ಅರ್ಪಿತಾ ಕಿಕ್ಕೇರಿ ಮೆಟ್ರೊ ರೈಲು ಚಾಲಕಿ
ಮುಟ್ಟಿನ ಅವಧಿಯಲ್ಲಿ ಬಿಸಿನೀರಿನ ಸ್ನಾನ ಮಾಡಿದರೆ, ರಕ್ತಸ್ರಾವ ಹೆಚ್ಚಾಗುತ್ತದೆ. ಹೀಗಾಗಿ ತಣ್ಣೀರಿನಲ್ಲೇ ಸ್ನಾನ ಮಾಡಬೇಕು ಎಂಬ ನಂಬಿಕೆ ಇಸ್ರೇಲ್‌ನಲ್ಲಿದೆ. ಇಸ್ರೇಲ್‌ನ ಗ್ರಾಮೀಣ ಪ್ರದೇಶಗಳಲ್ಲಿ ಇದು ಈಗಲೂ ಆಚರಣೆಯಲ್ಲಿದೆ. ಋತುಸ್ರಾವದ ದಿನಗಳಲ್ಲಿ ಸಸಿಗಳು ಮತ್ತು ಹೂವನ್ನು ಮಹಿಳೆಯರು ಸ್ಪರ್ಶಿಸಿದರೆ, ಅವು ಬಾಡಿಹೋಗುತ್ತವೆ ಎಂಬ ನಂಬಿಕೆ ರೊಮೇನಿಯದಲ್ಲಿ ಇದೆ.
ಮೊದಲ ಮುಟ್ಟಿನ ರಕ್ತದಿಂದ ಮುಖ ತೊಳೆದರೆ, ಮುಖದ ಕಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಫಿಲಿಪ್ಪೀನ್ಸ್‌ನಲ್ಲಿದೆ. ಇದನ್ನು ಪಾಲಿಸುವವರೂ ಇದ್ದಾರೆ. ನ್ಯಾಪ್ಕಿನ್ ಅಥವಾ ಮುಟ್ಟಿನ ಬಟ್ಟೆಯನ್ನು ಬಿಸಾಡುವ ಮುನ್ನ ಶುಚಿ ಮಾಡಬೇಕು ಇಲ್ಲದಿದ್ದಲ್ಲಿ ದೆವ್ವಗಳ ಕಾಟ ಆರಂಭವಾಗುತ್ತದೆ ಎಂಬ ನಂಬಿಕೆ ಮಲೇಷ್ಯಾದಲ್ಲಿ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮುಟ್ಟಾಗಿರುವ ಮಹಿಳೆಯರು ಮಕ್ಕಳನ್ನು ಆಟವಾಡಿಸಿದರೆ, ಮುಟ್ಟಿದರೆ, ಮಕ್ಕಳಿಗೆ ಕಾಯಿಲೆ ಬರುತ್ತದೆ ಎಂಬ ನಂಬಿಕೆ ಬೊಲಿವಿಯದಲ್ಲಿ ಇದೆ.
ಹಿಂದೆ ಅಷ್ಟೇ ಅಲ್ಲದೆ ಈಗಲೂ ಹಲವು ಕಡೆ ಹೆಣ್ಣುಮಕ್ಕಳು ಮುಟ್ಟಾದ ಮೂರು ದಿನಗಳೂ ಪ್ರತ್ಯೇಕ ತಟ್ಟೆ-ಲೋಟ-ಚಾಪೆ ದಿಂಬುಗಳೊಂದಿಗೆ ಒಂದು ಕೋಣೆ ಸೇರಬೇಕಿತ್ತು. ಅವರಿಗೆ ಅನ್ನಾಹಾರ ಅಲ್ಲಿಗೇ ಸರಬರಾಜಾಗುತ್ತಿತ್ತು. ಮನೆಯ ಸದಸ್ಯರೊಂದಿಗೆ ಬೆರೆಯುವಂತಿಲ್ಲ. ಮಕ್ಕಳು ಅಪ್ಪಿ ತಪ್ಪಿ ಮುಟ್ಟಿಸಿಕೊಂಡರೆ ಅವರ ಬಟ್ಟೆಗಳನ್ನು ಕಳಚಿ ನೆನೆಸಬೇಕಿತ್ತು. ತೀರಾ ಹಾಲುಕುಡಿಯುವ ಮುಕ್ಕಳಾದರೆ ಬಟ್ಟೆ ಇಲ್ಲದೆಯೇ ಅವರನ್ನೂ ಇವರನ್ನೂ ಮುಟ್ಟಿಸಿಕೊಂಡು ಇರಬಹುದಿತ್ತು. ಈಗ, ಕಾಲ ಬದಲಾದಂತೆ, ದುಡಿಯುವ/ಕಲಿಯುವ ಹೆಣ್ಣುಮಕ್ಕಳು ಮೂರು ದಿನ ರಜೆಹಾಕಿ ಕೂರಲು ಸಾಧ್ಯವಿಲ್ಲದ್ದರಿಂದ ಪದ್ಧತಿಯಲ್ಲಿ ಸ್ವಲ್ಪ ಮಾರ್ಪಾಡು ಆಗಿದೆ; ಮನೆಯ ಹಜಾರ, ರೂಮು, ಡೈನಿಂಗ್ ಹಾಲ್‌ನವರೆಗೆ ಪ್ರವೇಶ ದೊರೆತಿದೆ. ಅಡುಗೆ ಕೋಣೆ ಮತ್ತು ದೇವರ ಕೋಣೆಗೆ ಎಂದಿನಂತೆ ನಿಷಿದ್ಧ. ಮನೆಯಲ್ಲಿ ಸಾಲಿಗ್ರಾಮ ಇಟ್ಟು ಪೂಜಿಸುವ ಕುಟುಂಬಗಳಲ್ಲಿ ಮಾತ್ರ ಈಗಲೂ ನಿಷೇಧಗಳ ಪಾಲನೆಯಲ್ಲಿ ಹೆಚ್ಚು ಕಟ್ಟುನಿಟ್ಟು ಇದೆ.
ಕಾಡುಗೊಲ್ಲ ಬುಡಕಟ್ಟು ಸಮುದಾಯದಲ್ಲಿ, ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಮಾತ್ರವಲ್ಲ ಊರಿನಿಂದಲೇ ಆಚೆಗೆ ಅಂದರೆ ಹೊಲದಲ್ಲೋ ಮರದ ಕೆಳಗೋ ಪ್ರತ್ಯೇಕ ಇರಿಸಲಾಗುತ್ತದೆ. ತುಸು ಹೆಚ್ಚೇ ಕಾಳಜಿ ಬೇಕಿರುವ, ಬೆಚ್ಚಗೆ ಇರಬೇಕಾದ, ಪೌಷ್ಟಿಕ ಆಹಾರ ದೊರೆಯಬೇಕಾದ ಹೊತ್ತಿನಲ್ಲಿ ಹೆಣ್ಣುಮಕ್ಕಳು ಅಭದ್ರತೆ, ಅನಾದರದಲ್ಲಿ ಕೊರಗುವಂತಾಗುತ್ತದೆ. ವಿದ್ಯಾವಂತ ಯುವಜನರಿಂದಾಗಿ ಈ ಬಗ್ಗೆ ಅನೇಕ ಚರ್ಚೆಗಳು, ಪ್ರತಿರೋಧಗಳು ಸಮುದಾಯದ ಒಳಗಿನಿಂದಲೇ ಇತ್ತೀಚೆಗೆ ವ್ಯಕ್ತವಾಗುತ್ತಿವೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಹಲವು ಯೋಜನೆಗಳು, ಜಾಗೃತಿ ಕಾರ್ಯಕ್ರಮಗಳು ಸುಧಾರಣೆಯ ದಿಸೆಯಲ್ಲಿ ಕೆಲಸ ಮಾಡುತ್ತಿವೆ.
ಅನೇಕ ಕಡೆ ಗ್ರಾಮಹಬ್ಬ ನಡೆಯುವ ಹೊತ್ತಿನಲ್ಲಿ ದೇವರಿಗೆ ಬಲಿ ನೀಡಿದ ಮಾಂಸದೂಟದ ಸಂಭ್ರಮವಿರುತ್ತದೆ. ಊರಿನಲ್ಲಿ ಏನಾದರೂ ಸೂತಕವಾದರೆ ಹಬ್ಬ ಮುಂದೂಡಬೇಕಾಗುತ್ತದೆ. ಹಬ್ಬ ಮುಂದೂಡುವ ಅನಿವಾರ್ಯವನ್ನು ತಪ್ಪಿಸುವುದಕ್ಕಾಗಿ ಮುಟ್ಟಿನ ದಿನ ಹತ್ತಿರವಿರುವ ಹೆಣ್ಣುಮಕ್ಕಳನ್ನು ಬೇರೆ ಊರುಗಳಿಗೆ ಕಳಿಸಿಬಿಡಲಾಗುತ್ತದೆ.
ಹೊರಗೆ ಕೂರಿಸುವ ಕ್ರಿಯೆಯನ್ನು ಅವರ ದೇಹಕ್ಕೆ ನೀಡುವ ವಿಶ್ರಾಂತಿ ಎಂದೂ ಅದರಿಂದ ಅವರಿಗೆ ಒಳಿತೇ ಆಗುವುದು ಎಂದೂ ಹಲವರು ಸಮರ್ಥನೆಗಿಳಿಯುತ್ತಾರೆ. ಆದರೆ ಅಸೃಶ್ಯತೆ ಆಚರಣೆ ಯಾವ ನಾಗರಿಕ ಸಮುದಾಯಕ್ಕೂ ಶೋಭೆ ತರುವ ವಿಚಾರವಲ್ಲ. ತಮಗೆ ವಿಶ್ರಾಂತಿ ನೀಡಿದ್ದಾರೆ ಎಂಬುದರ ಬದಲು, ತಮ್ಮನ್ನು ಬೇರೆ ಇರಿಸಿದ್ದಾರೆ ಎಂಬುದು ಹೆಣ್ಣು ಮಕ್ಕಳನ್ನು ಖಿನ್ನತೆಗೆ ದೂಡುತ್ತದೆ. ಮಹಿಳೆಯರ ಮುಟ್ಟಿನ ದಿನಗಳ ಕಾಳಜಿ ತೋರುವ ಮಂದಿ ತಮ್ಮ ತಮ್ಮ ಕಚೇರಿಗಳಲ್ಲಿ ಮುಟ್ಟಿನ ರಜೆಯ ಜಾರಿಗೆ ಒತ್ತಾಯಿಸಲಿ. ಮನೆಯಲ್ಲಿ ಕೆಲಸವನ್ನು ಹಂಚಿಕೊಂಡು ಕಷ್ಟ-ಸುಖಕ್ಕೆ ಕಿವಿಗೊಡಲಿ. ಮುಟ್ಟಿನ ದಿನದ ರಜೆ ಸೂಕ್ತ.