ಭಾರತ ವರ್ಷಕ್ಕೆ ೩.೫ ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ಕನ್ನು ಉತ್ಪಾದನೆ ಮಾಡುತ್ತದಂತೆ. ಕೋವಿಡ್ ೧೯ ನಂತರ ಈ ಉತ್ಪಾದನೆಯಲ್ಲಿ ಇನ್ನೂ ಏರಿಕೆಯಾಗಿದೆ. ಆನ್‌ಲೈನ್ ಯುಗದಲ್ಲಿ ಪ್ಯಾಕಿಂಗ್, ಆಹಾರ ಮನೆಗೇ ಆರ್ಡರ್ ಮಾಡುವಾಗಿನ ಪಾರ್ಸೆಲ್ ಬಳಸಿ ಬಿಸಾಕುವ ಪ್ಲಾಸ್ಟಿಕ್‌ಗಳು ಸೇರಿದಂತೆ ಎಲ್ಲೆಡೆ, ಬಳಸಿ ಬಿಸಾಕುವ ಪ್ಲಾಸ್ಟಿಕ್ ಬಳಕೆ ಅತ್ಯಂತ ಹೆಚ್ಚಾಗಿದೆ. ಈ ಎಲ್ಲ ಪ್ಲಾಸ್ಟಿಕ್‌ನಲ್ಲಿ ಎಷ್ಟು ಪ್ಲಾಸ್ಟಿಕ್ ನಿಜಕ್ಕೂ ಮರುಬಳಕೆಗಾಗಿ ಸಂಸ್ಕರಿಸಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಎಲ್ಲವೂ, ಅಲ್ಲಲ್ಲಿ ರಸ್ತೆ ಬದಿಯಲ್ಲಿ ಎಸೆದು, ಕಸದ ರಾಶಿಯಲ್ಲಿ ಕಸವಾಗಿ, ನೀರು ಸರಾಗವಾಗಿ ಹರಿದುಹೋಗಲು ತಡೆಯಾಗಿ, ವರ್ಷಗಟ್ಟಲೆ ಕೊಳೆಯದೇ ಭೂಮಿಯಲ್ಲೇ ಕಸವಾಗಿ ಬಿದ್ದುಕೊಂಡಿರುವ ಇವುಗಳನ್ನು ಏನು ಮಾಡಬಹುದು ಎಂದು ಕೆಲಕಾಲ ಯೋಚನೆಯಾದರೂ ನೀವು ಮಾಡಿದ್ದೀರಾ? ನೀವು ಮಾಡಿಲ್ಲದಿದ್ದರೆ, ಔರಂಗಾಬಾದ್‌ನ ಈ ಇಬ್ಬರು ಕಾಲೇಜು ಹುಡುಗಿಯರು ಮಾಡಿದ್ದಾರೆ. ಪರಿಸರವನ್ನು ನಮ್ಮದೇ ರೀತೀಯಲ್ಲಿ ಕಾಪಾಡಲು ಕಾಣಿಕೆ ನೀಡಿದ್ದಾರೆ.
ಬಳಸಿ ಬಿಸಾಕಿದ ಪ್ಲಾಸ್ಟಿಕ್‌ನಿಂದ ಏನಾದರೂ ಮಾಡಲೇಬೇಕು ಎಂದು ಪಣತೊಟ್ಟ ಔರಂಗಾಬಾದ್‌ನ ನಮಿತಾ ಕಪಾಲೆ ಹಾಗೂ ಕಲ್ಯಾಣಿ ಭರ್‌ಮ್ಬೆ ಎಂಬ ಇಬ್ಬರು ಹೆಣ್ಣುಮಕ್ಕಳು ಸುಮ್ಮನೆ ಕೂರಲಿಲ್ಲ. ಎಲ್ಲರ ವಿರೋಧದ ನಡುವೆಯೇ, ೧೬,೦೦೦ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿ ಮನೆಯೊಂದನ್ನು ನಿರ್ಮಿಸಿದ್ದಾರೆ.
ಔರಂಗಾಬಾದ್‌ನ ದೌಲತಾಬಾದ್‌ನ ಸಂಬಾಜಿ ನಗರದಲ್ಲಿ ೪೦೦೦ ಚದರ ಅಡಿ ವಿಸ್ತೀರ್ಣವಿರುವ ಜಾಗದಲ್ಲಿ ಪುಟ್ಟ ಮನೆಯೊಂದರ ನಿರ್ಮಾಣವನ್ನು ಇವರು ಖುದ್ದು ಮಾಡಿದ್ದಾರೆ. ಇವರು ಈ ಮನೆ ನಿರ್ಮಾಣಕ್ಕೆ ಬಳಕೆ ಮಾಡಿದ ವಸ್ತುಗಳು ೧೨-೧೩ ಟನ್‌ಗಳಷ್ಟು ಮರುಸಂಸ್ಕರಣೆ ಮಾಡಬಲ್ಲ ಪ್ಲಾಸ್ಟಿಕ್, ಮಣ್ಣು ಹಾಗೂ ಸೆಗಣಿ!
೨೦೨೦ರಲ್ಲಿ ನಮಿತಾ ಹಾಗೂ ಕಲ್ಯಾಣಿ ತಮ್ಮ ಪದವಿಯನ್ನು ಔರಂಗಾಬಾದ್‌ನ ಸರ್ಕಾರಿ ಕಲಾ ಕಾಲೇಜಿನಲ್ಲಿ ಫೈನ್ ಆರ್ಟ್‌ನಲ್ಲಿ ಪೂರ್ಣಗೊಳಿಸಿದ ಕೂಡಲೇ ಎದುರಾಗಿದದ್ದು ಕೋವಿಡ್ ೧೯ ಎಂಬ ದುಃಸ್ವಪ್ನ. ಇದೇ ಸಂದರ್ಭ ಹೊಸತೇನಾದರೂ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ, ಅಸ್ಸಾಂನ ಅಕ್ಸರ್ ಸ್ಕೂಲ್‌ನಿಂದ ಬಂದ ವಿಡಿಯೋ ಒಂದರಿಂದ ಪ್ರಭಾವಿತರಾಗಿ ನಾವೂ ಹೀಗೇಕೆ ಟ್ರೈ ಮಾಡಬಾರದು ಅನಿಸಿತಂತೆ.
ವಿಡಿಯೋ ನೋಡಿ ನಾವ್ಯಾಕೆ ಹೀಗೆ ಪ್ರಯತ್ನಿಸಬಾರದು ಅನಿಸಿ, ನಾವಿಬ್ಬರೂ ಕಾರ್ಯಪ್ರವೃತ್ತರಾಗಿ ರಸ್ತೆ ಬದಿಯಿಂದ ಬಿದ್ದ ಬಾಟಲ್‌ಗಳನ್ನೆಲ್ಲ ಸಂಗ್ರಹಿಸಲು ಆರಂಭಿಸಿದೆವು. ಹೋಟೇಲುಗಳು, ಅಂಗಡಿಗಳು, ಎಲ್ಲೆಡೆ ಬಿಸಾಕಿದ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸತೊಡಗಿದೆವು. ಮನೆಯಲ್ಲಿ ಹೆತ್ತವರಿಂದ ಇದಕ್ಕೆ ತೀವ್ರ ವಿರೋಧ ಬಂತು. ಓದಿನ ಬಗ್ಗೆ ಗಮನ ಕೊಡದೆ ಈ ಕಸ ಸಂಗ್ರಹಣೆಯ ಕೆಲಸ ಅವರಿಗೆ ಇಷ್ಟವಾಗಿರಲಿಲ್ಲ. ಆದರೂ, ಮನೆ ಕಟ್ಟಲೇಬೇಕೆಂಬ ಹಠದಿಂದ ಮನೆ ಕಟ್ಟಲು ಹೊರಟೆವು. ಆದರೆ, ಮನೆ ಒಂದು ಹಂತಕ್ಕೆ ಬರತೊಡಗಿದ ಕೂಡಲೇ ನಮ್ಮ ಈ ಕೆಲಸ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗತೊಡಗಿತು. ನಮ್ಮ ಮನೆಯವರಿಗೂ ನಮ್ಮ ಹುಚ್ಚುತನದ ಹಿಂದೆ ಇದ್ದ ಒಳ್ಳೆಯ ಉದ್ದೇಶ ಅರ್ಥವಾಯಿತು. ನಮಗೆ ಎಲ್ಲೆಡೆಯಿಂದ ಉತ್ತೇಜನ ದೊರೆಯಿತು ಎಂದು ಹೇಳುತ್ತಾರೆ ಈ ಇಬ್ಬರು.
ಇದನ್ನೂ ಓದಿ: Viral Video : ಅಪ್ಪ-ಮಗಳ ನೃತ್ಯಕ್ಕೆ ಮನಸೋಲದವರಿಲ್ಲ; ಹೇಗಿದೆ ನೋಡಿ ಈ ವೈರಲ್ ವಿಡಿಯೊ
ಈ ಇಬ್ಬರೂ ಈ ಮನೆಗಾಗಿ ೧೬,೦೦೦ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿದ್ದಾರೆ. ಸಿಮೆಂಟ್ ಬದಲಾಗಿ ಮಣ್ಣನ್ನೇ ಬಳಸಿದ್ದಾರೆ. ೧೦,೦೦೦ ಬಾಟಲ್‌ಗಳ ಒಳಗೆ ಬಳಸಿ ಎಸೆದ ಪ್ಲಾಸ್ಟಿಕ್ ಕಸವನ್ನು ತುಂಬಿದ್ದಾರೆ. ಇನ್ನುಳಿದ ಆರು ಸಾವಿರ ಬಾಟಲ್‌ಗಳ ಒಳಗೆ ಮಣ್ಣು ತುಂಬಿದ್ದಾರಂತೆ. ಹೀಗೆ ಟೈಟಾಗಿ ಪ್ಯಾಕ್ ಮಾಡಿದ ಬಾಟಲ್‌ಗಳನ್ನು ಒಂದೊಂದಾಗಿ ಜೋಡಿಸಿ ಮನೆ ಕಟ್ಟಲಾಗಿದೆ.
ಇವರಿಬ್ಬರೂ, ತಾವು ಪಡೆದ ಸಲಹೆ ಸೂಚನೆಯಂತೆ ಮನೆ ಕಟ್ಟತೊಡಗಿದರೂ ಮೊದಲ ಪ್ರಯತ್ನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದವಂತೆ. ೨-೩ ಬಾರಿ ಗೋಡೆ ಕುಸಿದು ಬಿತ್ತಂತೆ. ತಾವು ಬಳಸಿದ ಮಣ್ಣನ್ನು ಬದಲಿಸಿ ಸ್ಥಳೀಯ ಅಂಟು ಮಣ್ಣನ್ನು ಬಳಸಲು ಆರಂಭಿಸಿದ ಮೇಲೆ ಇದು ಅಂಟಿ ಕೂರಲು ಶಕ್ತವಾಯಿತಂತೆ.
ಇವರ ಈ ಕೆಲಸಕ್ಕೆ ಸುಮಾರು ೧೫ ದಿನಗೂಲಿ ಮಹಿಳೆಯರು ಹೆಗಲು ಕೊಟ್ಟಿದ್ದಾರೆ. ಮಣ್ಣು ತುಂಬಿದ ಪ್ಲಾಸ್ಟಿಕ್ ಬಾಟಲಿಗಳಿಂದಾಗಿ ಈ ಮನೆ ಬೇಸಗೆಯಲ್ಲೂ ತಂಪಾಗಿರುತ್ತದಂತೆ. ಸದ್ಯಕ್ಕೆ ಈ ಮನೆಯಲ್ಲಿ ಸಣ್ಣದೊಂದು ಹೊಟೇಲ್ ಉದ್ಯಮವನ್ನು ಇವರು ಆರಂಭಿಸಿದ್ದಾರೆ. ಸಿಮೆಂಟ್ ಮನೆಗಳಿಗೆ ಹೋಲಿಸಿದರೆ ಸುಮಾರು ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಿದ್ದು, ಇವರು ತಮ್ಮ ಉಳಿತಾಯದ ಹಣದಲ್ಲಿ ಸುಮಾರು ಏಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ಸುಮಾರು ೧೦ ವರ್ಷಗಳ ಕಾಲ ಇದು ಬಾಳಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Viral Video : ಶಾಲೆಗೆ ವಿದ್ಯಾರ್ಥಿಗಳ ಬದಲಾಗಿ ಬಂದಿದ್ದು ಈ ವಿಶೇಷ ವ್ಯಕ್ತಿ! ಇಲ್ಲಿದೆ ನೋಡಿ ವೈರಲ್ ವಿಡಿಯೊ