ಎಸ್ ನಾಗಶ್ರೀ ಅಜಯ್
ಮುಟ್ಟು ಸಹಜ, ಸ್ವಾಭಾವಿಕ ಪ್ರಕ್ರಿಯೆ. ಆ ದಿನಗಳಲ್ಲಿ ಸ್ವಲ್ಪ ಹೆಚ್ಚಿನ ಆರೈಕೆ, ವಿಶ್ರಾಂತಿಯ ಅಗತ್ಯವಿರುವುದು ನಿಜವಾದರೂ, ಪ್ರತಿ ತಿಂಗಳು ಮೂರು ದಿನಗಳ ರಜೆ ತೆಗೆದುಕೊಳ್ಳಬೇಕಾದಷ್ಟು ಗಂಭೀರ ಆರೋಗ್ಯ ಸಮಸ್ಯೆಯಲ್ಲ. ಅಸಲಿಗೆ ‘ಮುಟ್ಟು’ ಸಮಸ್ಯೆಯೇ ಅಲ್ಲ. ಹಾಗೆ ನೋಡಿದರೆ ಹೆಣ್ಣುಮಕ್ಕಳ ದೇಹಪ್ರಕೃತಿ ತಿಂಗಳಲ್ಲಿ ನಾಲ್ಕು ಬಾರಿ ಬದಲಾಗುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುವ ಈ ಬದಲಾವಣೆಗಳೊಂದಿಗೆ ಬದುಕು ಸಾಗಿಸುವುದನ್ನು ಆಕೆ ಕಲಿತಾಗಿರುತ್ತದೆ. ದೈನಂದಿನ ಕೆಲಸಗಳನ್ನು ಪೂರೈಸಲಾಗದಷ್ಟು ನಿತ್ರಾಣ, ನೋವು, ಹಿಂಸೆ, ಆಯಾಸವಾಗುತ್ತಿದ್ದರೆ ಆಗ ವೈದ್ಯರನ್ನು ಕಂಡು, ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿಯ ಅವಶ್ಯಕತೆಯಿದೆ. ಆ ದಿನಗಳಲ್ಲಿ ನೋವು, ಹಿಂಸೆ ಇದ್ದಿದ್ದೇ ಎಂದು ಹಲ್ಲುಕಚ್ಚಿ ಸಹಿಸುವುದೋ, ಕಚೇರಿಯಲ್ಲಿ ದೊರೆಯುವ ರಜೆಗಳಷ್ಟನ್ನೂ ಆ ದಿನಗಳಿಗೆ ಮೀಸಲಿಟ್ಟು ನರಳುವುದೋ ಮಾಡಬೇಕಿಲ್ಲ. ಬಹುತೇಕರಲ್ಲಿ ಈ ನೋವು, ಹಿಂಸೆ, ಆಯಾಸಗಳು ಪರಿಹರಿಸಲು ಸಾಧ್ಯವಿರುವ ಆರೋಗ್ಯ ಸಮಸ್ಯೆಯಿಂದಲೇ ಉಂಟಾಗುತ್ತಿರುತ್ತದೆ. ಪಿಸಿಓಡಿ, ಎಂಡೋಮೆಟ್ರಿಯಾಸಿಸ್, ಅಡಿನೋಮಯೋಸಿಸ್, ಅನೀಮಿಯಾ, ಕ್ಯಾಲ್ಷಿಯಂ/ ವಿಟಮಿನ್ ಡಿ ಕೊರತೆ ಹೀಗೆ ಸಮಸ್ಯೆ ಏನಿದ್ದರೂ, ಭಯಪಡದೆ ವೈದ್ಯರನ್ನು ಕಂಡು, ಸೂಕ್ತ ಚಿಕಿತ್ಸೆ ಪಡೆದು ಮುಟ್ಟಿನ ದಿನಗಳನ್ನು ನಿರಾತಂಕವಾಗಿ ಕಳೆಯಬಹುದು.
ಕಚೇರಿಗಳಲ್ಲಿ ಮುಟ್ಟಾದ ಮಹಿಳೆಯರಿಗೆ ರಜೆ ನೀಡಿ, ದೂರವಿಡಬೇಕಾಗಿಲ್ಲ. ಮುಂದೆ ಇದೇ ಕಾರಣಕ್ಕೆ ಹೆಣ್ಣುಮಕ್ಕಳಿಗೆ ಸಿಗಬೇಕಾದ ಉದ್ಯೋಗ, ಭಡ್ತಿ, ಉನ್ನತ ಹುದ್ದೆಗಳು ತಪ್ಪುವಂತಾದರೆ? ಬದಲಾಗಿ, ಪ್ರತಿ ಕಚೇರಿಯಲ್ಲೂ ಶೌಚಾಲಯ, ವಿಶ್ರಾಂತಿ ಕೊಠಡಿ, ಬಿಸಿ ನೀರು, ಹಾಟ್ ಬ್ಯಾಗ್, ಕ್ಯಾಂಟೀನಿನಲ್ಲಿ ಸುಲಭವಾಗಿ ಜೀರ್ಣವಾಗುವ, ಹೆಚ್ಚು ಮಸಾಲೆಯಿಲ್ಲದ ಪೊಂಗಲ್, ಕಿಚಡಿಯಂತಹ ಆಹಾರವೊಂದು ಲಭ್ಯವಿರುವಂತೆ ನೋಡಿಕೊಂಡರೆ ಸಾಕು. ಇದು ಮಹಿಳೆಯರಿಗೆ ಮಾತ್ರವೆಂದಲ್ಲ. ಪುರುಷರಿಗೂ ಪ್ರತ್ಯೇಕ ವ್ಯವಸ್ಥೆಯಾಗಿ ನೀಡಬಹುದು. ಮತ್ತು ಇದ್ಯಾವುದೂ ಆರ್ಥಿಕವಾಗಿ ಹೊರೆಯೆನಿಸುವ ಸವಲತ್ತುಗಳಲ್ಲ. ತಮ್ಮ ಅನಾನುಕೂಲಗಳಿಗೆ ಸ್ಪಂದಿಸುವ ಸಂಸ್ಥೆ ಎಂಬ ವಿಶ್ವಾಸ ಮೂಡಿಸಬಲ್ಲ ಸಣ್ಣಸಣ್ಣ ಹೆಜ್ಜೆಗಳು.
ಇದಲ್ಲದೆ ಹೆಣ್ಣುಮಕ್ಕಳು ಪ್ರತಿದಿನ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ, ಹವ್ಯಾಸಗಳಿಗೆ ಸಮಯ ಹೊಂದಿಸಿಕೊಂಡು ತಮ್ಮ ದೈಹಿಕ, ಮಾನಸಿಕ ಅಗತ್ಯಗಳ ಬಗ್ಗೆ ಕಾಳಜಿವಹಿಸಿದರೆ ಆ ಮೂರು ದಿನಗಳು ಇತರ ದಿನಗಳಷ್ಟೇ ಸಹಜವಾಗಿ, ನಿರಾಳವಾಗಿ ಇರುವುದರಲ್ಲಿ ಸಂಶಯವಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಈಗಿನ ಅವಶ್ಯಕತೆ ಜಾಗೃತಿಯೇ ಹೊರತು ರಜೆಯಲ್ಲ.