Site icon Vistara News

Motivation | ಸಿರಿಶಾ ಜೆಟ್ಟಿ ಎಂಬ ಮಹಿಳಾ ಎಲೆಕ್ಟ್ರಿಶಿಯನ್‌ ಸ್ಫೂರ್ತಿಕತೆ!

motivational woman

ಎಲೆಕ್ಟ್ರೀಶಿಯನ್‌ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಪುರುಷರದ್ದೇ. ಕಾರಣ ಗೊತ್ತೇ ಇದೆ. ಇದೂ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರು ವಿರಳಾತಿವಿರಳ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರೂ ಇಂದಿಗೂ ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ. ಕೆಲವೊಂದು ವೃತ್ತಿಗಳು ಕೇವಲ ಪುರುಷರಿಗಷ್ಟೇ ಸೀಮಿತ ಎಂಬಷ್ಟು ಪುರುಷರೇ ಇದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ರೈಲು ಚಾಲನೆ, ಆಟೋ, ಟ್ಯಾಕ್ಸಿ ಚಾಲನೆ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಕ್ಷೇತ್ರ ಸೇರಿದಂತೆ ಹಲವು ವಿಭಾಗಗಳಲ್ಲಿ ಮಹಿಳೆಯರೂ ನಿಧಾನಕ್ಕೆ ಎಂಟ್ರಿ ಕೊಡುತ್ತಿದ್ದರೂ ಪುರುಷರೇ ಹೆಚ್ಚು.

ಹೀಗಿರುವಾಗ ಸಿರಿಶಾ ಜೆಟ್ಟಿ ಎಂಬ ೨೦ ಹರೆಯದ ಯುವತಿ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಯಾಕೆಂದರೆ ಈಕೆ ಆಯ್ಕೆ ಮಾಡಿಕೊಂಡಿದ್ದು, ಕೇವಲ ಪುರುಷರೇ ಹೆಚ್ಚಾಗಿರುವ ಎಲೆಕ್ಟ್ರಿಶಿಯನ್‌ ವೃತ್ತಿಯನ್ನು. ಬಿ ಟೆಕ್‌ ಓದಬೇಕೆಂಬ ಆಸೆ ಹೊಂದಿದ್ದ ಸಿರಿಶಾ ಎಲೆಕ್ಟ್ರಿಶಿಯನ್‌ ಆಗಿದ್ದರ ಹಿಂದೊಂದು ಕತೆಯಿದೆ.

ಸಿರಿಶಾ ಜೆಟ್ಟಿ ಆಟೋ ಚಾಲಕನ ಮಗಳು. ಈಕೆಯ ಕುಟುಂಬ ೨೦೧೬ರ ಆಸುಪಾಸಿನಲ್ಲಿ ತೀವ್ರ ಹಣಕಾಸಿನ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ತನ್ನ ತಂದೆಯ ಹಣ ಮನೆ ನಡೆಸಲು ಸಾಕಾಗುತ್ತಿಲ್ಲವೆಂಬ ಸತ್ಯ ಸಿರಿಶಾ ಅರಿವಿಗೆ ಬಂದಾಗ, ತನ್ನ ಕೈಲಾದಷ್ಟು ಸಹಾಯ ಮಾಡುವುದು ತನ್ನ ಕರ್ತವ್ಯ ಎಂದು ಭಾವಿಸುವ ಆಕೆ ಏನು ಮಾಡುವುದು ಎಂದು ಯೋಚಿಸುತ್ತಾರೆ. ಮನೆ ನಡೆಯಲು, ಎಲ್ಲರೂ ನೆಮ್ಮದಿಯಿಂದ ಉಣ್ಣಲು ತಾನು ಏನಾದರೊಂದು ಕೆಲಸ ಮಾಡಲೇಬೇಕೆಂದು ಕೊಳ್ಳುವ ಸಿರಿಶಾ, ಯಾವುದಾದರೂ ವೃತ್ತಿ ಕೌಶಲ್ಯವನ್ನು ಕಲಿತುಕೊಂಡರೆ ತನಗೊಂದು ಕೆಲಸ ಹುಡುಕಲು ಸುಲಭವಾಗುತ್ತದೆ, ಇದಷ್ಟೇ ತನ್ನ ಸಮಸ್ಯೆಗೆ ಪರಿಹಾರ ನೀಡಬಹುದು ಎಂದು ಅಂದುಕೊಳ್ಳುತ್ತಾರೆ. ಈಕೆ ತನ್ನ ಮನೆಯಿಂದ ೭೦ ಕಿಮೀ ದೂರದಲ್ಲಿರುವ ಟಾಟಾ ಸ್ಟ್ರೈವ್‌ ನಡೆಸುತ್ತಿದ್ದ ಎಲೆಕ್ಟ್ರಿ಼ಶಿಯನ್‌ ತರಬೇತಿಗೆ ಅರ್ಜಿ ಹಾಕುತ್ತಾರೆ. ಕೊನೆಗೂ ಅಲ್ಲಿಂದ ಎಲೆಕ್ಟ್ರಿಶಿಯನ್‌ ತರಬೇತಿ ಪೂರ್ಣಗೊಳಿಸಿ ತಿಂಗಳಿಗೆ ೧೨,೦೦೦ ರೂಪಾಯಿ ಸಂಬಳವಿರುವ, ಪ್ರತಿ಼ಷ್ಟಿತ ತಾಜ್‌ ಹೊಟೇನ್‌ನಲ್ಲಿ ಸಹಾಯಕ ಎಲೆಕ್ಟ್ರಿಶಿಯನ್‌ ಆಗಿ ಆಯ್ಕೆಯಾಗುತ್ತಾರೆ. ಇದರಿಂದಾಗಿ ಆಕೆಯ ಕುಟುಂಬ ಎದುರಿಸುತ್ತಿದ್ದ ಹಣಕಾಸಿನ ಸಮಸ್ಯೆಗೆ ಆಕೆಯೂ ಹೆಗಲು ಕೊಡುವುದು ಸಾಧ್ಯವಾಗುತ್ತದೆ. ತನ್ನ ಈ ಎಲೆಕ್ಟ್ರಿಶಿಯನ್‌ ಕೆಲಸದ ಜೊತೆಗೇ ದೂರ ಶಿಕ್ಷಣದ ಮೂಲಕ ಬಿಟೆಕ್‌ ಕೂಡಾ ಮಾಡುತ್ತಿದ್ದಾರಂತೆ. ಹೈದರಾಬಾದ್‌ ಸಮೀಪದಲ್ಲಿ ಬಾಡಿಗೆ ಮನೆಯೊಂದನ್ನೂ ಹಿಡಿದಿದ್ದಾರೆ.

ಟಾಟಾ ಸ್ಟ್ರೈವ್‌ನಲ್ಲಿ ಕೇವಲ ಎಲೆಕ್ಟ್ರೀಶಿಯನ್‌ ಕೋರ್ಸ್‌ ಮಾತ್ರವೇ ಇರಲಿಲ್ಲ. ಮಹಿಳಾ ಅಭ್ಯರ್ಥಗಳು ಹೆಚ್ಚಿರುವ ಬ್ಯೂಟಿಶಿಯನ್‌ ಕೋರ್ಸ್‌ ಸೇರಿದಂತೆ ಬೇರೆ ವೃತ್ತಿ ಕೌಶಲ ತರಬೇತೀಗಳೂ ಇದ್ದವು. ಆದರೂ ಇದನ್ನೇ ಸಿರಿಶಾ ಇದನ್ನೇ ಆಯ್ಕೆ ಮಾಡಲು ಕಾರಣವಿದೆ. ಆಕೆಗೆ ಫ್ರಿಡ್ಜು, ವಾಷಿಂಗ್‌ ಮೆಶಿನ್‌, ಬಲ್ಬು, ಲೈಟು, ಹೀಗೆಲ್ಲ ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿ ಆಸಕ್ತಿ ಕೆರಳಿಸುತ್ತಿದ್ದವಂತೆ. ಹೀಗಾಗಿ, ಇದನ್ನೇ ಕಲಿತರೆ ಹೇಗೆ ಎಂದು ಇದಕ್ಕೆ ಸೇರಿಕೊಂಡೆ ಎನ್ನುತ್ತಾರೆ.

ಇದನ್ನೂ ಓದಿ | Viral Video | ಏರ್​ಪೋರ್ಟ್​​ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ; ಮತ್ತೆ ಉಸಿರುಕೊಟ್ಟು ಅಪಾಯದಿಂದ ಪಾರು ಮಾಡಿದ ಸೈನಿಕ

ಈ ಕೋರ್ಸ್‌ ಕಲಿಕೆಯ ಸಂದರ್ಭ ಈಕೆ ಮಾತ್ರವೇ ಹೆಣ್ಣುಮಗಳಲ್ಲ. ಬೇರೆ ಒಂದಿಬ್ಬರು ಹೆಣ್ಣು ಮಕ್ಕಳೂ ಈ ಕೋರ್ಸಿಗೆ ದಾಖಲಾಗಿದ್ದರು. ಹಾಗಾಗಿ ಇದು ಕೇವಲ ಗಂಡು ಮಕ್ಕಳಷ್ಟೇ ಕಲಿಯುವ ವಿದ್ಯೆ ಎಂದು ನನಗೆ ಅನಿಸಲಿಲ್ಲ ಎಂದಾಕೆ ಹೇಳುತ್ತಾರೆ.

ಆದರೆ, ಈಗ ಆಕೆ ಕೆಲಸ ಮಾಡುವ ಸಂಸ್ಥೆಯಲ್ಲಿ ಆಕೆಯೊಬ್ಬರೇ ಮಹಿಳಾ ಉದ್ಯೋಗಿ. ಅಷ್ಟೂ ಜನ ಪುರುಷರ ಮಧ್ಯೆ, ಮಹಿಳೆಯೊಬ್ಬಳೇ ಕೆಲಸ ಮಾಡುವುದು ಕಷ್ಟವಾಗುವುದಿಲ್ಲವೇ ಎಂದರೆ, ಆಕೆ, ಖಂಡಿತಾ ಇಲ್ಲ. ಅಷ್ಟಕ್ಕೂ ಇಲ್ಲಿ ಯಾರೂ ತನ್ನನ್ನು ಮಹಿಳೆ ಎಂದು ನೋಡುತ್ತಿಲ್ಲ. ಸಹೋದ್ಯೋಗಿಯಂತೆ ನೋಡುತ್ತಾರೆ. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಸಿರಿಶಾ.

ಆರಂಭದಲ್ಲಿ ಮನೆಯಲ್ಲಿ ಈ ಬಗ್ಗೆ ಕೊಂಚ ಹಿಂಜರಿಕೆ ಇತ್ತು, ನಿಜ ಎಂದು ಪರಿಸ್ಥಿತಿ ಒಪ್ಪಿಕೊಳ್ಳುವ ಸಿರಿಶಾ, ತನಗೆ ಇದೇ ಆಸಕ್ತಿ ಎಂದು ಒತ್ತಿ ಹೇಳಿದ ಮೇಲೆ ಮನೆಯಲ್ಲಿ ಅನುಮತಿ ನೀಡಿದರು. ನನ್ನ ಸಹೋದರನೂ ಎಲೆಕ್ಟ್ರಿಶಿಯನ್‌. ನಾನೂ ಕೂಡಾ. ಈಗ ಆ ಬಗ್ಗೆ ಯಾವ ಹಿಂಜರಿಕೆಯೂ ಇಲ್ಲ. ಪ್ರಪಂಚ ನಾವು ಏನು ಮಾಡಬೇಕೆಂದು ನಿರ್ಧರಿಸಲು ಬಿಡಬಾರದು. ನಾವು ನಮ್ಮ ಆಕ್ತಿಗೆ ಅನುಗುಣವಾಗಿ ನಮ್ಮ ದಾರಿಯನ್ನು ನಿರ್ಧರಿಸಬೇಕು. ಆಗಷ್ಟೇ ಯಶಸ್ಸು ಕಾಣಬಹುದು ಎಂದು ಕಿವಿಮಾತು ಹೇಳುತ್ತಾರೆ.

ಇದನ್ನೂ ಓದಿ | Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ

Exit mobile version