ರೂಪ, ಕವಯಿತ್ರಿ
ಔದ್ಯೋಗಿಕ ಕ್ಷೇತ್ರದಲ್ಲಿ ಹೆಣ್ಣು ಗಂಡಿನಷ್ಟೇ ಸಶಕ್ತಳು ಅಥವಾ ಗಂಡಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಬಲ್ಲಳು ಅಂದರೂ ತಪ್ಪಿಲ್ಲ. ಏನೆಲ್ಲಾ ಸವಲತ್ತುಗಳು, ಅಧಿಕಾರವನ್ನ ಗಳಿಸಿಕೊಂಡರೂ ಶಾರೀರಕವಾಗಿ, ಮಾನಸಿಕವಾಗಿ ದುರ್ಬಳಲಾಗುವುದೂ ಇದೆ. ಅದು ಅವಳ ಮುಟ್ಟಿನ ದಿನಗಳಲ್ಲಿ. ಎಲ್ಲರ ಶರೀರವೂ ಒಂದೇ ರೀತಿ ಸ್ಪಂದಿಸುವುದಿಲ್ಲ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ತೊಂದರೆ ಅನುಭವಿಸುವುದು ಮುಟ್ಟಿನ ದಿನಗಳಲ್ಲಿ. ಕಾಲ ಬದಲಾದಂತೆ ಹೆಣ್ಣು ಕೇವಲ ಒಂದೇ ಕ್ಷೇತ್ರಕ್ಕೆ ಮೀಸಲಾಗದೆ ತನ್ನ ಸಾಮರ್ಥ್ಯ, ಬುದ್ಧಿಮತ್ತೆ, ಕ್ಷಮತೆಯಿಂದ ತನ್ನ ಕಬಂಧ ಬಾಹುಗಳನ್ನ ಚಾಚುತ್ತ ಕೇವಲ ಗಂಡು ಮಾತ್ರ ನಿಭಾಯಿಸಬಲ್ಲ ಕ್ಷೇತ್ರಗಳನ್ನು ಕೂಡಾ ಆವರಿಸಿಕೊಡಿದ್ದಾಳೆ. ಆಟೋ ಚಾಲಕಿಯಾಗಿ, ಮಣಭಾರದ ಟಯರ್ ಗಳನ್ನ ಚೇಂಜ್ ಮಾಡುವ ಗ್ಯಾರೇಜ್ ಗಳಲ್ಲಿ, ರಣಬಿಸಿಲಿನಲ್ಲೂ ಧೃತಿಗೆಡದೆ ಸೈಟ್ ಗಳಲ್ಲಿ ಕೆಲಸ ಮಾಡುವ ಸಿವಿಲ್ ಎಂಜಿನಿಯರ್ ಗಳಾಗಿ, ಪಂಚಾಯಿತಿ ಅಧಿಕಾರಿಯಾಗಿ ಏನೇನೂ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ತಿರುಗುವ ಹೆಣ್ಣುಮಕ್ಕಳು… ಹೀಗೆ ನೂರೆಂಟು ಕಾರ್ಯಕ್ಷೇತ್ರಗಳಲ್ಲಿ ತಮ್ಮನ್ನ ತಾವು ಸಮರ್ಥವಾಗಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳನ್ನ ನಿಭಾಯಿಸುವುದೇ ಒಂದು ದೊಡ್ಡ ಚಾಲೆಂಜ್ ಆಗಿ ಪರಿಣಮಿಸಿದೆ.
ಕೇರಳ ರಾಜ್ಯದಲ್ಲಿ ಮುಟ್ಟಿನ ರಜೆ ಘೋಷಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಇದು ಎಲ್ಲಾ ರಾಜ್ಯಗಳಿಗೂ ಎಲ್ಲಾ ಖಾಸಗಿ ಕ್ಷೇತ್ರಗಳಿಗೂ ಜಾರಿ ಬಂದರೆ ತುಂಬಾ ಒಳ್ಳೆಯದು. ಇದು ತುಂಬಾ ಚರ್ಚೆಯ ವಿಷಯವಾಗಿದ್ದು. ಇಂಥ ರಜೆ ನಿಜವಾಗಿಯೂ ಬೇಕೇ, ಬೇಡವೇ ಎನ್ನುವುದೇ ಚರ್ಚೆಯ ವಿಷಯ. ಬೇಕು ಅನ್ನುವವರಲ್ಲಿ ಎಷ್ಟು ಜನವೋ ಬೇಡ ಅನ್ನುವವರಲ್ಲಿ ಕೂಡಾ ಅಷ್ಟೇ ಜನ. ಅದರಲ್ಲಿ ಹೆಣ್ಣುಮಕ್ಕಳೂ ಇರುವುದು ಇನ್ನೂ ವಿಚಿತ್ರ ಸಂಗತಿ.
ಸಮಸ್ಯೆಗಳು ಉಂಟಾಗುವುದು ಯಾವ ರೀತಿಯ ಕೆಲಸದಲ್ಲಿ ಹೆಣ್ಣು ತನ್ನ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದಾಳೆ ಎನ್ನುವುದರ ಮೇಲೆ ಅವಲಂಬಿಸುತ್ತದೆ. ಹವಾನಿಯಂತ್ರಿತ ಕೊಠಡಿಯಲ್ಲಿ, ಉತ್ತಮ ಶೌಚಾಲಯದ ವ್ಯವಸ್ಥೆಗಳಿದ್ದರೆ ಒಂದು ಹಂತದವರೆಗೆ ಒಪ್ಪಬಹುದು. ಕೆಲವೊಮ್ಮೆ ಊರೂರು ಅಲೆಯುವ, ತುಂಬಾ ಶ್ರಮದಾಯಕ ಕೆಲಸ ಬೇಡುವಂತ ಸ್ಥಾನವಿದ್ದರೆ ನಿಜಕ್ಕೂ ಕಷ್ಟವೇ.
ಎಲ್ಲಕ್ಕಿಂತ ಹೆಚ್ಚಾಗಿ ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಹೆಣ್ಣು ಹೆಚ್ಚು ಭಾವನಾತ್ಮಕವಾಗಿಯೂ, ಏಕಾಗ್ರತೆ ಕೊರತೆಯಿಂದಾಗಿ ಕೆಲಸದಲ್ಲಿಯೂ ಕಿರಿಕಿರಿ ಅನುಭವಿಸುವಂತಾಗುತ್ತದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಹೆಚ್ಚು ಭಾಗಗಳಲ್ಲಿ ಮುಟ್ಟು ಅನ್ನುವುದೇ ಒಂದು ಮಲಿನವಾದ ಪ್ರಕ್ರಿಯೆ, ಅಪವಿತ್ರ ಅನ್ನುವ ಭಾವನೆಯೇ ಹೆಚ್ಚು. ಪ್ಯಾಡ್ ಗಳನ್ನು ಇನ್ನೂ ಕದ್ದುಮುಚ್ಚಿ ಒಯ್ಯುವಂತ ಪರಿಸ್ಥಿತಿಯಲ್ಲಿ ಅದೊಂದು ನೈಸರ್ಗಿಕ ಪ್ರಕ್ರಿಯೆ ಅನ್ನುವುದನ್ನೇ ನಮ್ಮ ಸಮಾಜ ಒಪ್ಪುವುದಿಲ್ಲ ಅಂದ ಮೇಲೆ ಹೆಣ್ಣು ಸಹಜವಾಗಿಯೇ ಅದನ್ನ ಎಲ್ಲರೆದುರು ಹೇಳಿಕೊಳ್ಳುವದಾಗಲಿ ಅದಕ್ಕಾಗಿ ನನಗೇ ರಜೆ ಕೊಡಿ ಅಂತ ಕೇಳುವ ಮಾತು ದೂರವೇ…
ಅದಕ್ಕಾಗಿ ರಜೆ ಕೇಳುವದರಿಂದ ತಾನೆಲ್ಲಿ ಅಸಮರ್ಥಳು ಅನ್ನುವ ಭಾವನೆ ಇತರರಲ್ಲಿ ಮೂಡುವುದೋ ಅನ್ನುವ ಸಂಕೋಚ.
ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ ಹೆಣ್ಣಿನ ಮನಸ್ಸು, ದೇಹ ಆ ಸಮಯದಲ್ಲಿ ಬೇಡುವುದು ನಿರಾತಂಕವಾದ ಆರಾಮು ಅಷ್ಟೇ. ಬಾಕಿ ಹೆಣ್ಣು ಗಂಡಿನಷ್ಟೇ ಸಮರ್ಥಳು, ಔದ್ಯೋಗಿಕ ಕ್ಷೇತ್ರದಲ್ಲಿಯೂ ಅಷ್ಟೇ ಸಮರ್ಥವಾಗಿ ತನ್ನ ಜವಾಬ್ದಾರಿಗಳನ್ನ ನಿಭಾಯಿಸಬಲ್ಲಳು ಅನ್ನುವುದನ್ನ ಈ ಸಮಾಜ ಒಪ್ಪಬೇಕು ಮತ್ತು ಅವಳನ್ನು ಇನ್ನಷ್ಟು ಅರಳಲು ಅವಕಾಶ ಕಲ್ಪಿಸಬೇಕು.