Site icon Vistara News

Women’s Day 2023: ಬೇಕಿರುವುದು ರಜೆಯಲ್ಲ, ತುಸು ಹೆಚ್ಚು ವಿಶ್ರಾಂತಿ ಅಷ್ಟೆ

What is needed is not a vacation, but a little more rest

#image_title

ಶಮಾ ನಂದಿಬೆಟ್ಟ

ಸರ್ಕಾರಿ ಇರಲಿ, ಖಾಸಗಿಯಿರಲಿ ಕೆಲಸ ಆಗಲಿಲ್ಲ ಎನ್ನುವುದಕ್ಕೆ ಸಿಗುತ್ತಿರುವ ದೊಡ್ಡ ಕಾರಣ ವರ್ಕ್ ಲೋಡ್ ಹೆಚ್ಚಾಗಿದೆ. ಅಸಂಘಟಿತ ವಲಯದವರು ಎಲ್ಲ ನಿಯಮಗಳಿಗೂ ಅತೀತರಾದ ಕಾರಣ ಅವರನ್ನು ಬಿಟ್ಟು ಮಾತನಾಡಿದರೂ ನಿಗದಿತ ಸರ್ಕಾರಿ ರಜೆಗಳು, ಸಿ.ಎಲ್, ಇ.ಲ್ ಹಾಗೂ ಭಾನುವಾರ ಸೇರಿಸಿದರೆ ವರ್ಷಕ್ಕೆ ಸುಮಾರು 106 ರಜೆಗಳಿರುತ್ತವೆ, ಶನಿವಾರವೂ ರಜೆ ಪಡೆಯುವವರಿಗೆ ಸುಮಾರು 150 ಆಗುತ್ತದೆ. ಇದನ್ನು ಕಳೆದು ಉಳಿದ ಕೆಲಸದ ದಿನಗಳಿಗೆ ಈ ಮುಟ್ಟಿನ ಮೈಲಿಗೆ ಸೇರಿಸಿದರೆ ಕೆಲಸದ ದಿನಗಳ ಸಂಖ್ಯೆಗಳಿಗೂ ರಜಾದಿನಗಳ ಸಂಖ್ಯೆಗಳಿಗೂ ಬಿರುಸಿನ ಸ್ಪರ್ಧೆ!! ರಜೆ ಕೊಟ್ಟ ಮಾತ್ರಕ್ಕೆ ಅವಳ ಪಾಲಿನ ಕೆಲಸಗಳನ್ನು ಇನ್ಯಾರೋ ಮುಗಿಸುವುದಿಲ್ಲ. ವಾಪಸಾದ ನಂತರ ದುಪ್ಪಟ್ಟು ಹೊರೆಯ ಬುತ್ತಿ.

ದೇಹ ಪ್ರಕೃತಿಗೆ ಅನುಗುಣವಾಗಿ ಮುಟ್ಟಿನ ನೋವು ಒಬ್ಬೊಬ್ಬರಲ್ಲಿ ಒಂದೊಂದು ಥರ ಇದ್ದರೂ ಒಂದು ಮಟ್ಟದ ಸುಸ್ತು, ದೇಹಾಲಸ್ಯ ಎಲ್ಲರನ್ನೂ ಕಾಡುತ್ತದೆ. ರಜೆ ಇದಕ್ಕೆ ಪರಿಹಾರವೆಂದು ಮೇಲ್ನೋಟಕ್ಕೆ ಅನಿಸಿದರೂ ʼಆಕೆಗೆʼ ವಿಶ್ರಾಂತಿ ಬಯಸಿದಷ್ಟು ಸುಲಭಕ್ಕೆ ಸಿಗುವಂಥದ್ದಲ್ಲ. ಹೊರಗೆ ಕೆಲಸಕ್ಕೆ ಹೋದರೂ ಮನೆ ಸಂಭಾಳಿಸುವುದರ ಜೊತೆಗೆ ಮಕ್ಕಳೆಂಬ ಪ್ರಾಣ ಪದಕಗಳು ಕಿಲುಬುಗಟ್ಟದಂತೆ ಕಾಯುವ ಜವಾಬ್ದಾರಿಯೂ ನಮ್ಮಲ್ಲಿ ಹೆಣ್ಣಿನದೇ ತಾನೇ? ʼಪಾಪದʼ ಹೆಣ್ಣು ತಾನಾಗಿ ಇದನ್ನು ಹೊತ್ತುಕೊಂಡರೆ, ʼಜೋರಿನ ಹೆಣ್ಣಿಗೆʼ ಹೇರಲಾಗುತ್ತದೆ. ಮನೆಯಾಚೆ ಕೆಲಸಕ್ಕೆ ಹೋಗುವ ಹೆಣ್ಣಿಗೆ ವಾರದ ರಜೆಯಂದೇ ಹೆಚ್ಚು ಕೆಲಸ. ಮುಟ್ಟಿನ ರಜೆಯೂ ʼಇಷ್ಟೇʼ ಆಗಿ ಸಜೆಯಾಗುವುದರಲ್ಲಿ ಸಂಶಯ ಇಲ್ಲ. ಹೀಗೆ ಮತ್ತಷ್ಟು ದುಡಿದು ಹೈರಾಣಾಗುವ ಮುಟ್ಟಿನ ರಜೆ ಬೇಕಿಲ್ಲ.

ಕೆಲಸದ ಸ್ಥಳದಲ್ಲಿ ಅವಳಿಗೆ ಹಿಂಸೆ ಎನಿಸುವಂಥ ಯಾವುದೇ ಕೆಲಸಗಳನ್ನು ಹೇರದಿರುವುದು, ಅಗತ್ಯ ಇದ್ದಾಗ ಸ್ವಲ್ಪ ಸಹಾಯ, ಅತಿಯಾಗಿ ಏನನ್ನೂ ನಿರೀಕ್ಷಸದೇ ಸಹಕರಿಸುವುದು ಇಂದಿನ ತುರ್ತು. ಜೊತೆಗೆ ಕಚೇರಿಯ ಶೌಚಾಲಯಗಳು ಸ್ವಚ್ಛವಿರುವಂತೆ ನೋಡಿಕೊಳ್ಳುವುದು ಆಕೆಗೆ ತೋರಿಸಬಹುದಾದ ಬಹು ದೊಡ್ಡ ಗೌರವ.

ಕೆಲವು ಹಾರ್ಮೋನುಗಳಿಗೆ ಇದೇ ಸಮಯದಲ್ಲಿ ತಮ್ಮ ತಾಕತ್ತು ರುಜುವಾತು ಪಡಿಸುವ ಹಂಬಲ. ಮಾನಸಿಕ ಏರುಪೇರುಗಳು ದೇಹದ್ದಕ್ಕಿಂತ ಹೆಚ್ಚೇ ಕಾಡುವುದಿದೆ. ಇವೆಲ್ಲವನ್ನು ನಿಭಾಯಿಸಲು ಮಹಿಳೆಗೆ ಬೇಕಾಗಿರೋದು ಹಿಡಿ ಸಹಾನುಭೂತಿ, ಬೊಗಸೆ ಪ್ರೀತಿ, ಕೊಂಚ ಕಾಳಜಿ ಮತ್ತು ಬೇರೆ ದಿನಗಳಿಗಿಂತ ತುಸು ಹೆಚ್ಚು ವಿಶ್ರಾಂತಿ. ಅತೀ ಭಾವುಕತೆ ಬಿಟ್ಟು ಪುರುಷರಿಗೂ ʼಇವೆಲ್ಲದರʼ ಅರಿವು ಮೂಡಿಸಿ ಸಹಾನುಭೂತಿ ಬೆಳೆಸಿದರೆ ಅದು ಮುಟ್ಟಿನ ದಿನಗಳಲ್ಲಿ ರಜೆಗಿಂತ ಹೆಚ್ಚೇ ನೆಮ್ಮದಿಯನ್ನು ನೀಡಬಹುದು ಎಂಬುದು ನನ್ನ ಆಶಾವಾದ.

Exit mobile version