ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಜಯನಗರದಲ್ಲಿ ಮತ ಎಣಿಕೆ ಕೇಂದ್ರದ ಬಳಿ ಬಿಗುವಿನ ವಾತಾವರಣ
ಜಯನಗರದ ಮತ ಎಣಿಕೆ ಕೇಂದ್ರದ ಬಳಿ ಗೊಂದಲದ ವಾತಾವರಣ ಇನ್ನೂ ಮುಂದುವರಿದಿದೆ. ಕೂಡಲೇ ಫಲಿತಾಂಶ ಘೋಷಣೆ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಕಾರ್ಯಕರ್ತರು ಮತ ಎಣಿಕೆ ಕೇಂದ್ರಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ. ಹೀಗಾಗಿ ಪೊಲೀಸರು ಎಣಿಕೆ ಕೇಂದ್ರದ ಪ್ರವೇಶ ದ್ವಾರವನ್ನು ಕ್ಲೋಸ್ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಜಯನಗರ ಕ್ಷೇತ್ರದ ರಿಸಲ್ಟ್ ಇನ್ನೂ ಅನೌನ್ಸ್ ಆಗಿಲ್ಲ
ಚುನಾವಣಾ ಅಧಿಕಾರಿಗಳ ವಿರುದ್ಧ BTM ಲೇಔಟ್ ಹಾಗೂ ಜಯನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಧಿಕ್ಕಾರ, ಧಿಕ್ಕಾರ ಬಿಜೆಪಿಗೆ ಧಿಕ್ಕಾರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಅವರನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಸಿದ್ದರಾಮಯ್ಯ ಮಾತುಗಳು
ಕಾಂಗ್ರೆಸ್ ಪಕ್ಷಕ್ಕೆ ಈ ಸಲ ಎಲ್ಲ ಜಾತಿ-ಧರ್ಮದ ಮತಗಳೂ ಬಂದಿವೆ. ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಎಂಬುದು ಸಾಬೀತಾಗಿದೆ. ಈ ಐದು ವರ್ಷ ಅವಕಾಶ ಕೊಟ್ಟಿದ್ದಾರಲ್ಲ, ಆ ಅವಕಾಶವನ್ನು ಜನಪರವಾಗಿ ನಾವು ಉಪಯೋಗಿಸಬೇಕು. ಅಧಿಕಾರ ಇರೋದು ಮಜಾ ಮಾಡೋಕೆ ಅಲ್ಲ. ಜನ ಅವಕಾಶ ಕೊಟ್ಟಾಗ ನಾವು ಜನಪರ ಆಡಳಿತವನ್ನೇ ಕೊಡಬೇಕು. ಆಗ ಮಾತ್ರ ನಮ್ಮ ಮೇಲೆ ಜನರಿಗೆ ಗೌರವ ಬರುತ್ತದೆ. ಎಲ್ಲರೂ ಆ ದಿಕ್ಕಿನಲ್ಲೇ ಕೆಲಸ ಮಾಡಬೇಕು. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದೇವೆ. ಆ ಐದೂ ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ನಲ್ಲೇ ಒಪ್ಪಿಗೆ ಕೊಟ್ಟು, ಆದೇಶ ಹೊರಡಿಸುತ್ತೇವೆ. ಕಾಂಗ್ರೆಸ್ನ ಐದು ಭರವಸೆಗಳನ್ನು ಈಡೇರಿಸೋಕೆ ಆಗಲ್ಲ.
ಸಿದ್ದರಾಮಯ್ಯ ಮಾತುಗಳು
2013ರಲ್ಲಿ ಜನರು ನಮಗೆ ಬಹುಮತ ಕೊಟ್ಟಿದ್ದರು. ಆಗಲೂ ಕೂಡ ಐದು ವರ್ಷ ಉತ್ತಮ ಆಡಳಿತ ಮಾಡಿದೆವು. ಜನರ ನಿರೀಕ್ಷೆಗೆ ಅನುಗುಣವಾಗಿ ಆಡಳಿತ ಮಾಡಿದೆವು. ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸಿದೆವು. ನಮ್ಮ ಆಡಳಿತದ ಬಗ್ಗೆ ಗೌರವ ಬಂದಿತ್ತು. ಆದರೆ ಬಿಜೆಪಿ ಇದ್ದಾಗ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಹಾಗಾಗಿಯೇ ಈ ಸಲ ಜನರ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಕೊಡಲೇಬೇಕು ಎಂದು ನಿರ್ಧರಿಸಿದ್ದರು. ಬದಲಾವಣೆ ಬಯಸಿಯೇ ಕಾಂಗ್ರೆಸ್ಗೆ ಇನ್ನೊಂದು ಅವಕಾಶ ಕೊಟ್ಟಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ನಾವು ಜನರಿಗೆ ಕೊಟ್ಟ ಮಾತನ್ನು ಈಡೇರಿಸಬೇಕು. ಬಿಜೆಪಿಯವರು ಕರ್ನಾಟಕಕ್ಕೆ ಕಳಂಕ ತಂದಿದ್ದಾರೆ. ಅವರ ಭ್ರಷ್ಟಾಚಾರ, ಕೆಲಸ ಮಾಡದೆ ಇದ್ದಿದ್ದು, ದುರಾಡಳಿತದಿಂದ ಜನರು ರೋಸಿ ಹೋಗಿದ್ದರು. ಹೀಗಾಗಿಯೇ ಈ ಸಲ ಕಾಂಗ್ರೆಸ್ ಪರ ಗಾಳಿ ಬೀಸಿದೆ.
ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತು
’ಇವತ್ತಿನ ಗೆಲುವು ಬರೀ ಕಾಂಗ್ರೆಸ್ ಪಕ್ಷದ್ದಲ್ಲ, ಕಾರ್ಯಕರ್ತರದ್ದೂ ಅಲ್ಲ. ಇದು ಏಳುಕೋಟಿ ಕನ್ನಡಿಗರ ಗೆಲುವು. ಭಾರತೀಯ ಜನತಾ ಪಕ್ಷದವರು ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಾಟಕದಲ್ಲಿ ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿದೆ. ಆಗೆಲ್ಲ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಿಲ್ಲ. 2004, 2008, 2018 ಇರಬಹುದು. ಸಮ್ಮಿಶ್ರ ಸರ್ಕಾರ ಮಾಡಿದರೆ, ಒಬ್ಬ ಮುಖ್ಯಮಂತ್ರಿಗಿಂತ ಹೆಚ್ಚು ಜನ ಮುಖ್ಯಮಂತ್ರಿಗಳಾದರೆ, ಒಂದಕ್ಕಿಂತ ಹೆಚ್ಚು ಪಕ್ಷ ಸೇರಿ ಸರ್ಕಾರ ರಚನೆ ಮಾಡಿದರೆ ಸುಭದ್ರ ಸರ್ಕಾರ ರಚನೆಯಾಗದು. ಸುಭದ್ರ ಸರ್ಕಾರ ರಚನೆಯಾಗದೆ ಇದ್ದರೆ ಅಲ್ಲಿ ಜನರಿಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ ಇಲ್ಲ’