Site icon Vistara News

Women’s Day 2023 : ಎಲ್ಲರಿಗೂ ಮುಟ್ಟಿನ ರಜೆಯ ಅಗತ್ಯ ಇಲ್ಲ

Not everyone needs menstrual leave

#image_title

ಅಂಜನಾ, ಗೃಹಿಣಿ

ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ಬೇಕಾ ಬೇಡ್ವಾ ಅನ್ನೋದಕ್ಕಿಂತ ಯಾರಿಗೆ ಅಂತ ಮೊದಲು ಕೇಳ್ಬೇಕಾಗುತ್ತೆ. ಯಾಕಂದ್ರೆ ರಜೆ ಅನ್ನೊ ಸೌಲಭ್ಯ ಎಲ್ರಿಗೂ ಎಲ್ಲಿ ಸಿಗುತ್ತೆ? ಯಾವುದೋ ಉನ್ನತ ಕಂಪನಿಯಲ್ಲಿರೋರು, ಸರ್ಕಾರಿ ನೌಕ್ರಿಲಿರೋರು ರಜೆ ಬೇಕೂಂತ ಹೋರಾಟ ಮಾಡಬಹುದು. ಹೋರಾಟದಲ್ಲಿ ಯಶಸ್ವಿಯಾಗಿ ರಜೆ ಪಡ್ಕೋತಾರೆ ಅಂತ್ಲೂ ಇಟ್ಕೊಳ್ಳಿ, ನನ್ನ ಪ್ರಶ್ನೆ ಏನಂದ್ರೆ ಅಸಂಖ್ಯಾತ ಕೂಲಿ ಮಾಡೋ ಮಹಿಳೆಯರು, ಬಟ್ಟೆ ಅಂಗಡಿಗಳಲ್ಲಿ ಕೆಲ್ಸ ಮಾಡೋ ಹೆಣ್ಮಕ್ಳು, ಮನೆ ಕೆಲ್ಸ ಮಾಡೋ ಹೆಣ್ಮಕ್ಳಿಗೆ ಈ ಸೌಲಭ್ಯ ಸಿಗುತ್ತಾ? ಹೊರಗೆ ದುಡಿಯೋರ ಕಥೆ ಬಿಡಿ ಮನೇಲಿ ಕೆಲ್ಸದವ್ರಿಗಿಂತ ಕಡೆಯಾಗಿ ಶ್ರಮಿಸೋ ಗೃಹಿಣಿಯರು ಇವ್ರಿಗೆಲ್ಲ ಯಾರ್ ಸ್ವಾಮಿ ಮುಟ್ಟಿನ ರಜೆ ಕೊಡೋರು?

ಸಂಬಳ ಬಿಟ್ರೆ ಬೇರೆ ಯಾವ ಸವಲತ್ತೂ ಇಲ್ಲದ ಮಹಿಳೆಯರು ಮುಟ್ಟಿನ ರಜೆ ಬೇಕು ಅಂದ್ರೆ ‘ಪ್ರತಿ ತಿಂಗ್ಳು ಮುಟ್ಟಾಗೋವ್ರಿಗೆ ರಜೆ ಕೊಡೋಕಾಗಲ್ಲ’ ಅಂತಾರೆ ಅಥವಾ ‘ಶಾಶ್ವತ ರಜೆ’ ಕೊಟ್ಟೂ ಕಳಿಸಬಹುದು. ಇನ್ನು ನಾವು ಗೃಹಿಣಿಯರು ಮುಟ್ಟಿನ ರಜೆಯನ್ನು ನಾವೇ ನಮ್ಮ ಕೈಯಾರೆ ಹಾಳ್ಮಾಡ್ಕೊಂಡಿದ್ದೀವಿ. ಹಿಂದೆ ಮುಟ್ಟಿನ ದಿನಗಳಲ್ಲಿ ‘ಮೈಲಿಗೆ’ ಅಂತ ಮೂಲೇಲಿ ಕೂರ್ಸೋರು, ಆಗ ನಾವು ‘ಮೂಢನಂಬಿಕೆ ‘ ಅಂತ ತಳ್ಳಿ ಹಾಕಿ (ಎಷ್ಟೋ ಜನ ಹೋರಾಟ ಮಾಡಿ) ಆ ಪದ್ಧತಿಯನ್ನು ನಿಲ್ಲಿಸಿದ್ರು. ಈಗ ಆ ದಿನಗಳಲ್ಲಿ ಆಗೋ ಹಿಂಸೆ ನೋವುಗಳನ್ನು ಮೌನವಾಗಿ ಸಹಿಸೋ ಅನಿವಾರ್ಯಕ್ಕೊಳಗಾಗಿದ್ದೀವಿ. ಮೊನ್ನೆ ಯಾರದೋ ಮನೆಗ್ಹೋಗಿದ್ದೆ, ಆ ಮನೆ ಸೊಸೆ ತೀರಾ ಸಂಕಟ ಪಟ್ಕೊಂಡು ಅಡುಗೆ ಮಾಡ್ತಾ ಇದ್ರು, ‘ಯಾಕಿಷ್ಟು ಒದ್ದಾಡ್ತಾ ಇದ್ದೀರಾ ‘ ಅಂದಾಗ ಆಕೆ ಕೊಟ್ಟ ಉತ್ತರ ಕೇಳಿ ತುಂಬಾ ನೋವಾಯ್ತು. ಅವತ್ತು ಆಕೆಯ ಮುಟ್ಟಿನ ದಿನವಾದ್ರಿಂದ ಅಡುಗೆ ಮಾಡೋಕೆ ನಿರಾಕರಿಸಿದ್ದಾರೆ, ಅಷ್ಟಕ್ಕೇ ಮನೇಲಿ ರಂಪ. ‘ ಹೆಂಗ್ಸು ಅಂದ್ಮೇಲೆ ಮುಟ್ಟು ಇದ್ದಿದ್ದೆ, ಮುಟ್ಟು ಅಂದ್ಮೇಲೆ ನೋವು ಇದ್ದಿದ್ದೆ ಅಷ್ಟಕ್ಕೇ ಹಿಂಗಾಡ್ತೀಯ ಎದ್ಹೋಗಿ ಅಡ್ಗೆ ಮಾಡು’ ಅನ್ನೊ ಅಪ್ಪಣೆ ಮಾಡಿದ್ದಾರೆ. ಇಂಥಾವ್ರಿಗೆ ಹೆಂಗ್ ಮುಟ್ಟಿನ ರಜೆ ಕೊಡಿಸ್ತೀರಾ? ಇದೇನಿದ್ರೂ ಸರ್ಕಾರಿ ನೌಕರಿ ಅಥವಾ ಇನ್ನಿತರ ಅನುಕೂಲ, ಸೌಲಭ್ಯ ಇರೋವ್ರಿಗಷ್ಟೇ ಸೀಮಿತವಾಗತ್ತೆ. ಈಗಾಗಲೇ ನಮ್ಮಲ್ಲಿ ಆ ಈ ಜಯಂತಿಗಳು, ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು, ಈಎಲ್ಲು, ಸೀಯೆಲ್ಲು, ಆರ್ಹೆಚ್ಚು ಸಿಕ್ ಲೀವು ಹಿಂಗೆ ಬೇಕಾದಷ್ಟು ರಜೆಗಳ ಸಾಲುಸಾಲೇ ಇದೆ. ಇದರ ಮಧ್ಯೆ ಮುಟ್ಟಿನ ರಜೆಯ ಅಗತ್ಯವಿಲ್ಲ ಅನ್ನೋದು ನನ್ನ ವೈಯುಕ್ತಿಕ ಅನಿಸಿಕೆ.

ಇದನ್ನೂ ಓದಿ : Women’s Day Offer: ಮಹಿಳಾ ದಿನದ ನಿಮಿತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಕೊಡುಗೆ!

ಇಷ್ಟಕ್ಕೂ ಮುಟ್ಟಿನ ದಿನಗಳ ಕಷ್ಟ ಎಲ್ರಿಗೂ ಒಂದೇ ರೀತಿ ಇರಲ್ಲಾ. ಎಲ್ರಿಗೂ ಕಷ್ಟದ ದಿನಗಳಾಗಿರೊಲ್ಲ. ಕೆಲವ್ರಿಗೆ ತುಂಬಾ ಕಷ್ಟವಾಗುತ್ತೆ, ಕೆಲವ್ರಿಗೆ ತಕ್ಕ ಮಟ್ಟಿನ ಸಮಸ್ಯೆ ಇರುತ್ತೆ, ಇನ್ನು ಕೆಲವ್ರಿಗೆ ಸಹಿಸ್ಕೊಂಡು ಅಂದಿನ ದಿನಚರಿ ನಿಭಾಯಿಸ್ಕೊಂಡು ಹೋಗಬಹುದಷ್ಟಾಗಿರುತ್ತದೆ. ಮತ್ತೂ ಕೆಲವರಿಗೆ ಏನೂ ತೊಂದರೆ ಇಲ್ಲದೆ ಎಂದಿನ ದಿನದಂತೆ ಆ ದಿನಗಳಲ್ಲೂ ಸಹಜವಾಗಿರ್ತಾರೆ. ಹೀಗಿರೋವಾಗ ಎಲ್ರಿಗೂ ಮುಟ್ಟಿನ ರಜೆ ಅಗತ್ಯವಿರಲ್ಲ. ಒಂದು ಹೆಣ್ಣು ತಾಯಿಯಾಗಲು ಅರ್ಹತೆ ಪಡೆಯೋ ಮುಟ್ಟು ಅದೊಂದು ನೈಸರ್ಗಿಕ ಕ್ರಿಯೆ ಅಷ್ಟೆ. ಆ ದಿನಗಳಲ್ಲಿ ತುಂಬಾ ಕಷ್ಟ ಅನುಭವಿಸೋರು ತಮಗಿರುವ ರಜೆ ಸೌಲಭ್ಯವನ್ನ ಉಪಯೋಗಿಸ್ಕೊಂಡ್ರೆ ಆಯ್ತು. ಇನ್ನು ಕೆಲವು ಕಡೆ ಮೇಲಾಧಿಕಾರಿಗಳು ಆ ದಿನಗಳಲ್ಲಿ ಮಾನವೀಯತೆಯಿಂದ ರಜೆ ಕೊಡಬೇಕು.

ಇದೆಲ್ಲಕ್ಕಿಂತ ನಂಗೆ ಮುಖ್ಯ ಅನಿಸಿದ್ದು ಅಕಸ್ಮಾತ್ ಮುಟ್ಟಿನ ರಜೆ ಕೊಟ್ರು ಅಂತ್ಲೇ ಇಟ್ಕೊಳ್ಳೋಣ, ನಮ್ಮ ಜನ ಆ ರಜೆಯನ್ನು ಪ್ರಾಮಾಣಿಕವಾಗಿ ಉಪಯೋಗಿಸಿಕೊಳ್ತಾರಾ?

Exit mobile version