಭಾಯಿಸಿದ ನಂತರ ಮುಂದಿನದನ್ನು ನೋಡಿ ಅಂಥದೊಂದು ಆಣತಿಯನ್ನು ಸ್ವರವಿಲ್ಲದೇ ಹೊರಡಿಸಿದೆ.
ಈ ಅಣತಿಯಂತೆ ನಡೆಯಲೇಬೇಕಾದ ಸವಾಲು ಇವಳೆದುರಿಗಿದೆ. ಸವಾಲೇ ಯಾಕೆಂದರೆ ಅವಳು ಇಲ್ಲಿ ತನ್ನ ವ್ಯಕ್ತಿತ್ವವೂ ನಿಮ್ಮದಕ್ಕಿಂತ ಭಿನ್ನವೇನಿಲ್ಲ ಎನ್ನುವುದನ್ನು ನಿರೂಪಿಸಿಕೊಳ್ಳುವ ಬಳಲಿಕೆಯ ಸುಖದಲ್ಲಿದ್ದಾಳೆ.

ಈ ಎರಡು ದೋಣಿಯ ಪಯಣವನ್ನು ಅತ್ಯಂತ ಜಾಗರೂಕತೆಯಿಂದ ಮಾಡುವ ಹೆಣ್ಣಿಗೆ ಅವಳ ದೇಹ ಮತ್ತು ಸಂತಾನೋತ್ಪತ್ತಿಯ ಶಕ್ತಿಯೇ ಅವಳನ್ನು ಹೈರಾಣಾಗಿಸುತ್ತಿದೆ.ವಿಜ್ಞಾನ ಮಂಗಳಗ್ರಹವನ್ಬು ವಾಸಯೋಗ್ಯವಾಗಿ ಮಾಡುತ್ತಿರಬಹುದು. ಹೆಣ್ಣಿನ ಮುಟ್ಟುಕಾಲದ ನಿತ್ರಾಣಕ್ಕೆ ನೋವಿಗೆ ಭಾವನೆಗಳ ಏರುಪೇರಿಗೆ ಮದ್ದು ನೀಡುತ್ತಿಲ್ಲ.ನೀಡಲೂ ಬಾರದು. ಈ ನಿಟ್ಟಿನಲ್ಲಿ ಸ್ತ್ರೀ ಕುಲದ ಒಕ್ಕೊರಲ ಧ್ವನಿ “ನಾವು ಸಮಾನರಲ್ಲ.ಭಿನ್ನರು.ನಮ್ಮ ಭಿನ್ನತೆಯನ್ನು ಒಪ್ಪಿಕೊಳ್ಳಿ ಮತ್ತು ಗೌರವಿಸಿ’ ಎನ್ನುವುದು. ಆದರೆ ಇದನ್ನು ಆನ್ ಡಿಮ್ಯಾಂಡ್ ಪಡೆಯಬೇಕಾಗಿರುವುದು ಮಾತ್ರ ಜಗತ್ತು ಇನ್ನೂ ಮನುಷ್ಯತ್ವ ಪಡೆಯದಿರುವುದರ ಕುರುಹು.

ಮುಟ್ಟುಕಾಲದ ರಜೆ ಅವಶ್ಯಕವೇ ಎನ್ನುವ ಚರ್ಚೆಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರಿಸೆಷನ್ ಅವಧಿಯತ್ತ ಬಿರುಸಾಗಿ ಓಡುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಇಂತಹದೊಂದು ನಿರ್ಧಾರದಿಂದ ಆಗುವ ನಷ್ಟ ಎಷ್ಟು ಎನ್ನುವುದು ಕೆಲವರ ಮಾತಾದರೆ, ವೇತನ ರಹಿತ ರಜೆ ಪಡೆಯುವುದು ಹೆಚ್ಚು ಸೂಕ್ತ ಅಂತ ಕೆಲವರು ಹೇಳ್ತಿದ್ದಾರೆ. ಜಗತ್ತಿನ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಮುಟ್ಟುರಜೆ ವೇತನ ಸಹಿತವಾಗಿ ಜಾರಿಯಾಗಿ ದಶಕಗಳೇ ಕಳೆದಿವೆ. ವಿಷಯುಕ್ತ ಆಹಾರವನ್ನೇ ಸೇವಿಸಬೇಕಾದ ಪ್ರಸ್ತುತ ಕಾಲದಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಸ್ತ್ರೀ ಸಂಬಂದಿ ತೊಂದರೆಗಳು ಮುಖ್ಯವಾಗಿವೆ.

ಹತ್ತರಲ್ಲಿ ಏಳು ಹೆಣ್ಣುಗಳಿಗೆ ಫೈಬ್ರಾಯಿಡ್ ಅಥವಾ ಸಿಸ್ಟ್ ಇದ್ದೇ ಇದೆ.ಈ ಸಮಸ್ಯೆ ಇದ್ದ ಹೆಣ್ಣಿನ ಮುಟ್ಟು ತೀವ್ರ ನೋವು ಮತ್ತು ಸ್ರಾವದಿಂದ ಕೂಡಿರುತ್ತದೆ. ವಿಪರೀತ ನೋವಿನ ಕಾರಣವೂ ಒಂದಾಗಿ ಹಾರ್ಮೋನುಗಳ ಏರಿಳಿತವೂ ಸೇರಿ ಸಹಿಸುವ ಕ್ಷಮತೆ ಕುಂದುತ್ತದೆ. ನೇರವಾಗಿ ಇದು ಅವಳ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
ಮೂವ್ವತ್ತರ ಒಳಗಿನ ಮುಟ್ಟು ವಿಪರೀತ ನೋವಿನಿಂದಲೂ ನಲವತ್ತರ ನಂತರ ಅನಿಯಮಿತವಾಗಿಯೂ ಆಗಿ ಜೀವ ಹೈರಾಣಾಗಿಸುತ್ತದೆ. ಮುಟ್ಟು ನಿಲ್ಲುವ ಸಮಯವಂತೂ ಹೆಣ್ಣಿಗೆ ಮರುಹುಟ್ಟು.

ಗರ್ಭಕೋಶದ ಉರಿಯೂತ ,ಗರ್ಭನಾಳದ ಸೋಂಕು, ಸ್ತನಗಳ ಗಾತ್ರ ಹೆಚ್ಚುವುದು, ಸ್ತನಗಳಲ್ಲಿ ನೋವು ಇಂತಹ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುವ ಹೆಣ್ಣು ಒಳಗಿಂದ ಜೊಳ್ಳಾಗುತ್ತಿದ್ದಾಳೆ. ಎರಡು ದಿನದ ರಜೆ ಎನ್ನುವ ಸಂಗತಿಯೇ ಅವಳ ದಿನಚರಿಯನ್ನು ಸಹ್ಯವಾಗಿಸುತ್ತದೆ. ಸಮಾಧಾನ ಕೊಡುತ್ತದೆ. ಹಾಗಂತ ಸಂಸ್ಥೆಗಳು ಕೂಡ ನಷ್ಟ ಅನುಭವಿಸಬಾರದು.

ಇದಕ್ಕೊಂದು ನಿಯಮಬದ್ಧ ಕಾನೂನು ಸರ್ಕಾರದ ಮೂಲಕವೇ ರಚನೆಯಾದರೆ,ಉದ್ಯೋಗ ಆರಂಭಕ್ಕೆ ಇದರ ಕುರಿತು ಒಪ್ಪಂದಗಳು ಏರ್ಪಟ್ಟರೆ ಮುಟ್ಟು ರಜ ಹೆಚ್ಚು ಸಲೀಸಾಗಬಹುದು. ಇದು ಹೆಣ್ಣಿಗೆ ಸಮಾಜ ಕೊಡುವ ಗೌರವವೂ ಹೌದು. ರಜೆಯ ನಂತರದ ಅವಳ ಕೆಲಸ ಹೆಚ್ಚು ಫಲದಾಯಕವಾಗಿರುವುದಂತೂ ಖಂಡಿತ.

Exit mobile version