ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರು ೫೧ ವಸಂತಗಳನ್ನು ಕಂಡಿದ್ದಾರೆ. ಪೇಪಾಲ್, ಸ್ಪೇಸ್ ಎಕ್ಸ್, ನ್ಯೂರಾಲಿಂಕ್‌ನಂಥ ಹೊಸತನದೊಂದಿಗೆ ಹುಟ್ಟಿದ ಕಂಪನಿಗಳ ಜೊತೆ ನಂಟಾಗಿದ್ದವರು ಈತ. ವಿಪರೀತ ಎನ್ನುವಂಥ ತರ್ಕ, ಐಲು ಎನಿಸುವಂಥ ಸೃಜನಶೀಲತೆ, ಒಂದಿಷ್ಟು ಸಿನಿಕತನ ಎಲ್ಲದರ ಒಟ್ಟುಮೊತ್ತದಂತೆ ಕಾಣುವ ಟೆಸ್ಲಾ ಕಂಪನಿಯ ಮುಖ್ಯಸ್ಥ ಮಸ್ಕ್ ಬಗ್ಗೆ ಒಂದಿಷ್ಟು ಕುತೂಹಲಕರ ಮಾಹಿತಿಗಳು ಇಲ್ಲಿವೆ.
೧೨ಕ್ಕೇ ಚುರುಕಿದ್ದ ಪೋರ: ಹೊಸತನದ ಹುಡುಕಾಟ ಅವರಿಗೆ ೧೨ರ ಹರೆಯದಲ್ಲೇ ಇತ್ತು. ʻಬ್ಲಾಸ್ಟರ್ʼ ಎನ್ನುವಂತ ಒಂದು ಕಂಪ್ಯೂಟರ್ ಆಟಕ್ಕೆ ಪ್ರೋಗ್ರಾಮಿಂಗ್ ಕೋಡ್ ಅಭಿವೃದ್ಧಿ ಪಡಿಸಿದ್ದು ಇದೇ ವಯಸ್ಸಿನಲ್ಲಿ. ಆನಂತರ ಮೂಲ ಕೋಡ್ ಅನ್ನು ೫೦೦ ಡಾಲರ್‌ಗಳಿಗೆ ಆತ ಮಾರಾಟ ಮಾಡಿದ್ದರು.
ಮನೆಯೇ ನೈಟ್‌ಕ್ಲಬ್!: ಐಲು ಎಂಬಂಥ ಸ್ವಭಾವಗಳು ಕಾಣಲಾರಂಭಿಸಿದ್ದೂ ಅವರ ಹರೆಯದಲ್ಲಿಯೇ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ, ದೊಡ್ಡದೊಂದು ಮನೆಯನ್ನು ಬಾಡಿಗೆ ಪಡೆದಿದ್ದ ಆತ, ಆ ಬಾಡಿಗೆ ಕಟ್ಟಲು ಮನೆಯನ್ನು ನೈಟ್‌ಕ್ಲಬ್ ಆಗಿ ಪರಿವರ್ತಿಸಿದ್ದರು. ತಲಾ ೫ ಡಾಲರ್‌ನಂತೆ ಪ್ರವೇಶ ಶುಲ್ಕ ವಿಧಿಸಿದ್ದರು. ಒಂದು ವಾರಾಂತ್ಯವಂತೂ ೫೦೦ಕ್ಕಿಂತ ಹೆಚ್ಚು ಜನ ಅವರ ಕ್ಲಬ್‌ಗೆ ಭೇಟಿ ನೀಡಿದ್ದರಿಂದ ಝಣಝಣ ಕಾಂಚಾಣ ಅವರ ಕೈ ಸೇರಿತ್ತು.
ಇದನ್ನೂ ಓದಿ: ಎಲಾನ್ ಮಸ್ಕ್ ಡೀಲ್‌ಗೆ ನಿಯಂತ್ರಕ ವ್ಯವಸ್ಥೆ ಕೊಟ್ಟಿದ್ದ ಅವಧಿ ಮುಗಿಯಿತು ಎಂದ ಟ್ವಿಟರ್
ಸ್ಟ್ಯಾನ್‌ಫರ್ಡ್ ವಿದ್ಯಾರ್ಥಿ: ೨೪ರ ಹರೆಯದಲ್ಲಿ, ಆನ್ವಯಿಕ ಭೌತಶಾಸ್ತ್ರ ಓದಲೆಂದು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಎರಡು ದಿನಗಳಾಗಿದ್ದವಷ್ಟೆ. ಆಗಲೇ ಝಿಪ್‌೨ ಎಂಬ ಕಂಪನಿ ಪ್ರಾರಂಭಿಸಲೆಂದು ಓದಿಗೆ ಕೈಮುಗಿದರು. ೧೯೯೯ರಲ್ಲಿ ಈ ಕಂಪನಿಯನ್ನು ಕಾಂಪ್ಯಾಕ್ ಸಂಸ್ಥೆ ೩೦೦ ಮಿಲಿಯನ್ ಡಾಲರ್‌ಗೆ ಖರೀದಿಸಿತು!
ಗೂಗಲ್ ಪಾಲಾಗುವುದರಲ್ಲಿದ್ದ ಟೆಸ್ಲಾ: ಒಂದು ಸಂದರ್ಭದಲ್ಲಿ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಗೂಗಲ್ ಎಂಬ ದೈತ್ಯನ ಪಾಲಾಗಿಯೇ ಬಿಟ್ಟಂತಿತ್ತು. ೭೦೦ ಬಿಲಿಯನ್ ಡಾಲರ್ ಬೆಲೆಯ ಟೆಸ್ಲಾ ಕಂಪನಿ ೨೦೧೩ರ ಹೊತ್ತಿಗೆ ಮಾರುಕಟ್ಟೆಯಲ್ಲಿ ಕುಂಟುತ್ತಿತ್ತು ಎಂಬ ಕಾರಣಕ್ಕೆ, ಅದನ್ನು ೧೧ ಬಿಲಿಯನ್ ಡಾಲರ್ ಮಾರಾಟ ಮಾಡುವ ಬಗ್ಗೆ ಗೂಗಲ್ ಸಿಇಒ ಲಾರಿ ಪೇಜ್ ಜೊತೆಗೆ ಮಾತುಕತೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಟೆಸ್ಲಾ ಚೇತರಿಸಿಕೊಂಡಿದ್ದರಿಂದ, ಈ ಒಪ್ಪಂದ ಅರ್ಧಕ್ಕೆ ನಿಂತಿತ್ತು.
ʻಐರನ್ ಮ್ಯಾನ್ʼ: ಮಸ್ಕ್ ಅವರಿಂದಲೇ ಸ್ಫೂರ್ತಿ ಪಡೆದು ನಿರ್ಮಾಣಗೊಂಡಿದ್ದ ʻಐರನ್ ಮ್ಯಾನ್ʼ ಚಲನಚಿತ್ರಕ್ಕಾಗಿ ತಾವು ಅವರಿಂದಲೇ ನೆರವು ಪಡೆದಿದ್ದಾಗಿ ನಿರ್ದೇಶಕ ಜಾನ್ ಫವ್‌ರೋ ಹೇಳಿಕೊಂಡಿದ್ದಾರೆ. ಚಿತ್ರದ ನಾಯಕ ಟೋನಿ ಸ್ಟಾರ್ಕ್ ಕಲ್ಪನೆಯೂ ಮಸ್ಕ್ ಅವರನ್ನೇ ಆಧರಿಸಿದ್ದು. ಐರನ್ ಮ್ಯಾನ್-೨ ನಲ್ಲಿ ಮಸ್ಕ್ ಒಂದು ಅತಿಥಿ ಪಾತ್ರದಲ್ಲೂ ನಟಿಸಿದ್ದರು. ಮಾತ್ರವಲ್ಲ, ತಮ್ಮ ಸ್ಪೇಸ್-ಎಕ್ಸ್ ಆವರಣವನ್ನು ಈ ಚಿತ್ರದ ಚಿತ್ರೀಕರಣಕ್ಕಾಗಿ ಉಚಿತವಾಗಿಯೂ ನೀಡಿದ್ದರಂತೆ.
ಇದನ್ನೂ ಓದಿ: ಅವರು ಮಕ್ಕಳಂತಿರಲೇ ಇಲ್ಲ: Elon Musk ತಾಯಿ ಹೇಳಿದ್ದೇನು?