Site icon Vistara News

Women’s Day 2023: ಆ ದಿನಗಳ ರಜೆ ಆಕೆಯ ಮೂಲಭೂತ ಹಕ್ಕು

Those days leave is her basic right

#image_title

ಜಯಗೌರಿ, ಆಪ್ತ ಸಮಾಲೋಚಕಿ

ಸೃಷ್ಟಿಯ ಆರಂಭದಲ್ಲಿ ಪ್ರಕೃತಿಯು ಕೊಟ್ಟ ವಿಭಿನ್ನತೆಯನ್ನು ಆದಿಮಾನವರು ಸರಿಯಾಗಿಯೇ ಅರ್ಥೈಸಿಕೊಂಡು ಹೊಂದಿಕೊಂಡರು. ಅಂದರೆ ಹೆಣ್ಣು ಬಸಿರು, ಬಾಣಂತನ, ಮಕ್ಕಳ ಜೊತೆಗೆ ಮನೆಯೊಳಗಿನ ಕೆಲಸವನ್ನೂ, ಗಂಡಸರು ಕಾಡುಮೇಡು ಸುತ್ತಿ ಆಹಾರ ಹುಡುಕಿ ತರುವ ಕೆಲಸವನ್ನೂ ಮಾಡಿದರು.

ನಾಗರಿಕತೆ ಬೆಳೆಯುತ್ತಾ, ‘ಆಧುನಿಕ ತಂತ್ರಜ್ಞಾನ ಯುಗ’ದಲ್ಲಿ ಇಂದೀಗ ಹೆಣ್ಣು ತನಗೆ ಪ್ರಕೃತಿಯಿಂದ ನೀಡಲಾದ – ಬಿಡಲಾಗದ ಕರ್ತವ್ಯದೊಂದಿಗೆ, ಕುಟುಂಬದ ಆರ್ಥಿಕತೆಗಾಗಿ, ಸಾಮಾಜಿಕವಾದ ಅಸ್ತಿತ್ವಮನ್ನಣೆಗಾಗಿ, ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಯ್ತು. ಅವಳದೇ ಆಗಿದ್ದ ಕೌಟುಂಬಿಕ ಜವಾಬ್ದಾರಿ ಜೊತೆಗೆ ಹೊರದುಡಿಮೆಯು ಆಕೆಯ ಹೆಗಲೇರಿತು.

ಇದು ಆಹಾರ ಹಾಗೂ ಜೀವನಶೈಲಿಯನ್ನೇ ಬದಲಾಯಿತು. ಪ್ರತಿಫಲವು ಮುಟ್ಟು ಎಂಬ ಸಹಜ ಪ್ರಕ್ರಿಯೆಯನ್ನ ಒಂದು ಸಮಸ್ಯೆಯತ್ತ, ಅನಾರೋಗ್ಯದತ್ತ ಒಯ್ದಿದೆ. ಇದು ಒಂದು ರೀತಿಯಲ್ಲಿ ಎರಡು ಮಕ್ಕಳಾದ ಬಳಿಕ ಅನವಶ್ಯಕವಾದ – ತಪ್ಪಿಸಲಾಗದ ಜವಾಬ್ದಾರಿಯಾಗುಳಿದಿದೆ.

ತಿಂಗಳೇನು, ಇಪ್ಪತ್ತೆಂಟು ದಿನಗಳಷ್ಟೇ. ವರ್ಷಕ್ಕೆ 13 ಸಲ ಕಾಡುವ ಪಟ್ಟು ಇದರದ್ದು. ಅದೂ ಒಂದು ಸಲಕ್ಕೆ ಸರಾಸರಿ 4ರಿಂದ 7 ದಿನ. ಈ ದಿನಗಳು ಎಷ್ಟೇ ಸಹಜವಾಗಿದ್ದರೂ ಪ್ಯಾಡ್ / ಕಪ್ ಬಳಕೆ, ಕೂರಲು – ಏಳಲು, ಟಾಯ್ಲೆಟ್ ಹೋಗುವಾಗ ಆ ಕಿರಿಕಿರಿ ಸಹಿಸುವಿಕೆ, ದಿನಕ್ಕೆ ಮೂರ್ನಾಲ್ಕು ಬಾರಿ ಅದರ ಸಮರ್ಪಕ ನಿರ್ವಹಣೆ, ಇದರ ಮಧ್ಯೆ ಮನೆಮಕ್ಕಳ ಕೆಲ್ಸ, ಆಫೀಸ್ ಕೆಲ್ಸ ….

ಮನದಲ್ಲೊಮ್ಮೆ ಕಲ್ಪಿಸಿ ನೋಡಿ ಗಂಡಸರಾದವರು… ಇಂಥಾ ಪರಿಸ್ಥಿತಿ ನಿಮಗೆ ಪ್ರತಿ ತಿಂಗಳೂ ಒದಗಿದರೆ, ನಿಮ್ಮ ಮನಸ್ಥಿತಿಯಾದರು ಹೇಗಿದ್ದೀತು ಎಂದು.

ಆ ಸ್ರಾವದ ದಿನಗಳಷ್ಟೇ ಅಲ್ಲದೆ, ಮಧ್ಯದ ದಿನಗಳಲ್ಲಿ ಹಾರ್ಮೋನ್ ಏರುಪೇರುಗಳಾಗುತ್ತಿದ್ದು, ಹೆಚ್ಚಿನ ಕೆಲಸದೊತ್ತಡ – ಕಮ್ಮಿ ವಿಶ್ರಾಂತಿ ಇರುವ ಹೆಣ್ಣುಮಕ್ಕಳಿಗೆ ಈ ಏರುಪೇರು ಗಣನೀಯವಾಗಿ ತೊಂದರೆಯುಂಟುಮಾಡುತ್ತದೆ.

ಅತಿ ಹಸಿವು ಅಥವಾ ಹಸಿವಿಲ್ಲದಿರುವಿಕೆ, ಅತಿನಿದ್ದೆ ಅಥವಾ ನಿದ್ರಾರಹಿತ ರಾತ್ರಿ, ತತ್ಪರಿಣಾಮ ಅಸಹನೆ, ಬೇಸರ, ಸಿಟ್ಟು, ತಲೆನೋವು, ತಲೆಸುತ್ತು, ಸೊಂಟನೋವುಗಳ ಕಾಟದಿಂದ ಆಕೆಯ ವ್ಯಕ್ತಿತ್ವದ ಮೇಲೆ, ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮವಾಗುತ್ತದೆ.

ಈ ಒತ್ತಡ ಮುಂದುವರಿದಾಗ ಗರ್ಭಕೋಶದಲ್ಲಿ ತೊಂದರೆಗಳು ಕಾಣಿಸಿಕೊಂಡು ಸರ್ಜರಿ ಇತ್ಯಾದಿ ದೀರ್ಘಕಾಲೀನ ಚಿಕಿತ್ಸೆ ಅವಶ್ಯವಾಗುತ್ತದೆ. ಅಲ್ಲದೆ ಅವು ಜೀವನದಲ್ಲಿ ಶಾಶ್ವತ ಅಡ್ಡಪರಿಣಾಮಗಳನ್ನುಳಿಸುತ್ತವೆ.

ವೃತ್ತಿಜೀವನ, ಸಾಮಾಜಿಕ ಜೀವನ, ಸಾಂಸಾರಿಕ ಜೀವನ, ದಾಂಪತ್ಯಜೀವನ ಎಲ್ಲವೂ ಒಂದು ಹೊಡೆತಕ್ಕೊಳಗಾಗುತ್ತೆ. ಇವೆಲ್ಲ ಸಂಭಾಳಿಸೋದ್ರಲ್ಲಿ ತಂತ್ರಜ್ಞಾನಯುಗದ ಸ್ತ್ರೀ ಹೈರಾಣಾಗುತ್ತಿದ್ದಾಳೆ. ತನ್ನ ಸ್ವಂತಿಕೆ ಅಸ್ತಿತ್ವ ಉಳಿಸಿಕೊಳ್ಳಲು ಕಚೇರಿ ಕೆಲಸ ಅನಿವಾರ್ಯ, ಮನೆಗೆಲಸವನ್ನೂ ನಿರ್ಲಕ್ಷಿಸಲಾಗದು, ಆದರೆ ಕನಿಷ್ಠ ಆ ಮೂರು ದಿನಗಳ ನಿರಂತರ ಸ್ರಾವದಲ್ಲಿ ಕಚೇರಿ ಕೆಲಸದಿಂದಲಾದರು ಬಿಡುಗಡೆ ಸಿಕ್ಕರೆ ಆಕೆ ನೆಮ್ಮದಿಯ ಉಸಿರು ಪಡೆದಾಳು.

ಸ್ತ್ರೀಗೆ ಆ “ಮೂರು ದಿನಗಳ ರಜೆ” ಕೊಡುವುದರಿಂದ (ಸಂಬಳಸಹಿತ) ನಮ್ಮ ಮುಂದಿನ ಜನಾಂಗಕ್ಕೆ ಒಳಿತು ಮಾಡ್ತೀವಿ – ತಾಯಿ ಆರೋಗ್ಯವಾಗಿದ್ದರೆ ಮಗುವು ಸದೃಢ ವ್ಯಕ್ತಿಯಾಗುತ್ತದೆ. ಆಕೆಯ ಆರೋಗ್ಯ – ನೆಮ್ಮದಿಯು ಕುಟುಂಬದ ಸಂತೋಷಕ್ಕೆ ಕೊಡುಗೆಯಾಗುತ್ತದೆ.

ಅದಕ್ಕಿಂತಲೂ ಆ ದಿನಗಳ ವಿಶ್ರಾಂತಿಯು ಆಕೆಯ ಮೂಲಭೂತ ಹಕ್ಕು ಎಂದು ಪರಿಗಣಿಸಿದರೆ ಅತ್ಯಂತ ಸೂಕ್ತ.

Exit mobile version