ಮಂಜುಭಾಷಿಣಿ, ನಟಿ
ಕಿಬ್ಬೊಟ್ಟೆಯನ್ನು ಹಿಂಡುವ ನೋವು, ತೀರಾ ನಿತ್ರಾಣವಾಗಿಸುವ ಬೆನ್ನಿನ ಬೇನೆ, ವಿವರಿಸಲಾಗದ ಕಾಲಿನ ಸೆಳೆತ… ಕಾರಣವೇ ಇಲ್ಲದೆ ಉಕ್ಕಿ ಬರುವ ದುಃಖ.. ಇನ್ನೂ ಹತ್ತು ಹಲವಾರು ಇರಿಸುಮುರುಸುಗಳು… ಇವೆಲ್ಲ ಒಮ್ಮೆ ಭೇಟಿ ನೀಡಿ ಮಾಯವಾಗುವ ಆಗಂತುಕರಲ್ಲ. ಪ್ರತಿತಿಂಗಳು, ಪ್ರತಿಯೊಬ್ಬ ಹೆಣ್ಣುಮಗಳ ಅನಿವಾರ್ಯ ಅತಿಥಿಗಳು.
ಪ್ರತಿ ಹೆಣ್ಣಿನ ಬಣ್ಣ, ಆಕಾರ, ರೂಪ, ಗುಣ, ವಿಭಿನ್ನ. ಹಾಗೆಯೇ ಪ್ರತಿಹೆಣ್ಣಿನ ಮುಟ್ಟಿ ನ ನೋವಿನ ಪ್ರಮಾಣ. ಹಲವಾರು ರಂಗಗಳಲ್ಲಿ, ಹಲವಾರು ಪಾತ್ರಗಳಲ್ಲಿ ಜವಾಬ್ದಾರಿ ಗಳನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಜಯಿಸುವ ಹೆಣ್ಣಿಗೆ ಮುಟ್ಟೊಂದು ಅಡಚಣೆಯೇ?
ನೆನಪಿರಲಿ ಮುಟ್ಟು ಕಾಯಿಲೆಯಲ್ಲ, ಸ್ತ್ರೀ ತನದ ಪ್ರತೀಕ.. ಆರೋಗ್ಯದ ಸಂಕೇತ. ಪ್ರತಿ ತಿಂಗಳ ಆ ಮೂರು ದಿನಗಳಲ್ಲಿ ಗೌಜು ಗದ್ದಲದ ಗೂಡಾದ ದೇಹ. ಮಂಕಾದ ಮನಸಿನ ದೀಪದ ಹಣತೆ. ಆದರೂ ನಗುವಿನ ಮುಖವಾಡ ಹೊತ್ತು ಪ್ರತಿದಿನದಂತೆ ಆ ದಿನಗಳಲ್ಲೂ ದುಡಿಯುವ ಅನಿವಾರ್ಯತೆ. ದುಡಿಯುವ ಹೆಣ್ಣಿಗೆ ಮುಟ್ಟಾದರೆ ಸಜೆ. ಅಮ್ಮನಾಗಿ, ಸತಿಯಾಗಿ, ಮನೆಯೊಳಗೆ ದುಡಿಯುವ ಮಹಿಳೆಗೂ ಸಿಗಬಹುದೇ ರಜೆ?
ಆ ಸೂಕ್ಷ್ಮ ದಿನಗಳಲ್ಲಿ ಬಳಲಿದ ದೇಹಕ್ಕೆ ಒರಗಲೊಂದು ಎದೆ, ನೋವಿನ ನಿಟ್ಟುಸಿರ ಅಳಿಸಲೊಂದು ಬೆಚ್ಚನೆಯ ಅಪ್ಪುಗೆ, ಆಯಾಸವನ್ನರಿಯುವ ಮನಗಳು ಮನೆಯಲ್ಲಿರಲು, ಆಪ್ತತೆಯ ನುಡಿಗಳು, ಸಹಾಯ ಹಸ್ತ ನೀಡುವ ಸಹೋದ್ಯೋಗಿಗಳು.. ಆರಾಮಾದಾಯಕ ಕಾರ್ಯಗಾರವಿರಲು, ಮುಟ್ಟಿನ ಮುಜುಗರ. ಮನಸಿನ ಕಿರಿಕಿರಿ ಬಹುಶ ಸಹನೀಯವಾಗುವುದೇನೋ? ಮಿತಿಮೀರಿದ ನೋವು, ಹಿಂಸೆಯನ್ನನುಭವಿಸುವವರಿಗೆ ಸ್ವ ಇಚ್ಚಿತ ರಜೆ ಯಂತೂ ಇದ್ದೆ ಇದೆ. ಆದರೆ ಮುಟ್ಟಿನ ದಿನಗಳ ಕಡ್ಡಾಯ ರಜೆ? ಅಗತ್ಯವಿರುವವರಿಗೆ ಪ್ರಯೋಜನಕಾರಿಯಾಗುವುದಕ್ಕಿಂತ. ಅನಗತ್ಯ ದುರ್ವಿನಿಯೋಗದ ಆಹ್ವಾನ ವಾಗಬಹುದೇ?
ವೈಯಕ್ತಿಕವಾಗಿ ಒಬ್ಬ ನಟಿಯಾಗಿ, ಹಲವಾರು ವರ್ಷಗಳಿಂದ ಎಡಬಿಡದೆ ದುಡಿತದಲ್ಲೇ ನಿರತಳಾಗಿರುವ ನನಗೆ, ಮುಟ್ಟು ಎಂದಿಗೂ ತಡೆ ಒಡ್ಡಲಿಲ್ಲ. ಹಲವಾರು ಸಹಕಲಾವಿದರು, ತಂತ್ರಜ್ಞರು, ನಿರ್ಮಾಣದ ಖರ್ಚು ವೆಚ್ಚ, ಇನ್ನೂ ಹತ್ತು ಹಲವಾರು ಸಿದ್ಧತೆಗಳನ್ನೆಲ್ಲ ಮುಟ್ಟಿನ ನೆಪ ಹೇಳಿ ತಪ್ಪಿಸುವ ಆಲೋಚನೆಯೂ ಸುಳಿಯದಂಥ ಮನಸ್ಥಿತಿ.
ಒಟ್ಟಾರೆಯಾಗಿ ಮೊದಲೇ ಹೇಳಿದ ಹಾಗೆ ಎಲ್ಲರ ದೇಹ ಪ್ರಕೃತಿ ವಿಭಿನ್ನ. ಮುಟ್ಟಿನ ದಿನಗಳಲ್ಲಿ ಕಡ್ಡಾಯ ರಜೆಗಿಂತ, ಮನಸ್ಸಿಗೆ, ದೇಹಕ್ಕೆ ಆರೋಗ್ಯಕರ ಆರಾಮಾದಾಯಕ ವಾತಾವರಣ ಸ್ವಾಗತಾರ್ಹ.