Site icon Vistara News

Women’s Day 2023 : ಮುಟ್ಟಿನ ರಜೆ ಇರಬೇಕು, ಬಳಸುವ ಆಯ್ಕೆ ಅವಳದಾಗಬೇಕು

There should be menstrual leave, the choice to use should be hers

#image_title

ಆಶಾ ರಘು, ಕಾದಂಬರಿಗಾರ್ತಿ

ಹಿಂದೆಲ್ಲಾ ಕೆಲವು ವರ್ಗಗಳಲ್ಲಿ ಹೆಣ್ಣು ಮುಟ್ಟಾದರೆ ಅವಳನ್ನು ಯಾರೂ ಮುಟ್ಟಿಸಿಕೊಳ್ಳದ ಹಾಗೆ ಮನೆಯ ಒಂದು ಮೂಲೆಯಲ್ಲಿ ಅವಳಿಗೆ ತಟ್ಟೆ, ಲೋಟ, ಚಾಪೆ, ಹೊದಿಕೆಗಳನ್ನು ಕೊಟ್ಟು ಮೂರು ದಿನಗಳ ಕಾಲ ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ಮುಟ್ಟಿಸಿಕೊಳ್ಳಬಾರದ ಹಾಗೆ ಅವಳಿಗೆ ಒದಗುವ ಈ ಪ್ರಕೃತಿ ಸಹಜ ದೇಹದ ಕ್ರಿಯೆಯನ್ನು ಮುಟ್ಟೆಂದು ಈ ಕಾರಣಕ್ಕಾಗಿಯೇ ಕರೆಯಲಾಗಿದೆ. ಮುಟ್ಟೆಂದರೆ ಅಶುದ್ಧವೆಂದೂ, ಮತ್ತು ಅಂತಹ ಸಂದರ್ಭದಲ್ಲಿ ಹೆಣ್ಣನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುವುದೆಂದೂ ಪರಿಗಣಿಸುವ ಈ ಅನಿಷ್ಟ ಪದ್ಧತಿಯು ಹೇಯವಿನಿಸಿದರೂ ಇದರಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ.

ಅದೇನೆಂದರೆ ಮುಟ್ಟಿನ ಅವಧಿಯಲ್ಲಿ ಹೆಣ್ಣು ದೈಹಿಕವಾಗಿ ಬಹಳ ನೋವು, ಇರಸುಮುರಸುಗಳನ್ನು ಅನುಭವಿಸುತ್ತಾಳೆ ಎಂದೂ, ಹೀಗೆ ಅವಳನ್ನು ಪ್ರತ್ಯೇಕವಾಗಿ ಇಡಲಾಗುವ ನೆಪದಿಂದ ಅವಳಿಗೆ ಆ ಅವಧಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಎಂದಿನ ಕೆಲಸಕಾರ್ಯಗಳಿಂದ ಬಿಡುವು ದೊರೆತು ವಿಶ್ರಾಂತಿ ಸಿಗುತ್ತದೆಯೆಂಬುದು! ಈಗಲೂ ಕೆಲವು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮುಟ್ಟಿನ ಅವಧಿಯಲ್ಲಿ ಮಹಿಳೆಯರನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಅವಳಿಗೆ ಈ ಅವಧಿಯಲ್ಲಿ  ವಿಶ್ರಾಂತಿಯನ್ನು ಈ ಮೈಲಿಗೆಯೆಂಬ ಮೌಢ್ಯದ ಕಾರಣಕ್ಕಾಗಿಯಲ್ಲದೆ, ಅವಳಿಗೆ ಆಗುವ ದೈಹಿಕ ನೋವು ಹಾಗೂ ಮಾನಸಿಕ ಅಸಮತೋಲನಕ್ಕೆ ಸ್ಪಂದಿಸಿ ಕಾಳಜಿಯಿಂದ ಅವಳಿಗೆ ವಿಶ್ರಾಂತಿಯನ್ನು ಕೊಟ್ಟರೆ ಅದು ಸ್ವಾಗತಾರ್ಹವೆನಿಸಿಕೊಳ್ಳುತ್ತದೆ.

ಮಹಿಳೆ ಮನೆಯ ಒಳಗೂ, ಹೊರಗೂ ದುಡಿಯುತ್ತಾಳೆ. ಅವಳಿಗೆ ದೈಹಿಕ ಹಾಗೂ ಮಾನಸಿಕ ಏರುಪೇರಾಗುವ ಈ ಮುಟ್ಟಿನ ದಿನಗಳಲ್ಲಿ ರಜೆ ಸಿಕ್ಕರೆ ಒಳ್ಳೆಯದೇ. ಆದರೆ ಎಲ್ಲಾ ಮಹಿಳೆಯರಿಗೂ ಈ ಅವಧಿಯಲ್ಲಿ ದೈಹಿಕವಾಗಿಯಾಗಲೀ ಅಥವಾ ಮಾನಸಿಕವಾಗಿಯಾಗಲೀ ತಮ್ಮ ನಿತ್ಯದ ಕೆಲಸಕಾರ್ಯಗಳನ್ನು ಮಾಡಲಾಗದಂತಹ ಏರುಪೇರಾಗುವುದಿಲ್ಲ. ಅದು ತೀರಾ ಸಹಜವಾದ ದೈಹಿಕ ಕ್ರಿಯೆಯಂತೆ ನಡೆಯುತ್ತದೆ. ಇಂತಹ ಅವಧಿಯಲ್ಲಿ ಮಹಿಳೆಗೆ ರಜೆ ಕೊಡುವ ಪ್ರಕ್ರಿಯೆಯಿಂದ ಅದು ಪುರುಷರ ಹಾಗೂ ಮಹಿಳೆಯರ ಕಾರ್ಯ ದಕ್ಷತೆಯ ತುಲನೆಗೆ ಎಣೆ ಮಾಡಿಕೊಟ್ಟು, ಮಹಿಳೆಯು ಜವಾಬ್ದಾರಿಯುತ ಸ್ಥಾನದ ಅವಕಾಶಗಳಿಂದ ವಂಚಿತಳಾಗಬಹುದು. ಆದ್ದರಿಂದ ಮುಟ್ಟಿನ ರಜೆ ಇರಬೇಕು. ಆದರೆ ಅದನ್ನು ಬಳಸಿಕೊಳ್ಳುವ ಅಥವಾ ಬಿಡುವ ಆಯ್ಕೆ ಅವಳಿಗೆ ಇರಬೇಕು ಎಂಬುದು ನನ್ನ ಪ್ರತಿಪಾದನೆ.

Exit mobile version